janadhvani

Kannada Online News Paper

ಮಸೀದಿಗಳು ಶಸ್ತ್ರಾಸ್ತ್ರ ಕೇಂದ್ರಗಳಲ್ಲ

ಈ ಜಗತ್ತಿನಲ್ಲಿ ಹಲವಾರು ಜಾತಿ – ಧರ್ಮಗಳಿವೆ. ಪ್ರತಿಯೊಂದು ಧರ್ಮಕ್ಕೂ ಅದರದೇ ಆದ ಪ್ರಾರ್ಥನಾ ಸ್ಥಳಗಳಿರುತ್ತವೆ. ಹಿಂದುಗಳಿಗೆ ದೇವಸ್ಥಾನ, ಮುಸ್ಲಿಮರಿಗೆ ಮಸೀದಿ, ಕ್ರೈಸ್ತರಿಗೆ ಚರ್ಚ್ ಇತ್ಯಾದಿ ಪ್ರಾರ್ಥನಾ ಸ್ಥಳಗಳಿವೆ. ಆಯಾ ಧರ್ಮದವರು ಅವರವರ ನಂಬಿಕೆ,ಆಚಾರಕ್ಕೆ ಅನುಸಾರವಾಗಿ ಪುಣ್ಯ ಸ್ಥಳವಾಗಿ ಪರಿಗಣಿಸುತ್ತಾರೆ. ಇದರಲ್ಲಿ ಯಾವ ಧರ್ಮದವರಿಗೂ ಹಸ್ತಕ್ಷೇಪ ಇಲ್ಲ. ಎಲ್ಲರೂ ಅವರವರ ಪ್ರಾರ್ಥನಾ ಸ್ಥಳವನ್ನು ಪುಣ್ಯಕ್ಷೇತ್ರವಾಗಿ ಪರಿಗಣಿಸುವುದರ ಜೊತೆಗೆ ಅನ್ಯಧರ್ಮದ ಪ್ರಾರ್ಥನಾ ಸ್ಥಳವನ್ನು ಗೌರವಿಸುತ್ತಾರೆ. ಇದು ಸೌಹಾರ್ದತೆಯ ಒಂದು ಭಾಗ.

ಸಾಮಾನ್ಯವಾಗಿ ರಾಜಕಾರಣಿಗಳು ತಮ್ಮ ಕ್ಷೇತ್ರದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಕ್ಣೇತ್ರದ ಜನತೆಯೊಂದಿಗೆ ಸಮಾಲೋಚಿಸಿ, ಆಯಾಯ ಕ್ಷೆತ್ರದ ಅಭಿವೃಧ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡುವ ಭರವಸೆಯನ್ನು ನೀಡುತ್ತಾರೆ. ಇದು ಅವರಿಗೆ ಓಟ್ ಹಾಕಿರಲಿ, ಹಾಕದೇ ಇರಲಿ, ಎಲ್ಲರಿಗೂ ಒಂದೇ ಸಮಾನ. ಆದರೆ ಇಲ್ಲೊಬ್ಬರು ಶಾಸಕರು ಒಂದು ನಿರ್ದಿಷ್ಟ ಧರ್ಮದ (ಮುಸ್ಲಿಂ) ಜನರು ತನಗೆ ಹೆಚ್ಚಿನ ಪ್ರಮಾಣದಲ್ಲಿ ಓಟ್ ಹಾಕಿಲ್ಲ, ಹಾಗಾಗಿ ನನ್ನೊಂದಿಗೆ ಅನುದಾನ ಕೇಳಲು ಬರಬೇಡಿ, ನಿಮ್ಮನ್ನು ಎಲ್ಲಿ ಇಡಬೇಕು ಅಲ್ಲಿಯೇ ಇಡುತ್ತೇವೆ ಎಂದು ಸಭಾ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡುವ ಮೂಲಕ ತಮ್ಮ ನೀಚ ಮನಸ್ಸನ್ನು ಜನತೆಗೆ ತೋರಿಸಿ ಕೊಟ್ಟಿದ್ದಾರೆ.

ಇಷ್ಟಕ್ಕೆ ಸುಮ್ಮನೆ ಇರುತ್ತಿದ್ದರೆ ಅದು ಚುಣಾವಣಾ ವಿಷಯಕ್ಕೆ ಸಂಬಂಧಪಟ್ಟದ್ದು ಎಂದು ಒಂದು ಮಟ್ಟಕ್ಕೆ ಅಂದುಕೊಳ್ಳಬಹುದಿತ್ತು, ಆದರೆ ಮುಂದುವರಿಯುತ್ತಾ , ಮಸೀದಿಗಳಲ್ಲಿ ಶಸ್ತ್ರಾಸ್ತ್ರ ಸಂಗ್ರಹಿಸಿಡಲಾಗುತ್ತದೆ ಎಂಬ ವಿವಾದಾತ್ಮಕ ಹೇಳಿಕೆಯನ್ನೂ ನೀಡುತ್ತಾರೆ.

