janadhvani

Kannada Online News Paper

CAA: ಕಲ್ಲಿಕೋಟೆಯಲ್ಲಿ ಜನಸಾಗರ: ಕೊನೆಯುಸಿರು ತನಕ ನಿಮ್ಮೊಂದಿಗಿರುವೆ- ಕಪಿಲ್ ಸಿಬಲ್

ಕಲ್ಲಿಕೋಟೆ,ಜ.18: ಕೇಂದ್ರ ಸರಕಾರವು ಈ ದೇಶವನ್ನು ಧರ್ಮಾಧಾರಿತವಾಗಿ ವಿಭಜಿಸುವ, ಅಸಾಂವಿಧಾನಿಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡಿದ್ದು, ದೇಶಾದ್ಯಂತ ಇದರ ವಿರುದ್ಧ ದೈನಂದಿನ ಪ್ರತಿಭಟನೆಗಳು ತಾರಕಕ್ಕೇರುತ್ತಿದೆ. ಏತನ್ಮಧ್ಯೆ ತನ್ನ ನಿಲುವುನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂಬ ನೆಲೆಯಲ್ಲೇ ಕೇಂದ್ರಾಡಳಿತ ಮುಂದುವರಿದಿದೆ.

ಇಂದು ಕೇರಳದ ಕಲ್ಲಿಕೋಟೆಯಲ್ಲಿ ಯುಡಿಎಫ್ ನೇತೃತ್ವದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ , ಎನ್ಆರ್ಸಿ ಮತ್ತು ಎನ್ ಪಿ ಆರ್ ವಿರುದ್ಧ ನಡೆದ ಪ್ರತಿಭಟನಾ ಸಮಾವೇಶವು ಮಗದೊಂದು ಚರಿತ್ರೆಗೆ ಸಾಕ್ಷಿಯಾಯಿತು. ಕಲ್ಲಿಕೋಟೆ ಕಡಲ ಕಿನಾರೆಯು ಜಲ ಮತ್ತು ಜನ ಸಾಗರದ ಸಮಾಗಮವಾಗಿ ಮಾರ್ಪಟ್ಟಿತು.

“ಪೌರತ್ವ ತಿದ್ದುಪಡಿ ಕಾಯ್ದೆ ಕೇವಲ ಮುಸ್ಲಿಮರ ವಿರುದ್ಧವಲ್ಲ. ಇದು ದೇಶದ ಎಲ್ಲ ನಾಗರಿಕರ ವಿರುದ್ಧವಾಗಿದೆ. ನಾನು ಕೊನೆಯ ಉಸಿರು ತನಕ ಇದರ ವಿರುದ್ಧ ಹೋರಾಟದಲ್ಲಿ ನಿಮ್ಮೊಂದಿಗಿರುವೆನು” ಹಿರಿಯ ವಕೀಲರಾದ, ಕಾಂಗ್ರೆಸ್ ನೇತಾರ ಕಪಿಲ್ ಸಿಬಲ್ ಹೇಳಿದರು.

ಯುಡಿಎಫ್ ಆಯೋಜಿಸಿದ್ದ ಮಲಬಾರ್ ಪ್ರಾದೇಶಿಕ ರ್ಯಾಲಿಯಲ್ಲಿ ಅವರು ಮಾತನಾಡುತ್ತಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಕೇಂದ್ರ ಸರಕಾರ ಜನರೆಡೆಯಲ್ಲಿ ಬಿತ್ತರಿಸುತ್ತಿರುವ ಒಂಬತ್ತು ಸುಳ್ಳುಗಳನ್ನು ಅವರು ಜನರ ಮುಂದಿಟ್ಟಿದ್ದಾರೆ.

ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಾರಂಭವಾಗಿಲ್ಲ ಎಂದು ಕೇಂದ್ರ ಹೇಳಿದೆ, ಇದು ಹಸಿ ಸುಳ್ಳು, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪ್ರಕ್ರಿಯೆಯು ಎನ್ ಆರ್ ಸಿ ಯ ಪ್ರಾರಂಭವಾಗಿದೆ. ಜನಗಣತಿಗೆ ಬರುವ ಅಧಿಕಾರಿ ನಿಮ್ಮ ಹೆಸರನ್ನು ಕೇಳುತ್ತಾರೆ. ನಿಮ್ಮ ಕುಟುಂಬದ ಸದಸ್ಯರ ಹೆಸರನ್ನು ಕೇಳಲಾಗುತ್ತದೆ. ಪೋಷಕರ ಹೆಸರನ್ನು ಮುಂತಾದವುಗಳ ಲಿಖಿತ ದಾಖಲೆ ಒದಗಿಸದಿದ್ದಲ್ಲಿ, ರಿಜಿಸ್ಟರ್‌ನಲ್ಲಿ ‘ಡಿ’ ಡೌಟ್ಫುಲ್ ಅಥವಾ ‘ಅನುಮಾನಾಸ್ಪದ’ ಎಂದು ದಾಖಲಿಸಲಾಗುತ್ತದೆ.

ನಂತರ, ಮೂವತ್ತು ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ದಾಖಲೆ ಸಲ್ಲಿಸುವಂತೆ ಸಮಯ ನೀಡಲಾಗುತ್ತದೆ. ಅದರ ನಂತರ, 90 ದಿನಗಳನ್ನು ನೀಡಲಾಗುತ್ತದೆ ಇದರೊಳಗೆ ದಾಖಲೆ ಸಲ್ಲಿಸಲು ವಿಫಲವಾದಲ್ಲಿ ತಮ್ಮ ಹೆಸರನ್ನು ಭಾರತೀಯ ನಾಗರಿಕರ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ, ಇದಾಗಿದೆ ನಡೆಯಲಿರುವುದು ಎಂದು ಸಿಬಲ್ ಹೇಳಿದರು.

ಅಸ್ಸಾಂನಲ್ಲಿ ಎನ್ಆರ್ಸಿ ಅನುಷ್ಠಾನಗೊಂಡು ಹೊರಹಾಕಲ್ಪಟ್ಟ 19 ಲಕ್ಷ ಜನರಲ್ಲಿ 10 ರಿಂದ 12 ಲಕ್ಷ ಹಿಂದೂಗಳು. ಹಿಂದೂಗಳನ್ನು ದೇಶದಿಂದ ಹೊರಹಾಕಬಾರದೆಂಬ ಕಲ್ಪನೆಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಿದೆ. ಯಾವುದೇ ಕಾರಣಕ್ಕೂ ಹಿಂದೂಗಳನ್ನು ಹೊರಹಾಕಲಾಗುವುದಿಲ್ಲ ಎಂದು ಬಿಜೆಪಿ ನಾಯಕತ್ವ ಭರವಸೆ ನೀಡಿದೆ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.

ದೇಶದ ಅನೇಕ ಭಾಗಗಳಲ್ಲಿ, ಪೌರತ್ವ ನೋಂದಣಿಯಿಂದ ಹೊರಹಾಕಲ್ಪಟ್ಟವರಿಗಾಗಿ ಕಾರಾಗೃಹಗಳನ್ನು ನಿರ್ಮಿಸಲಾಗುತ್ತಿದೆ. ಇದರ ನಿರ್ಮಾಣ ಕರ್ನಾಟಕದಲ್ಲೂ ನಡೆಯುತ್ತಿದೆ. ಅಷ್ಟೇ ಅಲ್ಲ,1988 ಮಂದಿಯನ್ನು ಈಗ ನಿರ್ಮಿಸಲಾದ ಜೈಲಿಗೆ ಹಾಕಲಾಗಿದೆ, ಈಗಾಗಲೇ 29 ಜನರು ಸಾವನ್ನಪ್ಪಿದ್ದಾರೆ. ಆದರೂ, ದೇಶದಲ್ಲಿ ಅಂತಹ ಜೈಲು ಇಲ್ಲ ಎಂದು ಕೇಂದ್ರ ಸರಕಾರ ದೊಡ್ಡ ಸುಳ್ಳು ಹೇಳುತ್ತದೆ. ಪೌರತ್ವ ಕಾನೂನಿನ ವಿರುದ್ಧದ ಪ್ರತಿಭಟನೆಗಳ ವಿರುದ್ಧ ಯಾವುದೇ ಬಲಪ್ರಯೋಗ ನಡೆಸಲಿಲ್ಲವೆಂದೂ ಸರ್ಕಾರ ಹೇಳಿತ್ತಿದೆ, ಸ್ಪಷ್ಟ ಸುಳ್ಳು ಎಂದು ಅವರು ಹೇಳಿದರು.

