janadhvani

Kannada Online News Paper

ಶಂಕಿತ ಉಗ್ರ ಮುಸ್ಲಿಮನಲ್ಲ- ಟಿವಿ ಮಾಧ್ಯಮದಲ್ಲಿ ಕ್ಷೀಣಿಸಿದ ಬಾಂಬ್ ನ ತೀವ್ರತೆ

ಮಂಗಳೂರು,ಜ.21: ನಿನ್ನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಬಾಂಬ್ ಇಟ್ಟ ಶಂಕಿತನ ಗುರುತು ಪತ್ತೆ ಹಚ್ಚಿರುವ ಪೊಲೀಸರು ಉಡುಪಿ, ಮಣಿಪಾಲದ ಆದಿತ್ಯ ರಾವ್ ಎಂಬಾತನೆಂದು ಅಂದಾಜಿಸಿದ್ದಾರೆ ಎಂದು ವರದಿಯಾಗಿದೆ.

ಈತ 2018ರಲ್ಲಿ ಬೆಂಗಳೂರಿನಲ್ಲಿ ಹುಸಿ ಬಾಂಬ್ ಕರೆ ಮಾಡಿದ್ದು, ಆರೋಪಿಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ವ್ಯಕ್ತಿಗೂ, ಮಂಗಳೂರಿನ ಶಂಕಿತನಿಗೂ ಫೋಟೋದಲ್ಲಿ ಸಾಮ್ಯತೆ ಇದೆ ಎಂಬುದು ಪೊಲೀಸರ ಅನುಮಾನ.

ಬಾಂಬ್ ಇಟ್ಟ ಶಂಕಿತ ವ್ಯಕ್ತಿ ‘ರಾಜ್ಕುಮಾರ್’ ಬಸ್ನಲ್ಲಿ ಮಂಗಳೂರಿನಿಂದ ಕೆಂಜಾರು ಜಂಕ್ಷನ್ಗೆ ಬಂದು ಇಳಿದಿದ್ದ ಎಂದು ತಿಳಿದು ಬಂದಿದೆ. ಈ ಅಪರಿಚಿತ ವಿಧ್ವಂಸಕ ಕೃತ್ಯ ಎಸಗಲು 2 ಬ್ಯಾಗ್ ತಂದಿದ್ದ. ಕೆಂಜಾರ್ ಜಂಕ್ಷನ್ನಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ 1 ಬ್ಯಾಗ್ ಇಡಲು ಯತ್ನಿಸಿದ್ದ. ಸಂಕೀರ್ಣದ ಸೆಲೂನ್ ಅಂಗಡಿಯಲ್ಲೂ ಬಾಂಬ್ ಇಡಲು ಯತ್ನಿಸಿದ್ದ. ಆದರೆ ಬ್ಯಾಗ್ ಇಡಲು ಸೆಲೂನ್ ಮಾಲೀಕ ವಿರೋಧ ವ್ಯಕ್ತಪಡಿಸಿದ್ದ ಎಂದು ತಿಳಿದು ಬಂದಿದೆ. “ಆಗಂತುಕ ವ್ಯಕ್ತಿ ತಲೆಗೆ ಹ್ಯಾಟ್ ಧರಿಸಿದ್ದ. ಇಲ್ಲಿ ಬ್ಯಾಗ್ ಇಡಬಹುದಾ ಎಂದು ಕೇಳಿದ್ದ. ಬಳಿಕ ಆಟೋ ಮಾಡಿಕೊಂಡು ತೆರಳಿದ,” ಎಂದು ಶಂಕಿತನ ಬಗ್ಗೆ ಸಲೂನ್ ಮಾಲೀಕ ಸಲ್ಮಾನ್ ಅಲಿ ತಿಳಿಸಿದ್ದಾರೆ.