ಸನ್ಮಾನ್ಯ ಶಾಸಕರಾದ ರೇಣುಕಾಚಾರ್ಯರವರೇ ನಿಮ್ಮ ಗಮನದಲ್ಲಿರಲಿ, ಮಸೀದಿ ಆಗಿರಲಿ, ದೇವಸ್ಥಾನ ವಾಗಿರಲಿ,ಚರ್ಚ್ ಆಗಿರಲಿ ಹಾಗೂ ಇನ್ನಿತರ ಯಾವುದೇ ಪ್ರಾರ್ಥನಾ ಸ್ಥಳಗಳಾಗಿರಲಿ, ಅವೆಲ್ಲವೂ ನಮ್ಮೆಲ್ಲರನ್ನು ಸೃಷ್ಟಿಸಿದ ಸೃಷ್ಟಿಕರ್ತನ ಆರಾಧನೆಗೆ ಸೀಮಿತವಾದ ಸ್ಥಳವೇ ಹೊರತು, ಶಸ್ತ್ರಾಸ್ತ್ರ ಸಂಗ್ರಹಣಾ ಕೇಂದ್ರಗಳಲ್ಲ.

ಒಂದು ವೇಳೆ ನೀವು ಹೇಳಿದ ಹಾಗೆ ಅದು ಶಸ್ತ್ರಾಸ್ತ್ರ ಕೇಂದ್ರವಾಗಿರುತ್ತಿದ್ದರೆ, ಇಂದು ಜಗತ್ತಿನ ಎಲ್ಲಿಯೂ ಶಾಂತಿ ನೆಲೆಸುತ್ತಿರಲಿಲ್ಲ. ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿರಿಸಿಕೊಂಡು, ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು ಈ ರೀತಿ ಹೇಳಿಕೆ ನೀಡಬಾರದು. ದಿನದ 5 ಹೊತ್ತು ಆಝಾನ್ ಕರೆದು ನಮಾಝಿಗಾಗಿ ಮಸೀದಿಯ ಬಾಗಿಲುಗಳು ನಿಮ್ಮ ಮುಂದೆ ತೆರೆದಿರುತ್ತವೆ. ಬೇಕಾಗಿದ್ದಲ್ಲಿ ನೀವು ಬಂದು ಶಸ್ತ್ರಾಸ್ತ್ರ ಇದೆಯೇ ಎಂದು ಪರೀಕ್ಷಿಸಿ. ಶಸ್ತ್ರಾಸ್ತ್ರ ಬಿಡಿ, ನಿಮಗೆ ಒಂದು ಅಸಂಬದ್ಧ ನೋಟ ಕೂಡ ಅಲ್ಲಿ ಸಿಗಲಿಕ್ಕಿಲ್ಲ. ಯಾಕೆಂದರೆ ಅದು ಪವಿತ್ರ ಸ್ಥಳ. ಎಷ್ಟೇ ದೊಡ್ಡ ಕ್ರೂರ ವ್ಯಕ್ತಿಯಾಗಿದ್ದರೂ ಅವನು ಮಸೀದಿಯನ್ನು ಗೌರವಿಸುತ್ತಾನೆ. ಯಾಕೆಂದರೆ ಅವನಿಗೆ ಅದು ಪುಣ್ಯ ಸ್ಥಳ ಎಂಬೂದರ ಅರಿವಿದೆ.

ಇನ್ನು ನಿಮಗೆ ಓಟ್ ಹಾಕದ ನಿಮ್ಮ ಕ್ಷೇತ್ರದ ಮುಸ್ಲಿಂ ಸಮುದಾಯದವರಿಗೆ ಅನುದಾನ ಕೊಡಲ್ಲ, ಮುಸ್ಲಿಂಮರನ್ನು ಎಲ್ಲಿ ಇಡಬೇಕೋ ಅಲ್ಲಿಯೇ ಇಡುತ್ತೇವೆ ಎಂದು ಹೇಳಿಕೆ ನೀಡಿದ್ದೀರಿ. ನನಗೆ ನಿಮ್ಮಲ್ಲಿ ಹೇಳಲಿಕ್ಕಿರುವುದೇನೆಂದರೆ, ನಿಮ್ಮ ಕೋಮುಭಾವನೆಯಿಂದ ನೀವು ದ್ವೇಷಿಸುವ ಸಮುದಾಯವರಿಗೆ ಅನುದಾನ ನೀಡುವುದು ಬೇಡ. ಆದರೆ ನಿಮ್ಮ ಸಮುದಾಯ ಅಂದರೆ ಹಿಂದೂ ಸಮುದಾಯದಲ್ಲಿ ಎಷ್ಟೋ ಬಡ ಕುಟುಂಬಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ಇಂದು ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಪರದಾಡುತ್ತಿದೆ.

