janadhvani

Kannada Online News Paper

ಗಣರಾಜ್ಯೋತ್ಸವ ದಿನದಲ್ಲೇ ಅಸ್ಸಾಂನ 4 ಕಡೆಗಳಲ್ಲಿ ಸ್ಫೋಟ

ಗುವಾಹಾಟಿ: ಗಣರಾಜ್ಯೋತ್ಸವ ಸಮಾರಂಭದ ದಿನ ಅಸ್ಸಾಂನಲ್ಲಿ ಒಟ್ಟು ನಾಲ್ಕು ಸ್ಫೋಟಗಳು ಸಂಭವಿಸಿವೆ. ಆದರೆ, ಅದೃಷ್ಟವಶಾತ್ ಈ ಬ್ಲಾಸ್ಟ್ ಗಳಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರುವ ಕುರಿತು ವರದಿಯಾಗಿಲ್ಲ. ಈ ಬ್ಲಾಸ್ಟ್ ಗಳಲ್ಲಿ ಮೊದಲ ಮೂರು ಸ್ಫೋಟಗಳು ದಿಬ್ರುಗಡ್ ಜಿಲ್ಲೆಯಲ್ಲಿ ಸಂಭವಿಸಿದ್ದರೆ, ನಾಲ್ಕನೇ ಬ್ಲಾಸ್ಟ್ ಚರಾಯಿದೇವಿಯಲ್ಲಿ ಸಂಭವಿಸಿದೆ.

ಸ್ಫೋಟಗಳ ಕುರಿತು ಪ್ರತಿಕ್ರಿಯೆ ನೀಡಿರುವ ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ್ ಸೋನೋವಾಲ್ “ಪವಿತ್ರ ದಿನದ ಸಂಧರ್ಭದಲ್ಲಿ ಭಯದ ವಾತಾವರಣ ಸೃಷ್ಟಿಸಲು ನಡೆಸಲಾದ ಹೇಡಿತನದ ಕೃತ್ಯಗಳು” ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸರ್ವಾನಂದ್ ಸೋನೋವಾಲ್, “ಅಸ್ಸಾಂನ ಕೆಲ ಪ್ರದೇಶಗಳಲ್ಲಿ ನಡೆದ ಸ್ಫೋಟದ ಘಟನೆ ಖಂಡನಾರ್ಹವಾಗಿವೆ . ಜನರಿಂದ ತಿರಸ್ಕರಿಸಲ್ಪಟ್ಟ ಬಳಿಕ ಹತಾಶೆಗೊಂಡ ಭಯೋತ್ಪಾದಕ ಸಂಘಟನೆಗಳು ತಮ್ಮ ಕೋಪ ತೀರಿಸಿಕೊಳ್ಳಲು ಪವಿತ್ರ ದಿನದ ಸಂದರ್ಭದಲ್ಲಿ ನಡೆಸಿರುವ ಹೇಡಿತನದ ಕೃತ್ಯ ಇದಾಗಿದೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತಮ್ಮ ಸರ್ಕಾರ ಬದ್ಧವಾಗಿದೆ” ಎಂದು ಹೇಳಿದ್ದಾರೆ.

ಅಸ್ಸಾಂನಲ್ಲಿ ನಿಷೇಧಕ್ಕೆ ಒಳಗಾಗಿರುವ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ(ಸ್ವತಂತ್ರ)(ಉಲ್ಫಾ-1), ರವಿವಾರ ಮಹಾ ಮುಷ್ಕರ ನಡೆಸಲು ನಾಗರಿಕರಿಗೆ ಕರೆ ನೀಡಿ, ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳದಂತೆ ಬೆದರಿಕೆಯೋಡ್ಡಿತ್ತು.

error: Content is protected !! Not allowed copy content from janadhvani.com