janadhvani

Kannada Online News Paper

ಮಂಗಳೂರು ಗೋಲಿಬಾರ್: ಪೋಲೀಸರೇ ಹೊಣೆ- ನ್ಯಾಯಮಂಡಳಿ ವರದಿ

ಮಂಗಳೂರು, ಜನವರಿ 21 : ಮಂಗಳೂರಿನಲ್ಲಿ ಪೊಲೀಸರು ನಡೆಸಿದ ಗೋಲಿಬಾರ್ ಕರ್ನಾಟಕದಲ್ಲಿ ಬಿಸಿ-ಬಿಸಿ ಚರ್ಚೆಗೆ ಕಾರಣವಾಗಿತ್ತು. ಗಲಭೆ ನಿಯಂತ್ರಿಸಲು ಪೊಲೀಸರು ವಿಫಲವಾಗಿದ್ದಾರೆ ಎಂದು ವರದಿ ಹೇಳಿದ್ದು, ಗೋಲಿಬಾರ್ ಮತ್ತು ನಂತರದ ಬೆಳವಣಿಗೆಗಳ ಚಿತ್ರಣವನ್ನು ತೆರೆದಿಟ್ಟಿದೆ.

ಮಂಗಳೂರು ಗೋಲಿಬಾರ್ ಕುರಿತು ವರದಿ ನೀಡಲು ರಚನೆ ಮಾಡಿದ್ದ ಮೂವರು ಸದಸ್ಯರ ಸಾರ್ವಜನಿಕರ ನ್ಯಾಯಮಂಡಳಿ ತನ್ನ ವರದಿಯನ್ನು ಸಿದ್ಧಪಡಿಸಿದೆ. 32 ಪುಟಗಳ ವರದಿಯಲ್ಲಿ ಹಲವಾರು ವಿಚಾರಗಳ ಕುರಿತು ಬೆಳಕು ಚೆಲ್ಲಲಾಗಿದೆ. ನ್ಯಾಯಮಂಡಳಿ ಮುಂದೆ ಹಾಜರಾಗಿ ಪೊಲೀಸರು ಯಾವುದೇ ಹೇಳಿಕೆಯನ್ನು ನೀಡಿಲ್ಲ.

ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಸತ್‌ನಲ್ಲಿ ಅಂಗೀಕಾರ ಸಿಕ್ಕ ಬಳಿಕ ದೇಶದ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆ ಆರಂಭವಾಯಿತು. ಬಿಜೆಪಿ ಸರ್ಕಾರವಿರುವ ಕರ್ನಾಟಕದ ಮಂಗಳೂರಿನಲ್ಲಿಯೂ ಸಿಎಎ ವಿರುದ್ಧ ದೊಡ್ಡ ಹೋರಾಟ ನಡೆಯಿತು.

ಡಿಸೆಂಬರ್ 19ರಂದು ಮಂಗಳೂರಿನಲ್ಲಿ ಪ್ರತಿಭಟನೆ ವೇಳೆ ಹಿಂಸಾಚಾರ ನಡೆಯಿತು. ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಇಬ್ಬರು ಸಾವನ್ನಪ್ಪಿದರು. ಪ್ರತಿಭಟನೆ, ಗಲಭೆ ತಡೆಯಲು ಪೊಲೀಸರು ವಿಫಲರಾದರು. ಹಿಂಸಾಚಾರವನ್ನು ಪೊಲೀಸರು ವೈಭವೀಕರಿಸಿ ಹೇಳುತ್ತಿದ್ದಾರೆ ಎಂದು ವರದಿ ಹೇಳಿದೆ.

ಸಾರ್ವಜನಿಕರ ನ್ಯಾಯಮಂಡಳಿ
ಮಂಗಳೂರು ಗೋಲಿಬಾರ್ ಪ್ರಕರಣದ ಕುರಿತು ವರದಿ ನೀಡಲು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ನೇತೃತ್ವದ ಸಾರ್ವಜನಿಕರ ನ್ಯಾಯಮಂಡಳಿ ರಚನೆ ಮಾಡಲಾಗಿತ್ತು. ಮಂಡಳಿಯಲ್ಲಿ ವಕೀಲ ಬಿ. ಟಿ. ವೆಂಕಟೇಶ್, ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಇದ್ದರು. 32 ಪುಟಗಳ ವರದಿಯನ್ನು ತಯಾರು ಮಾಡಲಾಗಿದ್ದು. ಗಲಭೆ, ಗೋಲಿಬಾರ್‌ ಬಗ್ಗೆ ಸಂಪೂರ್ಣ ಸತ್ಯ ಹೊರ ಬರಲು ನ್ಯಾಯಾಂಗ ಆಯೋಗದ ಮೂಲಕ ತನಿಖೆ ನಡೆಸುವಂತೆ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.

ಪೊಲೀಸರು ಹೇಳಿಕೆ ನೀಡಿಲ್ಲ
ಜನವರಿ 6 ಮತ್ತು 7ರಂದು ಸಾರ್ವಜನಿಕರ ನ್ಯಾಯಮಂಡಳಿ ಸದಸ್ಯರು ಮಂಗಳೂರಿಗೆ ಭೇಟಿ ನೀಡಿದ್ದರು. ಹಲವು ಜನರು, ರಾಜಕೀಯ ಮುಖಂಡರು ನ್ಯಾಯಮಂಡಳಿ ಎದುರು ಹಾಜರಾಗಿ ಹೇಳಿಕೆ ನೀಡಿದ್ದಾರೆ. ಆದರೆ, ಪೊಲೀಸರು ನ್ಯಾಯಮಂಡಳಿ ಮುಂದೆ ಯಾವುದೇ ಹೇಳಿಕೆಯನ್ನು ನೀಡಿಲ್ಲ ಎಂದು ಮಂಡಳಿ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ.