ಎಷ್ಟೋ ಹಿಂದೂ ಸಹೋದರಿಯರು ಮದುವೆಯ ಹೊಸ್ತಿಲಿಗೆ ಬಂದಿದ್ದರೂ, ಬಡತನದ ಕಾರಣದಿಂದ ಮದುವೆಯಾಗದೆ ತಮ್ಮ ತವರು ಮನೆಯಲ್ಲೆ ಉಳಿದಿದ್ದಾರೆ. ಎಷ್ಟೋ ಹಿಂದೂ ಸಮುದಾಯದ ಕುಟುಂಬಗಳು ತಮ್ಮ ಮನೆಗೆ ಆಧಾರ ಸ್ತಂಭವಾಗಿದ್ದ ಮನೆಯ ಯಜಮಾನನ ಅಸೌಖ್ಯದ ಕಾರಣದಿಂದ ಚಿಕಿತ್ಸೆಯ ಮೊತ್ತವನ್ನು ಭರಿಸಲಾಗದೆ ಧಾನಿಗಳ ಸಹಾಯವನ್ನು ಎದುರು ನೋಡುತ್ತಿದೆ.

ಹೀಗೆ ಹತ್ತಾರು ಸಮಸ್ಯೆಗಳಿರುವ ಎಷ್ಟೋ ಜನರು ನಿಮ್ಮ ಸಮುದಾಯದಲ್ಲೇ ಇದ್ದಾರೆ. ಅವರಿಗೆ ನೀಡಿ ನಿಮ್ಮ ಅನುದಾನ. ಆದರೆ ನಿಮಗೆ ಇದೆಲ್ಲ ಗೋಚರಿಸುವುದೇ ಇಲ್ಲ. ಅತ್ತ ಕಡೆ ಗಮನ ಹರಿಸಿಯೂ ನೀವು ನೋಡಲ್ಲ. ಯಾರೋ ಪಾಪ ಉದಾರ ಮನಸ್ಸಿನ ದಾನಿಗಳು, ಸಮಾಜ ಸುಧಾರಕರು ಹಾಗೂ ಸರ್ವ ಧರ್ಮ ಸಮನ್ವಯತೆಯನ್ನು ಕಾಪಾಡಲು ಬಯಸುವವರು ಅವರ ಸಹಾಯಕ್ಕೆ ನಿಲ್ಲುತ್ತಾರೆಯೇ ಹೊರತು ನಿಮ್ಮಂತಹ ನೀಚ ಮನಸ್ಸುಗಳಲ್ಲ.

ಮಾನ್ಯ ಶಾಸಕ ರಾದ ರೇಣುಕಾಚಾರ್ಯರವರು ಯಾವ ಉದ್ದೇಶವನ್ನಿಟ್ಟುಕೊಂಡು ಈ ರೀತಿ ಹೇಳಿಕೆ ನೀಡುತ್ತಾರೆಂಬೂದು ಸ್ಪಷ್ಟವಾಗಿ ನಮಗೆ ಗೋಚರಿಸುತ್ತದೆ. ನೀವುಗಳು ಆಡುವ ಮಾತು, ನೀವುಗಳು ನೀಡುವ ಹೇಳಿಕೆ ಎಲ್ಲವೂ ಬರೀ ಮುಗ್ದ ಹಿಂದೂ ಸಹೋದರರ ಮತಗಳಿಕೆಗೆ ಸೀಮಿತವಾಗಿದೆಯೇ ಹೊರತು, ಅವರ ಯಾವುದೇ ಏಳಿಗೆಗಲ್ಲ.

ಕೊನೆಯದಾಗಿ ಹೇಳಲಿಕ್ಕಿರುವುದೇನೆಂದರೆ, ನಮಗೆ ರಾಜಕೀಯ ಇಲ್ಲ. ಒಂದು ನಿರ್ದಿಷ್ಟ ಪಕ್ಷಕ್ಕೆ ಮಾತ್ರ ಬೆಂಬಲ ಅಂತನೂ ಇಲ್ಲ. ಸಮಾಜದ ಏಳಿಗೆಗೆ, ಸಮಾಜದ ಅಭಿವೃದ್ಧಿಗೆ ಯಾರು ಸಹಕಾರಿಯಾಗಿರುತ್ತಾರೋ
ಅದು ಕಾಂಗ್ರೆಸ್ ಆಗಿರಲಿ, ಬಿ.ಜೆ.ಪಿ.ಆಗಿರಲಿ, ಜನತಾದಳ ಆಗಿರಲಿ , ಇನ್ನಿತರ ಯಾವುದೇ ಪಕ್ಷವಾಗಿರಲಿ , ಅವರನ್ನು ನಾವು ಬೆಂಬಲಿಸುತ್ತೇವೆ. ಆದರೆ ರಾಜಕೀಯಕ್ಕೂ ಧರ್ಮಕ್ಕೂ ಸಂಬಂದ ಕಲ್ಪಿಸುವ ಕಾರ್ಯಕ್ಕೆ ಮುಂದಾಗಬೇಡಿ.

ಹಸೈನಾರ್ ಕಾಟಿಪಳ್ಳ

error: Content is protected !! Not allowed copy content from janadhvani.com