janadhvani

Kannada Online News Paper

ಮಧ್ಯಪ್ರಾಚ್ಯದಲ್ಲಿ ಟ್ರಂಪ್‌ನ ಶಾಂತಿ ಯೋಜನೆ-ತಿರಸ್ಕರಿಸಿದ ಅರಬ್ ಜಗತ್ತು

ಜೆರುಸಲೇಂ: ಮಧ್ಯಪ್ರಾಚ್ಯದಲ್ಲಿ ಟ್ರಂಪ್ ಆಡಳಿತದ ಹೊಸ ಶಾಂತಿ ಯೋಜನೆಯೊಂದಿಗೆ ಸಹಕರಿಸುವುದಿಲ್ಲ ಎಂಬ ಪ್ಯಾಲಸ್ತೀನಿಯನ್ ನಿಲುವಿಗೆ ಅರಬ್ ಜಗತ್ತು ಸಹಮತ ಸೂಚಿಸಿದೆ. ಪ್ಯಾಲಸ್ತೀನಿಯನ್ ಸಮಾಜವನ್ನು ಇಂತಹ ಆಧಾರರಹಿತ ಯೋಜನೆಗಳಿಂದ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸಾಧ್ಯವಿಲ್ಲ ಎಂದು ಅರಬ್ ಜಗತ್ತು ಸ್ಪಷ್ಟಪಡಿಸಿದೆ. ಆದರೆ ಟ್ರಂಪ್ ಆಡಳಿತವು ಮೈತ್ರಿ ಮಾಡಿಕೊಂಡಿರುವ ಅರಬ್ ದೇಶಗಳಲ್ಲಿ ಹೊಂದಾಣಿಕೆ ಉಂಟುಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.

ಟ್ರಂಪ್‌ರ ಹೊಸ ಶಾಂತಿ ಯೋಜನೆಯನ್ನು ತಿರಸ್ಕರಿಸುವಂತೆ ಪ್ಯಾಲಸ್ತೀನಿಯನ್ ಪ್ರಧಾನಿ ಮುಹಮ್ಮದ್ ಸ್ತಯ್ಯಹ್ ಜಗತ್ತಿಗೆ ಕರೆ ನೀಡಿದ್ದಾರೆ. ಪಶ್ಚಿಮ ಏಷ್ಯಾದ ಸಮಸ್ಯೆಯ ರಹಸ್ಯವನ್ನು ಒಳಗೊಳ್ಳದ ಯೋಜನೆಗಳ ಮೂಲಕ ರಾಜಕೀಯ ಸಮಸ್ಯೆಗಳನ್ನು ಪರಿಹರಿಸಲಾಗುವುದಿಲ್ಲ ಎಂದು ಅವರು ಹೇಳಿದರು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರನ್ನು ರಕ್ಷಿಸುವ ಸಲುವಾಗಿ ಈ ಯೋಜನೆಗೆ ಅಮೆರಿಕ ಮುಂದಾಗಿದೆ ಎಂದು ಪ್ಯಾಲಸ್ತೀನಿಯನ್ ನಾಯಕ ಆರೋಪಿಸಿದ್ದಾರೆ.

ಟ್ರಂಪ್‌ರ ಶಾಂತಿ ಯೋಜನೆಯು ಪ್ಯಾಲಸ್ತೀನಿಯನ್ ಪ್ರಾಂತ್ಯಗಳ ಮೇಲೆ ಇಸ್ರೇಲ್‌ನ ಸಾರ್ವಭೌಮತ್ವವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಎಂಬ ಆರೋಪ ಬಲವಾಗಿದೆ. ಇತ್ತೀಚೆಗೆ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತುಕತೆ ನಡೆಸಿದ ನಂತರ ಟ್ರಂಪ್ ಈ ಯೋಜನೆಯನ್ನು ಪ್ರಕಟಿಸಿದ್ದಾರೆ.

ಅಂತರ್‌ರಾಷ್ಟ್ರೀಯ ಮಾನದಂಡಗಳನ್ನು ಕಡೆಗಣಿಸಿ ಟ್ರಂಪ್ ಆಡಳಿತ ಆವಿಷ್ಕಾರಗೊಳಿಸುವ ಯೋಜನೆಯನ್ನು ತಿರಸ್ಕರಿಸುಂತೆ ಪ್ಯಾಲಸ್ತೀನಿಯನ್ ಸರಕಾರ ವಿಶ್ವ ನಾಯಕರಿಗೆ ಕರೆ ನೀಡಿದೆ. ಈ ವಿಷಯದಲ್ಲಿ ಅರಬ್ ವಲಯದ ಬೆಂಬಲ ತಮಗಿದೆ ಎಂದು ಅದು ವ್ಯಕ್ತಪಡಿಸಿದೆ. ಅರಬ್ ಲೀಗ್ ಶೀಘ್ರದಲ್ಲೇ ತನ್ನ ನಿಲುವನ್ನು ವ್ಯಕ್ತಪಡಿಸಲಿದೆ.

ಟೆಲ್ ಅವೀವ್ ನಿಂದ ತನ್ನ ಕಾರ್ಯಾಲಯವನ್ನು ಜೆರುಸಲೇಂಗೆ ಸ್ಥಾನಾಂತರಗೊಳಿಸಿರುವ ನಡೆ ಸಹಿತ ಟ್ರಂಪ್ ಜಾರಿಗೆ ತಂದ ಎಲ್ಲಾ ಯೋಜನೆಗಳಲ್ಲೂ ಇಸ್ರೇಲ್‌ನ ಹಿತಾಸಕ್ತಿ ಇದೆ. ಆ ಕಾರಣದಿಂದಾಗಿ ಅಮೆರಿಕದೊಂದಿಗೆ ಶಾಂತಿಗೆ ಸಂಬಂಧಿಸಿದ ಯಾವುದೇ ಚರ್ಚೆ ಅಗತ್ಯವಿಲ್ಲ ಎಂಬುದು ಫೆಲಸ್ತೀನ್‌ನ ನಿಲುವಾಗಿದೆ. ಇಂಪೀಚ್ಮೆಂಟ್ ಪ್ರಕ್ರಿಯೆ ಮುಗಿದ ತಕ್ಷಣ ಟ್ರಂಪ್ ಅರಬ್ ದೇಶಗಳಲ್ಲಿ ಶಾಂತಿ ಯೋಜನೆ ಕುರಿತು ಆಶಯ ವಿನಿಮಯ ನಡೆಸಲಿದ್ದಾರೆ ಎಂದು ವರದಿಯಾಗಿದೆ.

error: Content is protected !! Not allowed copy content from janadhvani.com