ಕೇಂದ್ರವು ತಂದದ್ದು ಪೌರತ್ವ ತಿದ್ದುಪಡಿ ಕಾಯ್ದೆ ಅಲ್ಲ. ಇದು ನಿರಂಕುಶ ಕಾನೂನು ಎಂದು ನಾನು ಹೇಳ ಬಯಸುತ್ತೇನೆ, ನನ್ನ ಬಲಬದಿಯಲ್ಲಿ ಕಾಣುತ್ತಿರುವ ಆಳವಾದ ಸಮುದ್ರಕ್ಕೆ ಈ ಕಾನೂನನ್ನು ಎಸೆಯುವ ತನಕ ನಮಗೆ ವಿಶ್ರಾಂತಿಯಿಲ್ಲ.

ಪೌರತ್ವ ಕಾನೂನಿನ ಕುರಿತು ನ್ಯಾಯಾಲಯದಲ್ಲಿ ಏನು ಬೇಕಾದರೂ ನಡೆಯಬಹುದು. ಆದರೆ ನ್ಯಾಯಾಲಯದ ಹೊರಗೆ ಭಾರತೀಯರು ಒಗ್ಗಟ್ಟಾಗಿ ನಿಂತು ಈ ಕಾನೂನನ್ನು ವಿರೋಧಿಸಿ ಸೋಲಿಸಲಿದ್ದಾರೆ,ಅದು ಕಾಂಗ್ರೆಸ್ ನ ಮಾತು. ಕಾಂಗ್ರೆಸ್ ಆ ಭರವಸೆಯನ್ನು ಈಡೇರಿಸಲಿದೆ ಎಂದು ಹೇಳಿದರು.

ನಮ್ಮ ಪ್ರಧಾನಿಯವರು ನಿದ್ದೆಯಲ್ಲಿ ಪಾಕಿಸ್ತಾನವನ್ನು ಕನಸು ಕಾಣುತ್ತಾರೆ,ಎಚ್ಚರವಾದಾಗಲೂ ಪಾಕಿಸ್ತಾನ, ಅವರು ಸದಾ ಸಮಯ ಪಾಕಿಸ್ತಾನದ ಆಲೋಚನೆಯಲ್ಲೇ ಇರುವುದರಿಂದ ಭಾರತಕ್ಕೆ ಈ ದುರವಸ್ಥೆ ಬಂದೊದಗಿದೆ ಎಂದು ಸಿಬಲ್ ಹೇಳಿದರು.

ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಾಣಕ್ಕಾಡ್ ಸೈಯಿದ್ ಹೈದರ್ ಅಲಿ ಶಿಹಾಬ್ ತಂಙಳ್ ಉದ್ಘಾಟಸಿದರು.ಇಕೆ ವಿಭಾಗ ಸಮಸ್ತ ಅಧ್ಯಕ್ಷರಾದ ಸೈಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್, ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಮುಖ್ಯ ಭಾಷಣ ಮಾಡಿದರು. ವಿವಿಧ ಸಂಘಟನೆಗಳನ್ನು ಪ್ರತಿನಿಧಿಸುವ ಹಲವಾರು ಮುಖಂಡರಗಳು ಭಾಗವಹಿಸಿದ್ದರು.

error: Content is protected !! Not allowed copy content from janadhvani.com