janadhvani

Kannada Online News Paper

ಬಜ್ಪೆ ವಿಮಾನ ನಿಲ್ದಾಣದಲ್ಲಿ ಶಂಕಾಸ್ಪದ ಬಾಂಬ್ ಪತ್ತೆ?

ಮಂಗಳೂರು,ಜ.20: ಬಜ್ಪೆ ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಿಗ್ಗೆ ಶಂಕಾಸ್ಪದ ಬ್ಯಾಗ್ ಪತ್ತೆಯಾಗಿದೆ. ಇದನ್ನು ಪರಿಶೀಲಿಸಿದಾಗ ಸುಧಾರಿತ ಬಾಂಬ್‌ಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿನ ಭದ್ರತಾ ತಪಾಸಣಾ ಗೇಟ್ ಬಳಿ ಬ್ಯಾಗ್ ಪತ್ತೆಯಾಗಿದೆ. ಬ್ಯಾಗ್‌ ಗಮನಿಸಿದ ನಿಲ್ದಾಣದ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸ್ ಅಧಿಕಾರಿಗಳು ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳದೊಂದಿಗೆ ವಿಮಾನ ನಿಲ್ದಾಣಕ್ಕೆ ದೌಡಾಯಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿನ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿದ್ದಾರೆ.

ಬಾಂಬ್ ಇರಿಸಲಾಗಿದ್ದ ಬ್ಯಾಗ್ ನ್ನು ನಿಲ್ದಾಣದ ಆವರಣದ ಹೊರಗೆ ತರಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸಿಐಎಸ್‍ಎಫ್ ಭದ್ರತಾ ಪಡೆ ನಿಲ್ದಾಣದ ಸುತ್ತಲೂ ಬಿಗಿ ಬಂದೋಬಸ್ತ್ ಕೈಗೊಂಡಿದೆ. ವಿಮಾನ ನಿಲ್ದಾಣದಿಂದ ಸುಮಾರು 500 ಮೀಟರ್ ನಷ್ಟು ದೂರದಲ್ಲಿ ಇದನ್ನು ಇರಿಸಲಾಗಿದ್ದು, ಈ ಭಾಗಕ್ಕೆ ಯಾರಿಗೂ ಪ್ರವೇಶಿಸಲು ಅನುಮತಿ ನಿರಾಕರಿಸಲಾಗಿದೆ.

ಅಪರಿಚಿತ ವ್ಯಕ್ತಿಗಳು ಆಟೊ ರಿಕ್ಷಾದಲ್ಲಿ ಬಂದು ಬ್ಯಾಗ್ ಇರಿಸಿ ಹೋಗಿದ್ದಾರೆ ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಪ್ರಯಾಣಿಕರ ಸುರಕ್ಷಿತೆಯ ದೃಷ್ಟಿಯಿಂದ ವಿಮಾನ ನಿಲ್ದಾಣಕ್ಕೆ ಬರುವ ದಾರಿಯನ್ನು ಬದಲಾವಣೆ ಮಾಡಲಾಗಿದೆ. ವಿಮಾನಗಳ ಸಂಚಾರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ವಿಮಾನ ಸಂಚಾರ ಎಂದಿನಂತೆ ನಡೆಯುತ್ತಿದೆ ಎನ್ನಲಾಗಿದೆ.

ಸಿಸಿಟಿವಿ ಕ್ಯಾಮೆರಾ ನಿಷ್ಕ್ರಿಯ :ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಂದು ಪತ್ತೆಯಾಗಿರುವ ಸಜೀವ ಬಾಂಬ್ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗುತ್ತಿದೆ. ಈ ಬಾಂಬ್ ಅನ್ನು ಇಲ್ಲಿ ಇಟ್ಟಿದ್ದು ಯಾರು? ಬಾಂಬ್ ಇಡಲು ಕಾರಣ ಏನು? ಎಂಬ ಕುರಿತ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ. ಆದರೆ, ಅವರ ತನಿಖೆಗೆ ಕೆಟ್ಟುಕೂತಿರುವ ಸಿಸಿಟಿವಿ ಕ್ಯಾಮೆರಾಗಳಿಂದಾಗಿ ಹಿನ್ನಡೆ ಉಂಟಾಗುತ್ತಿದೆ ಎಂದು ತಿಳಿದುಬಂದಿದೆ.

ಇಂದು ವಿಮಾನ ನಿಲ್ದಾಣಕ್ಕೆ ಬಂದು ಹೋದವರ ಕುರಿತು ಪರಿಶೀಲನೆ ನಡೆಸಲು ಪೊಲೀಸರು ಸಿಸಿಟಿವಿ ದೃಶ್ಯ ನೊಡಲು ಮುಂದಾಗಿದ್ದಾರೆ. ಆದರೆ, ವಿಮಾನ ನಿಲ್ದಾಣದ ಬಹುತೇಕ ಸಿಸಿಟಿವಿ ಕ್ಯಾಮೆರಾಗಳು ಕೆಟ್ಟುಹೋಗಿವೆ. ಹೀಗಾಗಿ ಪೊಲೀಸರು ತನಿಖೆಗೆ ಹಿಂದೇಟಾಗಿದೆ ಎನ್ನಲಾಗುತ್ತಿದೆ. ಇಂತಹ ಭದ್ರತಾ ವೈಫಲ್ಯವನ್ನೇ ಕೆಲವು ಆಗಂತುಕರು ಬಳಸಿಕೊಂಡಿರುವ ಶಂಕೆಯೂ ಇದೆ.

