janadhvani

Kannada Online News Paper

ಹೃದಯವಿದ್ರಾವಕ ಘಟನೆ: ಕೇರಳದ 8 ಮಂದಿ ನೇಪಾಳದ ಹೋಟೆಲ್ನಲ್ಲಿ ಉಸಿರುಗಟ್ಟಿ ಸಾವು

ಕಠ್ಮಂಡು, ಜನವರಿ 21: ನೇಪಾಳದ ದಾಮನ್ ಎಂಬಲ್ಲಿ ನಡೆದ ಹೃದಯವಿದ್ರಾವಕ ಘಟನೆಯಲ್ಲಿ ರೆಸಾರ್ಟ್ ಒಂದರ ಕೊಠಡಿಯಲ್ಲಿ ಕೇರಳದ ಎಂಟು ಮಂದಿ ಪ್ರವಾಸಿಗರು ಮೃತಪಟ್ಟಿದ್ದಾರೆ. ಅನಿಲ ಸೋರಿಕೆಯಿಂದ ಉಸಿರಾಡಲು ಸಾಧ್ಯವಾಗದೆ ಈ ಸಾಮೂಹಿಕ ಸಾವು ಸಂಭವಿಸಿದ್ದು, ಮೃತರಲ್ಲಿ ನಾಲ್ವರು ಮಕ್ಕಳು ಕೂಡ ಸೇರಿದ್ದಾರೆ.

ಮೃತರನ್ನು ಪ್ರಬಿನ್ ಕುಮಾರ್ (39), ಶರಣ್ಯ (34), ರಂಜಿತ್ ಕುಮಾರ್ ಟಿಬಿ (39), ಇಂದು ರಂಜಿತ್ (34), ಶ್ರೀ ಭದ್ರಾ (9), ಅಭಿನವ್ ಸೂರ್ಯ (9), ಅಭಿ ನಾಯರ್ (7) ಮತ್ತು ವೈಷ್ಣವ್ ರಂಜಿತ್ (2) ಎಂದು ಗುರುತಿಸಲಾಗಿದೆ.

ಒಟ್ಟು 15 ಜನರ ತಂಡವು ನೇಪಾಳಕ್ಕೆ ಪ್ರವಾಸ ಕೈಗೊಂಡಿತ್ತು. ಅವರಲ್ಲಿ ಮೃತಪಟ್ಟ ಎಂಟೂ ಮಂದಿ ತಿರುವನಂತಪುರಂ ಜಿಲ್ಲೆಯ ಚೆಂಕೊಟ್ಟುಕೊಣಂನವರಾಗಿದ್ದಾರೆ. ಅನಿಲ್ ಸೋರಿಕೆಯಿಂದ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಉಸಿರುಗಟ್ಟಿ ಒದ್ದಾಡುತ್ತಿದ್ದವರನ್ನು ಏರ್‌ಲಿಫ್ಟ್ ಮೂಲಕ ಎಚ್‌ಎಎಂಎಸ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ದಾಖಲು ಮಾಡುವಾಗಲೇ ಅವರೆಲ್ಲರೂ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

ಎವೆರೆಸ್ಟ್ ಪನೋರಮಾ ಎಂಬ ರೆಸಾರ್ಟ್‌ನಲ್ಲಿ ಎಲ್ಲರೂ ಉಳಿದುಕೊಂಡಿದ್ದರು. ಒಂದು ಕೊಠಡಿಯಲ್ಲಿ ಇಬ್ಬರು ದಂಪತಿ ಮತ್ತು ಅವರ ನಾಲ್ಕು ಮಕ್ಕಳು ಇದ್ದರು. ಕೊಠಡಿ ಬೆಚ್ಚಗೆ ಇರುವಂತೆ ನೋಡಿಕೊಳ್ಳಲು ಗ್ಯಾಸ್ ಹೀಟರ್ ಆನ್ ಮಾಡಿದ್ದರು ಎನ್ನಲಾಗಿದೆ. ಆದರೆ ಹೀಟರ್ ಕೆಟ್ಟು ಗ್ಯಾಸ್ ಹೊರಬಂದಿದ್ದರಿಂದ ಕೊಠಡಿಯೊಳಗೆ ಉಸಿರುಗಟ್ಟಿ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರವಾಸಕ್ಕೆ ತೆರಳಿದ್ದವರು ನಾಲ್ಕು ಕೊಠಡಿಗಳನ್ನು ಬುಕ್ ಮಾಡಿಸಿದ್ದರು. ಆದರೆ ಅವರಲ್ಲಿ ಎಂಟು ಮಂದಿ ಒಂದೇ ಕೊಠಡಿಯಲ್ಲಿ ಸೇರಿಕೊಂಡಿದ್ದರು. ಚಳಿ ಇದ್ದಿದ್ದರಿಂದ ಎಲ್ಲಾ ಕಿಟಕಿ ಬಾಗಿಲುಗಳನ್ನು ಒಳಗಿನಿಂದ ಬಂದ್ ಮಾಡಿಕೊಂಡಿದ್ದರು. ಪ್ರವಾಸ ಮುಗಿಸಿ ಅವರು ತಮ್ಮ ಮನೆಗಳಿಗೆ ಹೊರಡಲು ಸಿದ್ಧತೆ ಮಾಡಿಕೊಂಡಿದ್ದರು.

ಗ್ಯಾಸ್ ಹೀಟರ್ನಿಂದ ಹೇಗೆ ಸಾವು..?
ತಜ್ಞರ ಪ್ರಕಾರ ಗ್ಯಾಸ್ ಹೀಟರ್ ಕಾರ್ಬನ್ ಮಾನಾಕ್ಸೈಡನ್ನ ರಿಲೀಸ್ ಮಾಡುತ್ತೆ. ಇದೇ, ಕಾರಣದಿಂದ ಈ ಎಲ್ಲಾ 8 ಜನರು ಉಸಿರುಗಟ್ಟಿ ಸಾವನಪ್ಪಿರುವುದಾಗಿ ಶಂಕಿಸಲಾಗಿದೆ. ಅಲ್ಲದೇ, ಕೊಠಡಿಯ ಬಾಗಿಲು ಮುಚ್ಚಿದ್ರಂತೂ ಕಾರ್ಬನ್ ಮಾನಾಕ್ಸೈಡ್ ಬಲಿ ಪಡೆದುಕೊಳ್ಳುವುದು ಪಕ್ಕಾ ಅಂತಾ ಹೇಳಲಾಗುತ್ತೆ.

error: Content is protected !! Not allowed copy content from janadhvani.com