janadhvani

Kannada Online News Paper

ಅಮಿತ್ ಶಾಗೆ ನೆರೆ ಸಂತ್ರಸ್ತರ ಬಗ್ಗೆ ಕಾಳಜಿ ಇಲ್ಲ, ಪೌರತ್ವ ಕಾಯ್ದೆ ಮುಖ್ಯವಾಗಿದೆ

ಬೆಂಗಳೂರು,ಜ.19:ಕೇಂದ್ರ ಗೃಹ ಸಚಿವ ಅಮಿತ್ ಶಾ ಪೌರತ್ವ ಕಾಯ್ದೆ ಪರ ಪ್ರಚಾರ ಮಾಡಲು ಬಂದಿದ್ದಾರೆ ಹೊರತು ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅಲ್ಲವೇ ಅಲ್ಲ. ತಮ್ಮ ಬಿಜೆಪಿ ಮತ ಬ್ಯಾಂಕ್ ಉಳಿಸಿಕೊಳ್ಳಲು ಅಮಿತ್ ಶಾ ರಾಜ್ಯಕ್ಕೆ ಬಂದಿದ್ದಾರೆ. ಬಿಜೆಪಿಗರಿಗೆ ರಾಜ್ಯದ ಬಡವರು ಮತ್ತು ನೆರೆ ಸಂತ್ರಸ್ತರ ಬಗ್ಗೆ ಕಾಳಜಿ ಇಲ್ಲ. ಇವರಿಗೆ ನೆರೆ ಸಂತ್ರಸ್ತರ ಸಮಸ್ಯೆಗಳಿಗಿಂತ ಪೌರತ್ವ ಕಾಯ್ದೆಯೇ ಮುಖ್ಯವಾಗಿದೆ” ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಮಲ್ಲಿಕಾರ್ಜುನ್ ಖರ್ಗೆ, ಹುಬ್ಬಳ್ಳಿಯಲ್ಲಿ ಅಮಿತ್ ಶಾ ಭಾಷಣದ ವೇಳೆ ರಾಜ್ಯಕ್ಕೆ ಸಂಬಂಧಿಸಿದ ಒಂದು ಸಮಸ್ಯೆ ಬಗ್ಗೆಯೂ ಪ್ರಸ್ತಾಪಿಸಲಿಲ್ಲ. ಪೌರತ್ವ ಕಾಯ್ದೆ ಬದಲಿಗೆ ಕಳಸಾ ಬಂಡೂರಿ ನಾಲೆ ಯೋಜನೆ ಬಗ್ಗೆ ಯಾಕೇ ಮಾತಾಡಲಿಲ್ಲ? ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಮಿತ್ ಶಾಗೆ ಪ್ರಶ್ನಿಸಲಿ ಎಂದು ಸವಾಲ್ ಹಾಕಿದರು.

ದಲಿತ ವಿರೋಧಿಗಳಿಂದಲೇ ಸಿಎಎಗೆ ವಿರೋಧ ವ್ಯಕ್ತವಾಗುತ್ತಿದೆ ಎಂಬ ಹೇಳಿಕೆ ಅಮಿತ್ ಶಾ ನೀಡಿದ್ದಾರೆ. ಬಿಜೆಪಿಗೇ ದಲಿತರ ಬಗ್ಗೆ ಕಾಳಜಿ ಇಲ್ಲ. ಸಿಎಎ ಬಗ್ಗೆ ಪ್ರಚೋದನಕಾರಿ ಭಾಷಣ ಮಾಡಲು ಹೀಗೆ ಆರೋಪ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಸಂಬಂಧ ಪ್ರತಿಕ್ರಿಯಿಸಿದ ಖರ್ಗೆ, ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ಸೋನಿಯಾ ಗಾಂಧಿಯವರು ಏನೇ ತೀರ್ಮಾನ ಮಾಡಲಿ, ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಯಾವಾಗ ತೀರ್ಮಾನ ಮಾಡುತ್ತಾರೇ ಎನ್ನುವುದು ನಮಗಿಂತ ಮಾಧ್ಯಮದವರಿಗೇ ಗೊತ್ತು ಎಂದರು.

error: Content is protected !! Not allowed copy content from janadhvani.com