ಮ್ಯಾನೇಜರ್ಗೆ ಬೆದರಿಕೆ ಕರೆ

ಈ ಪ್ರಕರಣ ಸಂಬಂಧ ಇಂದು ಮಂಗಳೂರು ಏರ್ಪೋರ್ಟ್ ಮ್ಯಾನೇಜರ್ಗೆ ಶಂಕಿತ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿತ್ತು ಎಂದು ತಿಳಿದು ಬಂದಿದೆ. ಆತ ಕರೆ ಮಾಡಿ, “ನಿಮ್ಮ ಅಧಿಕಾರಿಗಳಿಂದ ನಾನು ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದೇನೆ. ಸುಮ್ಮನೆ ಬಿಡಲ್ಲ, ಸೇಡು ತೀರಿಸಿಕೊಳ್ಳುತ್ತೇನೆ. ಅದಕ್ಕಾಗಿಯೇ ಏರ್ಪೋರ್ಟ್ ಬಳಿ ಬಾಂಬ್ ಇಟ್ಟಿದ್ದು. ಇನ್ನೂ 2 ಬಾಂಬ್ ಹಾಕುತ್ತೇನೆ, ಸಾಧ್ಯವಾದರೆ ತಡೆಯಿರಿ,” ಎಂಬುದಾಗಿ ಬೆದರಿಕೆ ಹಾಕಿದ್ದನೆನ್ನಲಾಗಿದೆ.

ಬೆದರಿಕೆ ಕರೆ ಮಾಡಿದ್ದು ಯಾರು?

ಮಂಗಳೂರು ಏರ್ಪೋರ್ಟ್ ಮ್ಯಾನೇಜರ್ಗೆ ಬೆದರಿಕೆ ಕರೆ ಮಾಡಿದ್ದು ಉಡುಪಿ ಮೂಲದ ವ್ಯಕ್ತಿ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈತನೇ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದು ಎನ್ನಲಾಗುತ್ತಿದೆ. ಬಾಂಬರ್ ಕೇಸ್ ಬೆನ್ನತ್ತಿದ್ದ ಪೊಲೀಸರಿಗೆ ಈ ಬಗ್ಗೆ ಸುಳಿವು ಸಿಕ್ಕಿದೆ. ಇಂಜಿನಿಯರ್ ಪದವೀಧರ ಆಗಿದ್ದ ವ್ಯಕ್ತಿ ಏರ್‌ಪೋರ್ಟ್ ಅಧಿಕಾರಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಶಂಕಿತ ವ್ಯಕ್ತಿಯು 2018ರಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದ. ಸೂಕ್ತ ದಾಖಲೆ ಕೊಡದ ಹಿನ್ನೆಲೆ ಕೆಲಸ ಸಿಕ್ಕಿರಲಿಲ್ಲ. ಈ ಹಿಂದೆಯೂ ಈತ ಹುಸಿ ಬಾಂಬ್ ಕರೆ ಮಾಡಿದ್ದ. 2018ರಲ್ಲೇ ಬೆಂಗಳೂರಿನ ಏರ್ಪೋರ್ಟ್ ಪೊಲೀಸರು ಈತನನ್ನು ಬಂಧಿಸಿದ್ದರು. ಆಗ ಈತ 6 ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದನೆನ್ನಲಾಗಿದೆ.

ಇನ್ನು, ಬಾಂಬ್ ಇಟ್ಟ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸಿಸಿಬಿ ಡಿಸಿಪಿ ಲಕ್ಷ್ಮೀ ಗಣೇಶ್ ನೇತೃತ್ವದಲ್ಲಿ 3 ತನಿಖಾ ತಂಡಗಳು ಹುಡುಕಾಟ ಆರಂಭಿಸಿವೆ. ಮಂಗಳೂರು ಉತ್ತರ ವಿಭಾಗದ ಎಸಿಪಿ ಬೆಳ್ಳಿಯಪ್ಪ ಮತ್ತು ತಂಡ ಹಾಗೂ ಸಿಸಿಬಿ ಇನ್ಸ್ಪೆಕ್ಟರ್ ಶಿವಪ್ರಸಾದ್ ನಾಯಕ್ ಹಲವು ಆಯಾಮಗಳಲ್ಲಿ ತನಿಖೆ ಶುರುಮಾಡಿವೆ.

ಆಟೋದ ಬಣ್ಣ ಬದಲಿಸಿದ ಟಿವಿ ಮಾಧ್ಯಮ:

ನಿನ್ನೆ ಬಾಂಬ್ ತಂದಿಟ್ಟ ಶಂಕಿತನ ಫೋಟೋ ಮತ್ತು ಆತ ಬಂದಿಳಿದಿದ್ದ ಆಟೋ ರಿಕ್ಷಾದ ಫೋಟೋವನ್ನು ಪೋಲೀಸರು ಬಿಡುಗಡೆ ಗೊಳಿಸಿದ್ದರು. ಕೂಡಲೇ ಪ್ರಚಾರ ಆರಂಭಿಸಿದ ಟಿವಿ ಮಾಧ್ಯಮಗಳು, ಕ್ಷಣಾರ್ಧದಲ್ಲಿ ಆಟೋದ ಬಣ್ಣ ಬದಲಿಸಿತು, ಕಾರಣ ಶಂಕಿತ ಉಗ್ರ ಬಂದಿಳಿದ ರಿಕ್ಷಾದಲ್ಲಿ “ಶ್ರೀ ದುರ್ಗಾ” ಎಂಬ ಹೆಸರು ಕಾಣುತ್ತಿತ್ತು, ಆದರೆ ಆಟೋ ಬದಲಿಸುವ ಬರದಲ್ಲಿ ಮಂಗಳೂರಿನ ಆಟೋ ಮತ್ತು ಬೆಂಗಳೂರಿನ ಆಟೋದ ಬಣ್ಣ ವ್ಯತ್ಯಾಸ ತಿಳಿಯದೇ ಹೋದದ್ದು ವಿಪರ್ಯಾಸ.

ಬಾಂಬ್ ನ ತೀವ್ರತೆ ಕಡಿಮೆಯಾಗ್ತಿದೆ:

ನಿನ್ನೆ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿದೆ ಎಂಬ ಸುದ್ದಿ ಹರಡುತ್ತಲೇ ಕನ್ನಡ ಟಿವಿ ಚಾನಲ್ ಗಳಲ್ಲಿ ಬಾಂಬಿನ ತೂಕ, ಬಳಸಿದ ಸ್ಪೋಟಕ, ಅದರ ನಿರ್ಮಾಣ ಎಲ್ಲವೂ ಭಾರೀ ತೀವ್ರ ಸ್ವರೂಪ ಪಡಕೊಂಡಿತ್ತು.

10 ಕೆಜಿ ತೂಕದ ಆರ್ಡಿಎಕ್ಸ್ ಸ್ಪೋಟಕದಿಂದ ತಯಾರಿಸಿದ್ದು, ರಿಮೋಟ್ ನಿಯಂತ್ರಿತ ಬಾಂಬ್ ಎಂದು ಬಣ್ಣಿಸಿದ್ದ ಟಿವಿಯಲ್ಲಿ, ಶಂಕಿತ ಉಗ್ರ ಹಿಂದು ಎಂದು ಅರಿತದ್ದೇ ತಡ, ಆರ್ಡಿಎಕ್ಸೂ ಇಲ್ಲ, ತೂಕವೂ ಇಲ್ಲ, ರಿಮೋಟೂ ಮಾಯ.

ಭಯೋತ್ಪಾದನೆ ಯಾರೇ ನಡೆಸಿದರೂ ಅದನ್ನು ವಿರೋಧಿಸಬೇಕಾದ್ದು ಮಾಧ್ಯಮ ಧರ್ಮವಾಗಿದೆ. ಆತನ ಜಾತಿ, ಧರ್ಮ, ಹೆಸರು ನೋಡಿಯಾಗಬಾರದು. ಭಾರತದಲ್ಲಿ ಹಲವಾರು ಉಗ್ರಗಾಮಿ ಚಟುವಟಿಕೆಗಳನ್ನು ನಡೆಸಿದ್ದು ಹಿಂದೂ ಧರ್ಮದಲ್ಲೇ ಗುರುತಿಸಿಕೊಂಡ ಉಗ್ರಗಾಮಿಗಳಾಗಿದ್ದಾರೆ. ಭಯೋತ್ಪಾದಕರಿಗೆ ಧರ್ಮವಿಲ್ಲ, ಯಾವ ಧರ್ಮದಲ್ಲೂ ಭಯೋತ್ಪಾದನೆಗೆ ಆಸ್ಪದವಿಲ್ಲ. ಆದ್ದರಿಂದ ಕರ್ನಾಟಕದ ಟಿವಿ ಮಾಧ್ಯಮಗಳು ಯಾರದೇ ಒತ್ತಡಕ್ಕೆ ಮಣಿಯದೆ ಸತ್ಯ ನಿಷ್ಠೆಯಿಂದ ವರದಿ ಮಾಡವಂತಾಗಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ಸತ್ಯವನ್ನು ಬಿತ್ತರಿಸಿದಾಗಲೂ ಜನರು ಅದು ಸುಳ್ಳೆಂದು ಭಾವಿಸಿಯಾರು.

error: Content is protected !! Not allowed copy content from janadhvani.com