janadhvani

Kannada Online News Paper

ಸಂಪುಟ ವಿಸ್ತರಣೆ ಕಗ್ಗಂಟು: ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ- ಮಾಧುಸ್ವಾಮಿ

ತುಮಕೂರು (ಜ.26): ಸಂಪುಟ ವಿಸ್ತರಣೆ ಕಗ್ಗಂಟ್ಟಾಗಿರುವ ಹಿನ್ನೆಲೆ ಹೊಸಬರಿಗೆ ಸ್ಥಾನ ನೀಡಬೇಕು ಎಂದರೇ, ಹಿರಿಯ ನಾಯಕರು ಪದತ್ಯಾಗ ಮಾಡಬೇಕಾಗಿರುವುದು ಅನಿವಾರ್ಯ ಎಂಬ ಮಾತು ಪಕ್ಷದಲ್ಲಿ ಕೇಳಿ ಬಂದಿದೆ. ಸರ್ಕಾರ ರಚನೆಗೆ ಸಹಾಯ ಮಾಡಿದ ಶಾಸಕರಿಗೆ ಮಣೆ ಹಾಕಬೇಕು ಎಂದರೇ ಈ ಸೂತ್ರ ಅಳವಡಿಕೆ ಸೂಕ್ತ ಎಂಬುದು ಕೆಲ ನಾಯಕರ ಮಾತಾಗಿದೆ. ಇದೇ ಮಾತು ಹಲವು ಹಿರಿಯ ನಾಯಕರ ನಡುವಿನ ಗುದ್ದಾಟಕ್ಕೂ ಕಾರಣವಾಗಿದೆ.

ಇನ್ನು ಈ ಕುರಿತು ಮಾತನಾಡಿರುವ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ, ಸರ್ಕಾರ ಉಳಿಸಲು ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧವಾಗಿರುವುದಾಗಿ ಬಹಿರಂಗ ಪಡಿಸಿದ್ದಾರೆ.

ಪಕ್ಷ ಸಚಿವ ಸ್ಥಾನವನ್ನು ಕೇಳಿದರೆ ಖುಷಿಯಿಂದ ಬಿಟ್ಟುಕೊಡುತ್ತೇನೆ. ರಾಜ್ಯಕ್ಕೆ ಒಳ್ಳೆಯ ಸರ್ಕಾರ ಇರಲಿ ಎನ್ನುವ ಅಪೇಕ್ಷೆಯಿದೆ. ಈ ಕಾರಣಕ್ಕೆ ಈ ತ್ಯಾಗಕ್ಕೆ ಸಿದ್ಧ ಎಂದಿದ್ದಾರೆ.

ಸಚಿವ ಸ್ಥಾನ ತ್ಯಾಗದ ಕುರಿತು ಇಂದು ವಿಜಯಪುರದಲ್ಲಿ ಮಾತನಾಡಿರುವ ಬಸನಗೌಡ ಪಾಟೀಲ ಯತ್ನಾಳ್​, ಹೊಸ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನದ ಭರವಸೆ ನೀಡಲಾಗಿದೆ. ಸಿಎಂ ಈ ಮಾತು ಉಳಿಸಿಕೊಳ್ಳುವ ವಿಶ್ವಾಸವಿದೆ. ಇದಕ್ಕಾಗಿ ಪಕ್ಷದಲ್ಲಿ ಈಗಾಗಲೇ ಹುದ್ದೆಯ ಲಾಭಾ ಅನುಭವಿಸಿದವರು ಪದತ್ಯಾಗಕ್ಕೆ ಮುಂದಾಬೇಕು ಎಂದು ಆಗ್ರಹಿಸಿದ್ದಾರೆ.

ಹೊಸಬರಿಗೆ ಸಚಿವ ಸ್ಥಾನ ನೀಡಲು ,ಹಿರಿಯರು ಸ್ಥಾನ ತ್ಯಾಗಕ್ಕೆ ಮುಂದಾಗಬೇಕು- ಯತ್ನಾಳ್

ವಿಜಯಪುರ (ಜ.26): ಸಂಪುಟ ವಿಸ್ತರಣೆ ವಿಳಂಬವಾಗುತ್ತಿದ್ದಂತೆ ಮೂಲ ಹಾಗೂ ವಲಸಿಗ ಬಿಜೆಪಿ ನಾಯಕರಲ್ಲಿ ಸಂಘರ್ಷ ಮೂಡಿದೆ. ಹೊಸಬರಿಗೆ ಸಚಿವ ಸ್ಥಾನ ನೀಡಬೇಕು ಎಂದರೇ ಪಕ್ಷದಲ್ಲಿ ಈಗಾಗಲೇ ಹುದ್ದೆ ಅನುಭವಿಸಿರುವ ನಾಯಕರು ಸಚಿವ ಸ್ಥಾನ ತ್ಯಾಗಕ್ಕೆ ಮುಂದಾಗಬೇಕು ಎನ್ನುವ ಮೂಲಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆ ನಾಯಕರ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ

ನಗರದಲ್ಲಿ ಮಾತನಾಡಿದ ಅವರು, ಸಂಪುಟ ವಿಸ್ತರಣೆಯಾಗಬೇಕು ಎಂದರೆ ಕೆಲವರು ಸಚಿವ ಸ್ಥಾನ ತ್ಯಾಗ ಮಾಡಬೇಕಾಗುತ್ತದೆ. ಈ ಹಿಂದೆ ಪಕ್ಷದಲ್ಲಿ ಎಲ್ಲಾ ಸ್ಥಾನಮಾನ ಅನುಭವಿಸಿದರು ಪದತ್ಯಾಗ ಮಾಡಲು ಮುಂದಾಗಬೇಕು. ಈ ಮೂಲಕ ನೂತನ ಬಿಜೆಪಿ ಶಾಸಕರಿಗೆ ಸ್ಥಾನ ನೀಡಬೇಕು ಎಂದು ಪರೋಕ್ಷವಾಗಿ ಜಗದೀಶ್​ ಶೆಟ್ಟರ್​ಗೆ ಕುಟುಕಿದರು

