janadhvani

Kannada Online News Paper

ವಿದೇಶಿ ಕಾರ್ಮಿಕರಿಗೆ ವಿಧಿಸಿರುವ ಲೆವಿಯನ್ನು ಮರು ಪರಿಶೀಲಿಸುವಂತೆ ಆಗ್ರಹ

ರಿಯಾದ್: ಸೌದಿ ಫೈನಾನ್ಸ್ ಫೋರಂ ವಿದೇಶಿ ಕಾರ್ಮಿಕರು ಮತ್ತು ಅವಲಂಬಿತರಿಗೆ ವಿಧಿಸಿರುವ ಲೆವಿಯನ್ನು ಮರು ಪರಿಶೀಲಿಸುವಂತೆ ಆಗ್ರಹಿಸಿದೆ. ಮೂರು ದಿನಗಳ ಆರ್ಥಿಕ ಫೋರಂನ ಎರಡನೇ ದಿನದ ಚರ್ಚೆಯಲ್ಲಿ ಈ ಬೇಡಿಕೆಯನ್ನು ಮುಂದಿಡಲಾಗಿದೆ.

ದೇಶದ ಮಧ್ಯಮ ಮತ್ತು ಸಣ್ಣ ಉದ್ಯಮಗಳ ಪ್ರಗತಿಯನ್ನು ನಿರ್ಣಯಿಸುವಲ್ಲಿ, ವಿದೇಶಿ ಕಾರ್ಮಿಕರು ಮತ್ತು ಅವರ ಅವಲಂಬಿತರ ಮೇಲೆ ವಿಧಿಸುವ ಲೆವಿಯ ಪರಿಣಾಮವನ್ನು ಪರಿಶೀಲಿಸುವುದು ಮುಖ್ಯ.

ವೀಸಾ ಶುಲ್ಕಗಳು ಉದ್ಯೋಗ ಮಾರುಕಟ್ಟೆಯ ಮೇಲೂ ಪ್ರತಿಕೂಲ ಪರಿಣಾಮ ಬೀರಿವೆ. ಸ್ಥಳೀಯ ಸಂಸ್ಥೆಗಳು (ಬಲದಿಯಾ) ವಿಧಿಸಿರುವ ಶುಲ್ಕವನ್ನು ಕೂಡ ಮರುಪರಿಶೀಲಿಸಬೇಕು ಎಂದು ಫೋರಂ ಸೂಚಿಸಿದೆ. ಜನವರಿ 21ರಿಂದ 23ರವರೆಗೆ ನಡೆಯುತ್ತಿರುವ ರಿಯಾದ್ ಆರ್ಥಿಕ ವೇದಿಕೆಯ ಶೀರ್ಷಿಕೆ ‘ಆರ್ಥಿಕ ಪ್ರಗತಿಯ ಆಧಾರವು ಮಾನವನಾಗಿರಬೇಕು’ ಎಂಬುದಾಗಿದೆ.

‘ಆರ್ಥಿಕ ಸುಧಾರಣೆಗಳು ದೇಶದ ಆರ್ಥಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರಿವೆ’ ಎಂಬ ಶೀರ್ಷಿಕೆಯಡಿಯಲ್ಲಿ ಎರಡನೇ ದಿನ ಹಣಕಾಸು ಸಚಿವ ಅಬ್ದುಲ್ ಅಝೀಝ್ ಅಲ್-ರಶೀದ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಣ್ಣ ಉದ್ಯಮಗಳ ಮೇಲೆ ಪರಿಣಾಮ ಬೀರಿದ ವಿವಿಧ ಶುಲ್ಕಗಳ ಬಗ್ಗೆ ಚರ್ಚೆ ನಡೆಯಿತು. ಡಾ. ಮುಹಮ್ಮದ್ ಅಲ್-ಅಬ್ಬಾಸ್ ಅಧ್ಯಯನದ ವರದಿಯನ್ನು ಮಂಡಿಸಿದರು. ಜಿಸಿಸಿ ಹಣಕಾಸು ಸಲಹೆಗಾರ ಮುಹಮ್ಮದ್ ಅಲ್ ಉಮ್ರಾನ್ ಮತ್ತು ಅಬ್ದುಲ್ ಮುಹ್ಸಿನ್ ಅಲ್ ಫಾರಿಸ್ ಚರ್ಚೆಯಲ್ಲಿ ಪಾಲ್ಗೊಂಡರು.

error: Content is protected !! Not allowed copy content from janadhvani.com