ಮಂಡ್ಯ- 2 ನವಜಾತ ಶಿಶು ಗಳ ಮರಣಕ್ಕೆ ಕಾರಣವಾದ ಲಸಿಕೆ

ಮಂಡ್ಯ: ಆರೋಗ್ಯ ಇಲಾಖೆಯ ಸಿಬ್ಬಂದಿ ನೀಡಿದ “ಪೆಂಟಾವಲೆಟ್” ಲಸಿಕೆ ಇಲ್ಲಿ ಇಬ್ಬರು ನವಜಾತ ಶಿಶುಗಳ ಜೀವನವನ್ನೇ ಬಲಿ ತೆಗೆದುಕೊಂಡಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಮಂಡ್ಯ ತಾಲೂಕಿನ ಚಿಂದಗಿರಿದೊಡ್ಡಿ ಯ ಒಂದೂವರೆ ತಿಂಗಳ ಪ್ರಾಯದ ಪ್ರೀತಂ ಮತ್ತು ಎರಡೂವರೆ ತಿಂಗಳ ಪ್ರಾಯದ ಭುವನ್ ಇಲಾಖೆಯ ಸಿಬ್ಬಂದಿಗಳು ಲಸಿಕೆ ನೀಡಿದ ಮರುದಿನ ಮೃತಪಟ್ಟಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.

ಶುಕ್ರವಾರ ಬೆಳಿಗ್ಗೆ ಈ ಮಕ್ಕಳನ್ನು ಸೇರಿಸಿ ಒಟ್ಟು 9 ಮಕ್ಕಳಿಗೆ ಪೆಂಟಾವಲೆಟ್ ಲಸಿಕೆ ನೀಡಲಾಗಿದ್ದು ಅದರಲ್ಲಿ ನಿನ್ನೆ ರಾತ್ರಿಯೇ ಪ್ರೀತಂ ಎಂಬ ಶಿಶು ಮೃತಪಟ್ಟಿದ್ದು ಇಂದು ಬೆಳಗ್ಗೆ ಭುವನ್ ಕೂಡ ಅಸುನೀಗಿದ್ದಾಗಿ ವರದಿಯಾಗಿದೆ. ಉಳಿದ 7 ಮಕ್ಕಳನ್ನು ಆಸ್ಪತ್ರೆಗೆ ಕರೆಸಿ ತಪಾಸಣೆ ನಡೆಸಲಾಗಿದ್ದು ಮಕ್ಕಳಿಗೆ ಯಾವುದೇ ತೊಂದರೆ ಇಲ್ಲವೆಂದು ಇಲಾಖಾ ಸಿಬ್ಬಂದಿ ಸ್ಪಷ್ಟಪಡಿಸಿದ್ದು ಪ್ರೀತಂ ಮತ್ತು ಭುವನ್ ಪೆಂಟಾವಲೆಟ್ ಲಸಿಕೆ ನೀಡಿದ ಕಾರಣದಿಂದಲೇ ಮೃತಪಟ್ಟಿದ್ದು ಎಂದು ಹೇಳಲು ಸಾಧ್ಯವಿಲ್ಲ ಈ ಬಗ್ಗೆ ಕೂಲಂಕುಶ ತನಿಖೆ ನಡೆಸಿ ವರದಿ ಸಲ್ಲಿಸುವುದಾಗಿ ಆರೋಗ್ಯ ಇಲಾಖಾ ಸಿಬ್ಬಂದಿ ಹೇಳಿದ್ದಾರೆ.

ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಿನಲ್ಲಿ ಅಲ್ಲಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿದ್ದು ಆರೋಗ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕಾಗಿದ್ದು ಪೂರೈಕೆ ಮಾಡುವ ಲಸಿಕೆಯ ಅವಧಿ ಮತ್ತು ಅದರ ಗುಣಮಟ್ಟವನ್ನು ಪರಿಶೀಲಿಸಿಯೇ ಆರೋಗ್ಯ ಕೇಂದ್ರಗಳಿಗೆ ಪೂರೈಕೆ ಮಾಡಬೇಕಾಗಿದೆ ಎಂದು ಬೇಸತ್ತ ಜನ ಮಾತನಾಡಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!