ಗಲಭೆ ತಡೆಯಬಹುದಿತ್ತು
ಮಂಗಳೂರಿನ ಪೊಲೀಸರು ಸರಿಯಾದ ಕ್ರಮಗಳನ್ನು ತೆಗೆದುಕೊಂಡಿದ್ದರೆ ಡಿಸೆಂಬರ್ 19ರಂದು ನಡೆದ ಗಲಭೆಯನ್ನು ತಡೆಯಬಹುದಿತ್ತು. ಜನಸಾಮಾನ್ಯರಿಗೆ ಆದ ತೊಂದರೆ ಆಗದಂತೆ ಕ್ರಮಗಳನ್ನು ಕೈಗೊಳ್ಳಬಹುದಾಗಿತ್ತು. ಪೊಲೀಸರು 144 ಸೆಕ್ಷನ್ ಜಾರಿಗೊಳಿಸಿದರೂ ಅದನ್ನು ಜನರಿಗೆ ತಲುಪಿಸಲು ವಿಫಲರಾದರು. ಬಸ್ ನಿಲ್ದಾಣದಲ್ಲಿ ನಿಂತವರು, ಮಾರುಕಟ್ಟೆಗೆ ಬಂದ ಜನರು, ವಿದ್ಯಾಸಂಸ್ಥೆಗಳಿಗೆ 144 ಸೆಕ್ಷನ್ ಜಾರಿಗೊಳಿಸಿದ ಬಗ್ಗೆ ಮಾಹಿತಿಯನ್ನೇ ನೀಡಿರಲಿಲ್ಲ ಎಂದು ನ್ಯಾಯಮಂಡಳಿ ಹಲವು ಜನರು ಹೇಳಿಕೆಗಳನ್ನು ಉಲ್ಲೇಖಿಸಿ ವರದಿಯಲ್ಲಿ ಹೇಳಿದೆ.

ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿ ಬಳಕೆ
ಗಲಭೆ ನಡೆದ ದಿನ ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ನಗರದ ಹಲವು ಭಾಗಗಳಲ್ಲಿ ಜನರು ತಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ತೊಡಗಿದ್ದರು. ಜನರನ್ನು ರಕ್ಷಣೆ ಮಾಡಲು ಪೊಲೀಸರು ಮುಂದಾಗಲಿಲ್ಲ. ಅಗತ್ಯವಿಲ್ಲದಿದ್ದರೂ, ಯಾವುದೇ ಪ್ರಚೋದನೆ ಇಲ್ಲದಿದ್ದರೂ ಲಾಠಿ ಚಾರ್ಜ್ ಮಾಡುವ ತೀರ್ಮಾನವನ್ನು ಕೈಗೊಂಡರು. ಯಾವುದೇ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದ ಜನರನ್ನು ಸಹ ಟಾರ್ಗೆಟ್ ಮಾಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಪೊಲೀಸರು ವೈಭವೀಕರಿಸಿದ್ದಾರೆ
ಬಂದರು ಠಾಣೆಯ ಮೇಲೆ 7000 ಜನರು ದಾಳಿ ನಡೆಸಿದರು ಎಂಬ ಪೊಲೀಸರ ಹೇಳಿಕೆ ವೈಭವೀಕರಣಗೊಂಡಿದೆ. ಗೋಲಿಬಾರ್ ನಡೆಸುವಾಗ ಪೊಲೀಸರು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಗಲಭೆ ವೇಳೆ ಗಾಯಗೊಂಡವರ ಹೇಳಿಕೆಯಿಂದ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ. ಸಾರ್ವಜನಿಕ ಆಸ್ತಿಯನ್ನು ರಕ್ಷಿಸಲು ಸಹ ಪೊಲೀಸರು ವಿಫಲರಾದರು. ಗಲಭೆ ವೇಳೆ ಬಂಧಿತರಾದ ಜನರು ಇನ್ನೂ ನ್ಯಾಯಾಂಗ ಬಂಧನದಲ್ಲಿಯೇ ಇದ್ದಾರೆ. ಅವರಲ್ಲಿ ಹಲವು ಜನರು ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂಬುದನ್ನು ಗಮನಿಸಬೇಕು.

ಸಣ್ಣ ವ್ಯಾಪಾರಿಗಳಿಗೆ ತೊಂದರೆ
ಗಲಭೆ ವೇಳೆ ಸಣ್ಣ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳಿಗೆ ಅಪಾರವಾದ ನಷ್ಟವಾಗಿದೆ. ಇವರಿಗೆ ಪರಿಹಾರವನ್ನು ಒದಗಿಸುವ ಕಾರ್ಯ ಆಗಬೇಕು. ಗಲಭೆ, ಗೋಲಿಬಾರ್‌ ಬಗ್ಗೆ ಸಂಪೂರ್ಣ ಸತ್ಯ ಹೊರ ಬರಲು ನ್ಯಾಯಾಂಗ ತನಿಖೆಗೆ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ. ಕರ್ನಾಟಕದ ಪ್ರತಿಪಕ್ಷವಾದ ಕಾಂಗ್ರೆಸ್ ಸಹ ಗಲಭೆ ಬಗ್ಗೆ ನ್ಯಾಯಾಂಗ ತನಿಖೆಗೆ ಒತ್ತಾಯಿಸಿತ್ತು.

error: Content is protected !! Not allowed copy content from janadhvani.com