janadhvani

Kannada Online News Paper

ಮುಂದಿನ ವರ್ಷದಿಂದ NEET ಮಾದರಿಯಲ್ಲಿ ಒಂದೇ ದಿನ CET ಪರೀಕ್ಷೆ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯನ್ನು ಮುಂದಿನ ವರ್ಷದಿಂದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಮಾದರಿಯಲ್ಲಿ ಒಂದೇ ದಿನ ನಡೆಸುವುದಾಗಿ ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್‌. ಅಶ್ವತ್ಥನಾರಾಯಣ ಅವರು ಮಾಹಿತಿ ನೀಡಿದ್ದಾರೆ.

ಸದ್ಯ ಸಿಇಟಿ ಎರಡು ದಿನ ನಾಲ್ಕು ಭಾಗಗಳಾಗಿ ವಿಂಗಡಿಸಿ ಪರೀಕ್ಷೆ ನಡೆಸಲಾಗುತ್ತಿತ್ತು. ಇದರಿಂದ ವಿದ್ಯಾರ್ಥಿಗಳಿಗೂ ಪರೀಕ್ಷೆ ನಡೆಸುವವರಿಗೂ ವೆಚ್ಚ , ಸಮಯ ಪೋಲು. ಹೀಗಾಗಿ 2020-21ರಿಂದ ನೀಟ್‌ ಮಾದರಿಯಲ್ಲಿ ಒಂದೇ ದಿನ ಪರೀಕ್ಷೆ ನಡೆಸಲಾಗುತ್ತದೆ. ಗಡಿನಾಡು ಮತ್ತು ಹೊರನಾಡು ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ಎಂದಿನಂತೆ ಇರಲಿದೆ. ನೀಟ್‌ ಮಾದರಿಯಲ್ಲಿ ಪರೀಕ್ಷೆ ನಡೆಸಲು ಈ ಹಿಂದೆಯೂ ಪ್ರಾಧಿಕಾರ ಯೋಚನೆ ನಡೆಸಿತ್ತು. ಆದರೆ ಕೆಲವು ಅಧಿಕಾರಿಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಸರಕಾರವೂ ಒಪ್ಪಿಗೆ ನೀಡಿರಲಿಲ್ಲ.

ಸಪ್ಲಿಮೆಂಟರಿ ವಿದ್ಯಾರ್ಥಿಗಳಿಗೂ ಅವಕಾಶ
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡು ತ್ತಿರುವ ಬಹುತೇಕ ವಿದ್ಯಾರ್ಥಿಗಳು ಸಿಇಟಿ ಹಾಗೂ ನೀಟ್‌ ಬರೆಯುತ್ತಾರೆ. ಆದರೆ ಫ‌ಲಿತಾಂಶದಲ್ಲಿ ಫೇಲ್‌ ಆಗಿ, ನೀಟ್‌ ಅಥವಾ ಸಿಇಟಿಯಲ್ಲಿ ಉತ್ತಮ ರ್‍ಯಾಂಕಿಂಗ್‌ ಬಂದಿದ್ದರೂ ವೈದ್ಯಕೀಯ, ದಂತವೈದ್ಯಕೀಯ ಕೋರ್ಸ್‌ಗೆ ಸೇರಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಅವರು ಪೂರಕ ಪರೀಕ್ಷೆಯಲ್ಲಿ ಪಾಸ್‌ ಆದರೂ ಎಂಜಿನಿಯರಿಂಗ್‌ ಸೇರಲು ಮಾತ್ರ ಅವಕಾಶವಿತ್ತು. ಆದರೆ ಪ್ರಸಕ್ತ ಸಾಲಿನಿಂದ ಪೂರಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್‌ ಸೇರಲು ಅವಕಾಶ ಇದೆ. ಅವರಿಗೆ ನೀಟ್‌ ರ್‍ಯಾಂಕ್‌ ಆಧಾರದಲ್ಲಿ ಸೀಟು ಲಭ್ಯವಾಗಲಿದೆ.

ನೇಮಕಾತಿ ಪರೀಕ್ಷೆಗೆ ಪ್ರತ್ಯೇಕ ಕಚೇರಿ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವೃತ್ತಿಪರ ಕೋರ್ಸ್‌ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯ ಜತೆಗೆ ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದರಿಂದ ಪ್ರಾಧಿಕಾರದ ಅಧಿಕಾರಿ ಮತ್ತು ಸಿಬಂದಿಗೆ ಒತ್ತಡ ಹೆಚ್ಚಿರುತ್ತದೆ. ಈ ಒತ್ತಡವನ್ನು ಕಡಿಮೆ ಮಾಡಿ, ಸಿಇಟಿಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಇನ್ನೊಂದು ಕಚೇರಿಯನ್ನು ಉನ್ನತ ಶಿಕ್ಷಣ ಇಲಾಖೆಯಲ್ಲಿ ತೆರೆಯಲಾಗುತ್ತದೆ. ಇಲ್ಲಿ ವಿವಿಧ ಇಲಾಖೆಗಳ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮಾತ್ರ ನಡೆಸಲಾಗುತ್ತದೆ. ಉಳಿದಂತೆ ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ಸಿಇಟಿ ಮಾತ್ರ ನಡೆಯಲಿದೆ ಎಂದು ಸಚಿವರು ಮಾಹಿತಿ ನೀಡಿದರು.

ಗಡಿನಾಡು ವ್ಯಾಪ್ತಿ ವಿಸ್ತರಣೆ
ನೆರೆಯ ರಾಜ್ಯದ ಕನ್ನಡಿಗರ ಅನು ಕೂಲಕ್ಕಾಗಿ ಪ್ರಸಕ್ತ ಸಾಲಿನಿಂದ ಗಡಿನಾಡು ಕೋಟಾದ ವ್ಯಾಪ್ತಿ ವಿಸ್ತರಣೆಯಾಗಲಿದೆ. ಈಗಾಗಲೇ ಕಾಸರಗೋಡು ಮತ್ತು ಮೆಹಬೂಬ್‌ ನಗರ ಜಿಲ್ಲೆಯಲ್ಲಿ ಕೆಲ ಪ್ರದೇಶ ಗುರುತಿಸಲಾಗಿದೆ. ಗ್ರಾ.ಪಂ., ನಗರ ಹಾಗೂ ಪ.ಪಂ. ವ್ಯಾಪ್ತಿಯಲ್ಲಿ ಶೇ. 40ರಷ್ಟು ಕನ್ನಡಿಗರು ಇರುವ ಪ್ರದೇಶದ ವಿದ್ಯಾರ್ಥಿಗಳಿಗೆ ಈ ವ್ಯವಸ್ಥೆ ಅನ್ವಯ ವಾಗಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಸ್ತಾವ ಪರಿಶೀಲಿಸಿ ಪ್ರಸಕ್ತ ಸಾಲಿನಿಂದಲೇ ಜಾರಿಗೆ ಬರುವಂತೆ ಕ್ರಮ ತೆಗೆದುಕೊಂಡಿದ್ದೇವೆ. ಪ್ರದೇಶಗಳ ಗುರುತಿಸುವಿಕೆಯು ಆದಷ್ಟು ಬೇಗ ನಡೆಯಲಿದೆ ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದರು.

error: Content is protected !! Not allowed copy content from janadhvani.com