janadhvani

Kannada Online News Paper

ಕೊರೊನಾ ವೈರಸ್: ಚೀನಾದಲ್ಲಿ 26ಕ್ಕೆ ಏರಿದ ಸಾವಿನ ಸಂಖ್ಯೆ- ಭಾರತದಲ್ಲಿ ಕಟ್ಟೆಚ್ಚರ

ನವದೆಹಲಿ: ಚೀನಾದಲ್ಲಿ ಪತ್ತೆಯಾಗಿರೋ ಮಾರಣಾಂತಿಕ ಕೊರೊನಾ ವೈರಸ್ ಇತರೆ ದೇಶಗಳಿಗೂ ಕಾಲಿಟ್ಟಿದೆ. ಇದರಿಂದ ವಿಶ್ವದಾದ್ಯಂತ ವೈದ್ಯಕೀಯ ತುರ್ತುಪರಿಸ್ಥಿತಿ ತಲೆದೋರಿದೆ. ಈಗಾಗಲೇ ದಕ್ಷಿಣ ಕೊರಿಯಾ, ಜಪಾನ್, ತೈವಾನ್, ಥೈಲ್ಯಾಂಡ್, ಹಾಂಗ್‌ಕಾಂಗ್ ಮತ್ತು ಅಮೆರಿಕಾಕ್ಕೂ ಹರಡಿದೆ. ಚೀನಾದಿಂದ ಆಗಮಿಸುವವರ ಮೇಲೆ ಏಷ್ಯಾ ರಾಷ್ಟ್ರಗಳು ನಿಗಾ ಇಟ್ಟಿದ್ದು, ಏರ್‌ಪೋರ್ಟ್‌ನಲ್ಲಿ ತೀವ್ರ ತಪಾಸಣೆ ನಡೆಸಲಾಗ್ತಿದೆ. ಹೀಗೆ ಚೀನಾದಿಂದ ಮುಂಬೈಗೆ ವಾಪಸ್ಸಾದ ಇಬ್ಬರಿಗೆ ವೈರಸ್‌ ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಪ್ರತ್ಯೇಕ ವಾರ್ಡ್‌ನಲ್ಲಿರಿಸಲಾಗಿದೆ.

ಜನವರಿ 19ರ ಬಳಿಕ ಶಿವಾಜಿ ಏರ್‌ಪೋರ್ಟ್‌ನಲ್ಲಿ ಸುಮಾರು 1,789 ಪ್ರಯಾಣಿಕರನ್ನು ಥರ್ಮಲ್ ಸ್ಕ್ಯಾನಿಂಗ್‌ಗೆ ಒಳಪಡಿಸಲಾಗಿದೆ. ಇಬ್ಬರಿಗೆ ಈ ವೈರಸ್ ತಗುಲಿರುವ ಶಂಕೆ ವ್ಯಕ್ತವಾಗಿದೆ. ಚೀನಾದಲ್ಲಿ ಕೊರೊನಾ ವೈರಸ್ ಪತ್ತೆಯಾದ ಬೆನ್ನಲ್ಲೇ ಮುಂಬೈನ ಕಸ್ತೂರಿಬಾ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ ತೆರೆಯಲಾಗಿದೆ. ಖಾಸಗಿ ವೈದ್ಯರಿಗೂ ಜಾಗೃತವಾಗಿರುವಂತೆ ಸೂಚಿಸಲಾಗಿದೆ. ಹೇಗೆ ಚಿಕಿತ್ಸೆ ನೀಡಬೇಕೆಂದು ಮಹಾರಾಷ್ಟ್ರ ಸರ್ಕಾರ ಮಾರ್ಗದರ್ಶಿ ಸೂಚಿ ನೀಡಿದೆ. ಜ್ವರ, ಕಫ, ನೆಗಡಿ ಮತ್ತು ಉಸಿರಾಟಕ್ಕೆ ತೊಂದರೆ ಈ ರೋಗದ ಲಕ್ಷಣಗಳಾಗಿವೆ.

