janadhvani

Kannada Online News Paper

ಗುಜರಾತ್ ಕೋಮುಗಲಭೆ ಪ್ರಕರಣ: 14 ಆರೋಪಿಗಳಿಗೆ ಸುಪ್ರೀಂಕೋರ್ಟ್ ಜಾಮೀನು

ನವದೆಹಲಿ,ಜ. 28: ಹದಿನೇಳು ವರ್ಷಗಳ ಹಿಂದಿನ ಗುಜರಾತ್ ಕೋಮುಗಲಭೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 14 ಜನರಿಗೆ ಸುಪ್ರೀಂ ಕೋರ್ಟ್ ಇಂದು ಮಂಗಳವಾರ ಜಾಮೀನು ನೀಡಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಅವರು ಸಲ್ಲಿಸಿರುವ ಮನವಿಗಳ ಅರ್ಜಿ ಇತ್ಯರ್ಥ ಆಗುವವರೆಗೂ ಈ 14 ಮಂದಿಗೆ ಜಾಮೀನು ನೀಡಲಾಗಿದೆ. ಆದರೆ, ಜಾಮೀನು ನೀಡಲು ಈ ದೋಷಿಗಳಿಗೆ ಕೋರ್ಟ್ ಕೆಲ ಷರತ್ತುಗಳನ್ನೂ ವಿಧಿಸಿದೆ.

ಸರ್ವೋಚ್ಚ ನ್ಯಾಯಪೀಠ ವಿಧಿಸಿರುವ ಷರುತ್ತುಗಳ ಪ್ರಕಾರ, ಮುಂದಿನ ನಿರ್ಧಾರದವರೆಗೂ 14 ಜನರು ಗುಜರಾತ್ಗೆ ಕಾಲಿಡುವಂತಿಲ್ಲ; ಮಧ್ಯಪ್ರದೇಶದ ಇಂದೋರ್ ಮತ್ತು ಜಬಲ್ಪುರ್ನಲ್ಲೇ ಇರಬೇಕು; ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಬೇಕು.

ಏನಿದು ಪ್ರಕರಣ?

2002ರಲ್ಲಿ ಗೋಧ್ರಾದ ರೈಲು ಬೆಂಕಿ ದುರಂತ ಘಟನೆ ಸಂಭವಿಸಿದ ಬೆನ್ನಲ್ಲೇ ಗುಜರಾತ್ನಾದ್ಯಂತ ವ್ಯಾಪಕ ಕೋಮುಗಲಭೆಗಳು ಆದವು. ಗೋಧ್ರಾ ಘಟನೆಗೆ ಪ್ರತೀಕಾರವೆಂಬಂತೆ ಹಿಂದೂಗಳ ಗುಂಪುಗಳು ಮುಸ್ಲಿಮರನ್ನು ಗುರಿಯಾಗಿಸಿ ಹಿಂಸಾಚಾರ ನಡೆಸಿದವು. ಅಂಥ ಒಂದು ಘಟನೆ ಸರ್ದಾರ್ಪುರ ಗ್ರಾಮದಲ್ಲೂ ನಡೆದಿತ್ತು. ಈ ಗ್ರಾಮದಲ್ಲಿ ಅಲ್ಪಸಂಖ್ಯಾತ ಸಮುದಾಯ ವಾಸವಿದ್ದ ಶೇಖ್ ವಾಸ್ ರಸ್ತೆಯನ್ನು ನೂರಾರು ಜನರ ಗುಂಪು ಸುತ್ತುವರಿದಿತ್ತು. ಭಯಗೊಂಡ ಅಲ್ಪಸಂಖ್ಯಾತ ಸಮುದಾಯದವರು ಇಬ್ರಾಹಿಂ ಶೇಖ್ ಎಂಬುವವರ ಮನೆಯಲ್ಲಿ ಅಡಗಿಕೊಂಡಿದ್ದರು. ಆಗ ಉದ್ರಿಕ್ತ ಜನರು ಆ ಮನೆಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದಾರೆ. ಈ ದುಷ್ಕೃತ್ಯದಲ್ಲಿ 22 ಮಹಿಳೆಯರು ಸೇರಿ ಒಟ್ಟು 33 ಜನರು ಸುಟ್ಟು ಕರಕಲಾಗಿದ್ದರು.

ಈ ದುರಂತ ಘಟನೆಯ ಪ್ರಕರಣದಲ್ಲಿ 14 ಮಂದಿ ತಪ್ಪಿತಸ್ಥರೆಂಬುದು ಸಾಬೀತಾಗಿದೆ. ಇವರೆಲ್ಲರಿಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈಗ ಇವರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಹೋಗಿದ್ಧಾರೆ. ಈ ಮೇಲ್ಮನವಿ ಅರ್ಜಿಯ ವಿಚಾರಣೆ ಮುಗಿಯುವವರೆಗೂ ಇವರಿಗೆ ಜಾಮೀನು ಕೂಡ ಸಿಕ್ಕಿದೆ.

error: Content is protected !! Not allowed copy content from janadhvani.com