ಸಿಎಎ ಪ್ರತಿಭಟನೆಗೆ ಬಾಂಬ್ ನಂಟು? ಇತ್ತೀಚೆಗೆ ಸಿಎಎ ವಿರೋಧ ಹೋರಾಟ ನಗರದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿದ್ದ ಹಿನ್ನೆಲೆಯಲ್ಲಿ ಈ ಹೋರಾಟಕ್ಕೂ, ವಿಮಾನ ನಿಲ್ದಾಣದಲ್ಲಿ ಬಾಂಬ್ ಎಸೆದಿರುವ ಕೃತ್ಯಕ್ಕೂ ಸಂಬಂಧ ಇದೆಯೇ?, ಹಾಗೂ ಭದ್ರತಾ ವೈಫಲ್ಯದ ಕುರಿತು ಸೂಕ್ತ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಕುರಿತು ಆತಂಕ ಪಡುವ ಅಗತ್ಯವಿಲ್ಲ; ಪೊಲೀಸ್​ ಆಯುಕ್ತ ಡಾ. ಹರ್ಷ ಸ್ಪಷ್ಟನೆ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆಯಾಗಿರುವ ಕುರಿತು ಸಾರ್ವಜನಿಕರು ಆತಂಕಪಡುವ ಅಗತ್ಯ ಇಲ್ಲ ಎಂದು ಮಂಗಳೂರು ಪೊಲೀಸ್​ ಆಯುಕ್ತ ಡಾ. ಹರ್ಷ ತಿಳಿಸಿದ್ದಾರೆ.

ಘಟನ ಸಂಬಂಧ ಇಂದು ಪತ್ರಿಕಾಗೋಷ್ಠಿ ಕರೆದು ಮಾತನಾಡಿರುವ ಅವರು, “ವಿಮಾನ ನಿಲ್ದಾಣದಲ್ಲಿ ಬಾಂಬ್ ಇರುವ ಬ್ಯಾಗ್​ ಅನ್ನು ಇಡಲಾಗಿದೆ ಎಂದು ಮಾಹಿತಿ ದೊರೆತ ತಕ್ಷಣ ಬಾಂಬ್ ನಿಷ್ಕ್ರಿಯ ದಳ ವಿಮಾನ ನಿಲ್ದಾಣಕ್ಕೆ ತೆರಳಿದೆ. ಭದ್ರತಾ ನಿಯಮದ ಪ್ರಕಾರ ಈ ಬಾಂಬ್ ಅನ್ನು ನಿಷ್ಕ್ರಿಯಗೊಳಿಸುವ ಕೆಲಸ ನಡೆಯುತ್ತಿದೆ. ಸ್ಥಳದಲ್ಲಿ ಯಾವುದೇ ಆತಂಕ ಅಥವಾ ಭಯದ ವಾತಾವರಣ ಇಲ್ಲ. ಭದ್ರತಾ ವೈಫಲ್ಯದ ಕುರಿತು ತನಿಖೆ ನಡೆಸಲಾಗುತ್ತಿದೆ” ಎಂದು ನಗರ ಪೊಲೀಸ್​ ಆಯುಕ್ತ ಡಾ. ಹರ್ಷ ತಿಳಿಸಿದ್ದಾರೆ.

ಉಗ್ರರು ಈ ಕೃತ್ಯ ಎಸಗಿರುವ ಶಂಕೆ:

ರಾಜ್ಯದಲ್ಲಿ ಇತ್ತೀಚೆಗೆ ಅನೇಕ ಕಡೆಗಳಲ್ಲಿ ಉಗ್ರರನ್ನು ಬಂಧಿಸಲಾಗಿತ್ತು. ಇದಲ್ಲದೆ ಜನವರಿ 26 ಗಣರಾಜ್ಯೋತ್ಸವ ಹತ್ತರವಾಗುತ್ತಿದ್ದು ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕದಡುವ ಸಲುವಾಗಿ ಉಗ್ರರು ಇಂತಹ ಕೃತ್ಯಕ್ಕೆ ಕೈ ಹಾಕಿದ್ದಾರ? ಎಂಬ ಶಂಕೆ ವ್ಯಕ್ತವಾಗಿದೆ.

ಅಲ್ಲದೆ, ಮತ್ತೊಂದು ಕೋನದಲ್ಲೂ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಉಗ್ರರು ನಗರದಲ್ಲಿ ಬೀಡುಬಿಟ್ಟಿದ್ದು, ತಮ್ಮ ಸಂಘಟನೆಯ ಶಕ್ತಿಯನ್ನು ತೋರ್ಪಡಿಸುವ ಸಲುವಾಗಿ ಉದ್ದೇಶ ಪೂರ್ವಕವಾಗಿ ವಿಮಾನ ನಿಲ್ದಾಣದಲ್ಲಿ ಸಂಪರ್ಕ ಕಡಿತ ಮಾಡಿದ ಬಾಂಬ್​ ಇಡಲಾಗಿದೆಯೇ? ಅಥವಾ ಅವರ ವಿಧ್ವಂಸಕ ಕೃತ್ಯ ಕೂದಲೆಳೆಯಲ್ಲಿ ತಪ್ಪಿತೇ? ಎಂಬ ಕುರಿತು ತನಿಖೆ ನಂತರ ಉತ್ತರ ಸಿಗಲಿದೆ.

ಇದೀಗ ಬಾಂಬ್​ ಅನ್ನು ಪಣಂಬೂರು ಬೀಚ್​ಗೆ ಬಾಂಬ್​ ನಿಷ್ಕ್ರಿಯ ದಳದ ಅಧಿಕಾರಿಗಳು ರವಾನೆ ಮಾಡಿದ್ದಾರೆ ಎಂಬ ವರದಿಗಳು ಲಭ್ಯವಾಗುತ್ತಿದೆ.

error: Content is protected !! Not allowed copy content from janadhvani.com