ಅತ್ತ, ಚೀನಾದಲ್ಲಿ ವೈರಸ್‌ ವ್ಯಾಪಿಸದಂತೆ ನಿಯಂತ್ರಿಸಲು ವೈರಸ್‌ ಪತ್ತೆಯಾದ ವುಹಾನ್ ಸೇರಿದಂತೆ 13 ನಗರ ಬಂದ್‌ ಮಾಡಲಾಗಿದೆ. ಈ ನಗರಗಳಲ್ಲಿ ವಿಮಾನ, ಬಸ್ ಹಾಗೂ ರೈಲು ಸಂಚಾರ ಮತ್ತು ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಲಾಗಿದೆ. ಅಂಗಡಿ ಮುಂಗಟ್ಟು ಕೂಡ ಮುಚ್ಚಲಾಗಿದೆ. ಅಲ್ಲದೆ, ಜನರು ಒಂದೆಡೆ ಸೇರಬಹುದಾದ ಎಲ್ಲ ಪ್ರದೇಶಗಳನ್ನೂ ಕ್ಲೋಸ್‌ ಮಾಡಲಾಗಿದೆ. ಜೊತೆಗೆ ಚೀನಾ ಮಹಾಗೋಡೆಯ ಒಂದು ಭಾಗ ಮತ್ತು ಬೀಜಿಂಗ್‌ನ ಪ್ರಮುಖ ಪ್ರದೇಶಗಳನ್ನು ಮುಚ್ಚಲಾಗಿದೆ.

ಚೀನಾದಲ್ಲಿ ಈ ಡೆಡ್ಲಿ ವೈರಸ್‌ಗೆ ಇಲ್ಲಿಯವರೆಗೆ 26 ಮಂದಿ ಬಲಿಯಾಗಿದ್ದು, ಸುಮಾರು 800 ಜನರಿಗೆ ಸೋಂಕು ತಗುಲಿದೆ. ಈ ವೈರಸ್‌ ವ್ಯಾಪಕವಾಗಿ ಹರಡುತ್ತಿರೋದ್ರಿಂದ ಆತಂಕಗೊಂಡ ಸರ್ಕಾರ, ಹೊಸ ವರ್ಷಾಚರಣೆ ಕಾರ್ಯಕ್ರಮವನ್ನೇ ರದ್ದು ಮಾಡಿದೆ. ಪ್ರಪಂಚದಾದ್ಯಂತ 2002-03ರಲ್ಲಿ ಸುಮಾರು 650 ಜನರನ್ನು ಬಲಿ ಪಡೆದಿದ್ದ ಸಾರ್ಸ್ ಮಾದರಿಯಲ್ಲೇ ಕೊರೊನಾ ವೈರಸ್‌ ಕಂಡು ಬಂದಿದೆ. ಸಾಗರೋತ್ಪನ್ನಗಳು ಮತ್ತು ಜೀವಂತ ಕಾಡುಪ್ರಾಣಿಗಳಿಂದ ಈ ವೈರಸ್ ಹರಡುತ್ತಿದೆ ಅಂತ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ಈ ವೈರಸ್‌ ಬಗ್ಗೆ ಹಿಂದಿನ ತಿಂಗಳೇ ವಿಶ್ವ ಆರೋಗ್ಯ ಸಂಸ್ಥೆಗೆ ಚೀನಾ ಮಾಹಿತಿ ನೀಡಿತ್ತು.

ಇತರೆ ದೇಶಗಳ ಏರ್‌ಪೋರ್ಟ್‌ಗಳಲ್ಲಿ ಚೀನಾದಿಂದ ಆಗಿಮಿಸುವವರನ್ನು ಥರ್ಮಲ್ ಸ್ಕ್ಯಾನಿಂಗ್‌ಗೆ ಒಳಪಡಿಸಲಾಗುತ್ತಿದೆ. ಭಾರತದ ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತ ವಿಮಾನ ನಿಲ್ದಾಣಗಳಲ್ಲಿ ಕಳೆದ ಬುಧವಾರದವರೆಗೆ 12 ಸಾವಿರಕ್ಕೂ ಹೆಚ್ಚು ಪ್ರಯಾಣಿಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ವೈರಸ್‌ ಪತ್ತೆಯಾದ ವುಹಾನ್‌ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರಿದ್ದಾರೆ. ಅದರಲ್ಲೂ ವಿದ್ಯಾರ್ಥಿಗಳೇ ಹೆಚ್ಚು. ಹೊಸ ವರ್ಷಾಚರಣೆಗೆ ರಜೆ ನೀಡಿರೋದ್ರಿಂದ ತಾಯ್ನಾಡಿಗೆ ಮರಳಿದ್ದಾರೆ. ಹೀಗಾಗಿ, ಭಾರತದ ಏರ್‌ಪೋರ್ಟ್‌ಗಳಲ್ಲಿ ವೈದ್ಯಕೀಯ ಕಚ್ಚೆಟ್ಟರ ವಹಿಸಲಾಗಿದೆ.

error: Content is protected !! Not allowed copy content from janadhvani.com