janadhvani

Kannada Online News Paper

ಸಿಎಎ: ಮಧ್ಯಂತರ ಆದೇಶಕ್ಕೆ ಸುಪ್ರೀಮ್ ನಕಾರ- ಕೇಂದ್ರದ ಪ್ರತಿಕ್ರಿಯೆಗೆ 4 ವಾರಗಳ ಗಡುವು

ನವದೆಹಲಿ (ಜ.22): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ (ಸಿಎಎ) ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ 143 ಅರ್ಜಿಗಳ ವಿಚಾರಣೆಯನ್ನು ಆರಂಭಿಸಿದ ಸುಪ್ರಿಂ ಕೋರ್ಟ್,​​ ಕೇಂದ್ರ ಸರಕಾರದ ಪ್ರತಿಕ್ರಿಯೆಯನ್ನು ಆಲಿಸದೆ ತಡೆ ವಿಧಿಸಲು ಸಾಧ್ಯವಿಲ್ಲ ಎಂದಿದೆ.

ಈ ಕುರಿತ ಅರ್ಜಿಗಳಿಗೆ ಪ್ರತಿಕ್ರಿಯಿಸಲು ಸರಕಾರಕ್ಕೆ 4 ವಾರಗಳ ಕಾಲಾವಕಾಶ ನೀಡಿದೆ. ಮನವಿಗಳ ವಿಚಾರಣೆಯನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವ ಸಾಧ್ಯತೆ ಇದೆ ಎಂದು ಹೇಳಿದೆ. ಸಿಎಎ ವಿಚಾರದಲ್ಲಿ ಯಾವುದೆ ಆದೇಶ ನೀಡದಂತೆ ಹೈಕೋರ್ಟ್​​ಗಳಿಗೆ ಸೂಚನೆ ನೀಡಿದೆ. ಸಿಎಎ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ಅಸ್ಸಾಂನ ಅರ್ಜಿದಾರರು ಸಿಎಎಯ ವಿಚಾರ ಮತ್ತು ಅಸ್ಸಾಂಗೆ ಸಂಬಂಧಿಸಿ ಸಿಎಎಯ ವಿಚಾರವನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು. ಇದಕ್ಕೊಪ್ಪಿದ ಸಿಜೆಐ 2 ವಾರಗಳ ನಂತರ ವಿಚಾರಣೆ ನಡೆಸುವುದಾಗಿ ಹೇಳಿದರು.

ಎನ್ ಪಿಆರ್ ಎಪ್ರಿಲ್ ತಿಂಗಳಲ್ಲಿ ಆರಂಭವಾಗಲಿದೆ. ಹಲವು ರಾಜ್ಯಗಳು ದಾಖಲೆಗಳ ಸಂಗ್ರಹ ಆರಂಭಿಸಿದೆ. ಒಂದು ಬಾರಿ ಪೌರತ್ವ ನೀಡಿದರೆ ಹಿಂಪಡೆದುಕೊಳ್ಳಲಾಗದು. ಆದ್ದರಿಂದ ಎನ್ ಪಿಆರ್ ದಿನಾಂಕ ಮುಂದೂಡಬೇಕು ಎಂದು ಕಪಿಲ್ ಸಿಬಲ್ ಮನವಿ ಮಾಡಿದರು. ಮೂರು ತಿಂಗಳ ಕಾಲ ಈ ಪ್ರಕ್ರಿಯೆಯನ್ನು ಮುಂದೂಡಬೇಕು ಎಂದವರು ಮನವಿ ಮಾಡಿದ್ದಾರೆ.

ಚಳಿಗಾಲದ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಿಎಎ ಜಾರಿಗೆ ತಂದಿತ್ತು. ಇದನ್ನು ಪ್ರಶ್ನಿಸಿ ಮುಸ್ಲಿಂ ಒಕ್ಕೂಟ ಸಂಘ (ಐಯುಎಂಎಲ್​), ಕಾಂಗ್ರೆಸ್​ ನಾಯಕ ಜಯರಾಮ್​ ರಮೇಶ್​ ಸೇರಿ 143 ಅರ್ಜಿ ಸಲ್ಲಿಕೆ ಆಗಿತ್ತು. ಇಂದು ಅರ್ಜಿ ವಿಚಾರಣೆ ಆರಂಭಿಸಿದ ಎಸ್​ಎ ಬೋಬ್ಡೆ, “ಈ ಪ್ರಕರಣದಲ್ಲಿ ಅಸ್ಸಾಂ, ತ್ರಿಪುರಾ ಭಿನ್ನವಾಗಿದೆ. ಹೀಗಾಗಿ ಅಲ್ಲಿನ ಅರ್ಜಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಲಾಗುವುದು,” ಎಂದು ಸಿಜೆಐ ಹೇಳಿದ್ದಾರೆ.

ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರು ಎನಿಸಿಕೊಂಡು 2014 ಡಿಸೆಂಬರ್​ 31ರ ಒಳಗೆ ಭಾರತ ಪ್ರವೇಶಿಸಿದ ಹಿಂದು, ಸಿಖ್​, ಬೌದ್ಧ, ಕ್ರೈಸ್ತ, ಜೈನ ಹಾಗೂ ಪಾರ್ಸಿ ಸಮುದಾಯದವರಿಗೆ ಕೇಂದ್ರ ಸರ್ಕಾರ ಭಾರತದ ನಾಗರಿಕತೆ ನೀಡಲು ಮುಂದಾಗಿದೆ. ಹೀಗಾಗಿ ಈ ಕಾಯ್ದೆಗೆ ಸಾಂವಿಧಾನಿಕ ಸಿಂಧುತ್ವ ಇದೆಯೇ ಎನ್ನುವುದನ್ನು ಪ್ರಶ್ನಿಸಲಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗಿದೆ. ತಿದ್ದುಪಡಿ ಮಸೂದೆಗೆ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಅನುಮೋದನೆ ಸಿಗುತ್ತಿದ್ದಂತೆಯೇ ದೇಶದ ಹಲವೆಡೆ ಪ್ರತಿಭಟನೆಗಳು ಭುಗಿಲೆದ್ದಿವೆ. ಈಶಾನ್ಯ ಭಾರತದ ರಾಜ್ಯಗಳಲ್ಲಿ ಪ್ರತಿಭಟನೆಗಳು ಮೊದಲಿಟ್ಟವು. ನಂತರ ಇದು ರಾಜಧಾನಿ ದೆಹಲಿಯಲ್ಲಿ ಮಾರ್ದನಿಸಿತು. ದೇಶದ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಲೇ ಇವೆ.

error: Content is protected !! Not allowed copy content from janadhvani.com