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಸಿಸಿ ಪಾಟೀಲರನ್ನು ಬಲಿಕೊಟ್ಟು ನಾನು ಸಚಿವನಾಗಲು ಬಯಸುವುದು ಇಲ್ಲ. ರಾಜೀನಾಮೆ ನೀಡಿ ಬಿಜೆಪಿ ಸೇರಿರುವ 17 ಜನರಲ್ಲಿ ಕೆಲವರಿಗೆ ಡಿಸಿಎಂ, ಸಚಿವ ಸ್ಥಾನ, ನಿಗಮ ಮಂಡಳಿ ಸ್ಥಾನಮಾನ ನೀಡಲು ಮಾತುಕತೆಯಾಗಿದೆ. ಆ ರೀತಿ ಆಗುವ ವಿಶ್ವಾಸ ಕೂಡ ಇದೆ. ರಮೇಶ ಜಾರಕಿಹೊಳಿ ಅವರಿಗೆ ಡಿಸಿಎಂ ನೀಡಬೇಕೆಂಬುದು ಸಹಜ ಬಯಕೆ ಎಂದರು.

ನೂತನ ಶಾಸಕರಿಗೆ ಹುದ್ದೆ ನೀಡಬೇಕು ಎಂದರೇ ತ್ಯಾಗ ಅನಿವಾರ್ಯ. ಕೆಲವರು ಪಕ್ಷದಲ್ಲಿ ಸಾಕಷ್ಟು ಹುದ್ದೆ ಅನುಭವಿಸಿದ್ದಾರೆ. ಕೇವಲ ಭಾಷಣ ಮಾಡುವ ಬದಲು ಇಂತಹ ತ್ಯಾಗಕ್ಕೆ ಮುಂದಾಗಬೇಕು. ಡಿಸಿಎಂ ಸ್ಥಾನಗಳನ್ನು ಹೆಚ್ಚಿಸುವುದರಿಂದ ಹುದ್ದೆ ಮೇಲಿನ ಗೌರವ ಕಡಿಮೆಯಾಗಲಿದೆ ಎಂದರು.

ಹೈಕಮಾಂಡ್​ ಪ್ರತಿ ಮೂರು ತಿಂಗಳಿಗೊಮ್ಮೆ ಸಚಿವರ ಮೌಲ್ಯಮಾಪನ ಮಾಡಬೇಕು. ಅವರಿಗೆ ನೀಡಿರುವ ಗುರಿಯ ಅವಲೋಕನ ಮಾಡಬೇಕು. ಇಲ್ಲದಿದ್ದರೆ ಕೇವಲ ಗೂಟದ ಕಾರು, ಗನ್ ಮ್ಯಾನ ಇಟ್ಟುಕೊಂಡಂತಾಗುತ್ತದೆ. ಕೆಲವು ಸಚಿವರು ವಿಧಾನಸೌಧಕ್ಕೆ ಸೀಮಿತರಾಗಿದ್ದಾರೆ ಎಂದು ತಮ್ಮ ಪಕ್ಷದ ಹಿರಿಯ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದರು.

ಇದೇ ವೇಳೆ ತಮಗೆ ಹುದ್ದೆ ನೀಡಿದರೆ, ಕ್ಯಾಬಿನೆಟ್​ ಸ್ಥಾನಮಾನ ನೀಡಬೇಕು. ಸಣ್ಣಪುಟ್ಟ ಹುದ್ದೆಗೆ ನಾನು ಒಪ್ಪುವುದಿಲ್ಲ. ಹುದ್ದೆ ನೀಡಲು ಸಾಧ್ಯವಾಗದಿದ್ದರೆ ಶಾಸಕನಾಗಿ ಮುಂದುವರೆಯುತ್ತೇನೆ ಎಂದು ಸ್ಪಷ್ಟಪಡಿಸಿದರು.ಇನ್ನು ಯತ್ನಾಳ್​ ಮಾತಿಗೆ ಪ್ರತಿಕ್ರಿಯಿಸಿದ ಸಚಿವ ಜಗದೀಶ್​ ಶೆಟ್ಟರ್​, ಸಂಪುಟ ವಿಸ್ತರಣೆ ಮಾಡುವುದಾ ಅಥವಾ ಪುನಾರಚನೆ ಮಾಡುವುದಾ ಎಂಬುದು ಸಿಎಂ ಪರಮಾಧಿಕಾರ. ಸಚಿವರ ಸ್ಥಾನ ತ್ಯಾಗದ ಕುರಿತು ನಾನು ಏನು ಹೇಳುವುದಿಲ್ಲ. ನಾನು ಮಾಜಿ ಮುಖ್ಯಮಂತ್ರಿ, ಈಗ ಮಂತ್ರಿ ಇದ್ದೇನೆ. ಇಂತಹದ್ದಕ್ಕೆಲ್ಲ ನಾನು ಉತ್ತರ ಕೊಡಬಾರದು, ಮುಖ್ಯಮಂತ್ರಿ ಕೊಡುತ್ತಾರೆ ಎಂದರು.

error: Content is protected !! Not allowed copy content from janadhvani.com