janadhvani

Kannada Online News Paper

ಕೆಸಿಎಫ್ ಯುಎಇ ರಾಷ್ಟ್ರೀಯ ಅಧ್ಯಕ್ಷರಾದ ಅಬ್ದುಲ್ ಜಲೀಲ್ ನಿಝಾಮಿ ರವರ 71ನೇ ಗಣರಾಜ್ಯೋತ್ಸವ ದಿನದ ಸಂದೇಶ)

ಇಡೀ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಮತ್ತು ದೊಡ್ಡ ಸಂವಿಧಾನವೆಂದೇ ಖ್ಯಾತಿಯಾಗಿರುವ ಭಾರತೀಯ ಸಂವಿಧಾನದ ಪೀಠಿಕೆಯಂತೆ ಲೋಕತಂತ್ರಿಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ವನ್ನು ನೀಡಿದ್ದು,
ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯ, ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ ಗಳನ್ನು ದೊರಕಿಸಿ, ವೈಯುಕ್ತಿಕ ಘನತೆ ಮತ್ತು ದೇಶದ ಒಗ್ಗಟ್ಟು ಮತ್ತು ಐಕ್ಯತೆಗೆ ಎಲ್ಲರಲ್ಲೂ ಭ್ರಾತೃತ್ವತೆಯನ್ನು ಪ್ರೋತ್ಸಾಹಿಸಿದೆ. ಈ ಅಭಿವ್ಯಕ್ತಿ ಸ್ವಾತಂತ್ರ್ಯವು ಶತಮಾನಗಳಿಂದ, ಅಂದರೆ ಬ್ರಿಟಿಷರ, ಡಚ್ಚರ, ಪೋರ್ಚುಗೀಸರ ಕಾಲದಿಂದಲೂ ನಮ್ಮ ಪೂರ್ವಿಕರು ಕಾಯ್ದು ಕೊಂಡುಬಂದಿದೆ. ವೈವಿಧ್ಯತೆಯಲ್ಲಿ ಏಕತೆಯಿಂದ , ಹಲವಾರು ಧರ್ಮಗಳು, ಆಚಾರ ವಿಚಾರಗಳು ಎಲ್ಲರೂ ಒಂದಾಗಿ ಭಾರತೀಯರೆಂಬ ಸಂದೇಶದಡಿಯಲ್ಲಿ ಕೂಡಿ ಬಾಳಿ ಜೀವಿಸಿದ್ದರು.

ಜಾತಿ, ಮತ ಭೇದವಿಲ್ಲದೆ, ವರ್ಣ ವಿವೇಚನೆಯಿಲ್ಲದೆ ಶಾಂತಿಯಿಂದ ಶತಮಾನಗಳಿಂದ ಕಾಯ್ದುಕೊಂಡು ಬಂದಿದ್ದ ಜಾತ್ಯತೀತತೆಯನ್ನು ಅನುಭವಿಸಲು ಇನ್ನೂ ಸಹ ಸಾಧ್ಯವಾಗುವ ವಾತಾವರಣ ನಿರ್ಮಾಣಬೇಕು. ಗಾಂಧೀಜಿ, ನೆಹರು, ಅಬ್ದುಲ್ ಕಲಾಂ ಆಝಾದ್ ರವರ ಜೀವನ ಶೈಲಿ ಅವರುಗಳ ಮದ್ಯೆ ಇದ್ದಂತಹ ಒಗ್ಗಟ್ಟು, ಸೌಹಾರ್ದತೆಯನ್ನು ಮುಂದಕ್ಕೆ ಕೊಂಡೊಯ್ಯಲು ನಮಗೆ ಸಾಧ್ಯವಾಗಬೇಕು.

ಸಂವಿಧಾನ ನೀಡಿದ ಹಕ್ಕಿನಂತೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ, ಧರ್ಮ, ಜಾತಿ, ಲಿಂಗ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯ ವಿಲ್ಲದೇ ಎಲ್ಲ ಧರ್ಮಗಳ ಸಮಾನತೆ ಮತ್ತು ಧಾರ್ಮಿಕ ಸಹನೆ ಪ್ರತೀಕವಾಗಿ ಸಮಾನ ಆರ್ಥಿಕ ಅವಕಾಶಗಳನ್ನು ಹಾಗೂ ಎಲ್ಲರಿಗೂ ಯೋಗ್ಯವಾದ ಜೀವನಮಟ್ಟವನ್ನು ಕಲ್ಪಿಸಲು, ಒಂದು ಸುಖೀ ರಾಜ್ಯದ ನಿರ್ಮಾಣಕ್ಕೆ ನಾವು ಬದ್ಧರಾಗಬೇಕು.

ಹಿಂದಿನ ಹಲವು ಸರಕಾರಗಳು ಸಂವಿಧಾನಕ್ಕೆ ಕೆಲವು ಅವಶ್ಯಕ ತಿದ್ದುಪಡಿಗಳನ್ನು ತಂದಿದ್ದರೂ ಸಹ ಸಂವಿಧಾನದ ಪೀಠಿಕೆಯಲ್ಲಿ ನೀಡಿದ ಸಮಾನತೆಯ ಹಕ್ಕನ್ನು ಕಸಿದು ಕೊಳ್ಳುವ ಅಥವಾ ಧರ್ಮಾಧಾರಿತ ಹಕ್ಕನ್ನು ನೀಡುವ ಯಾವುದೇ ತಿದ್ದುಪಡಿ ಇಷ್ಟರವರಿಗೆ ಆಗಿರಲಿಲ್ಲ. ದಶಕ ಗಳಿಂದ ಭದ್ರತೆಗೊಂಡಿದ್ದ ಸಂವಿಧಾನವನ್ನು ಮಾರ್ಪಡಿಸಲು ಪ್ರಯತ್ನಿಸುತ್ತಿರುವ ಇಂದಿನ ಈ ಸನ್ನಿವೇಶದಲ್ಲಿ ಜಾತ್ಯತೀತ ಭಾರತವನ್ನು ಉಳಿಸಿಕೊಳ್ಳಲು ನಾವೆಲ್ಲರೂ ಬದ್ಧರಾಗಬೇಕು. ಎಪ್ಪತ್ತು ವರ್ಷಗಳ ಹಿಂದೆ ಅಹಿಂಸೆಯ ಮೂಲಕ ನಮಗೆ ಸಿಕ್ಕಿದ ಆ ಸ್ವಾತಂತ್ರ್ಯದ ಸ್ಪೂರ್ತಿಯನ್ನು ನಾವು ಒಳಗೊಂಡು ಜೀವನ ರೂಪಿಸೋಣ. ಅಖಂಡ ಭಾರತದ ಭಾತೃತ್ವಕ್ಕೆ ಧಕ್ಕೆ ತರುವ ಎಲ್ಲಾ ಹೀನ ಶಕ್ತಿಗಳನ್ನು ಹಿಮ್ಮೆಟ್ಟಿಸೋಣ.

ಎಲ್ಲರಿಗೂ 71ನೇ ಗಣರಾಜ್ಯೋತ್ಸವ ಶುಭಾಶಯಗಳು

ಸುಭದ್ರ, ಶಾಂತಿಯ, ಸೌಹಾರ್ದತೆಯ ಜಾತ್ಯತೀತ ಭಾರತವು ವಿಶ್ವಾಂತ್ಯದ ವರೆಗೆ ನೆಲೆ ನಿಲ್ಲಲಿ..

error: Content is protected !! Not allowed copy content from janadhvani.com