janadhvani

Kannada Online News Paper

ಬ್ಲಾಂಕ್ ಪೇಪರ್ ಯುಎಇ ಕರೆನ್ಸಿಯಾಗಿ ಪರಿವರ್ತನೆ- ವಂಚಕರ ಬಂಧನ

ಅಜ್ಮಾನ್: ಪೇಪರ್‌ಗಳನ್ನು ಯುಎಇ ಕರೆನ್ಸಿಗಳಾಗಿ ಪರಿವರ್ತಿಸುವುದಾಗಿ ನಂಬಿಸಿ ಹಣ ಲಪಟಾಯಿಸಿದ ಆರೋಪದ ಮೇಲೆ ಇಬ್ಬರು ವಿದೇಶಿಯರನ್ನು ಅಜ್ಮಾನ್ ಪೊಲೀಸರು ಬಂಧಿಸಿದ್ದಾರೆ. ಇವರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡ ವ್ಯಕ್ತಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಅರೋಪಿಗಳನ್ನು ಬಂದಿಸಲಾಗಿದೆ ಎಂದು ಅಜ್ಮಾನ್ ಪೊಲೀಸ್ ಕ್ರಿಮಿನಲ್ ಇನ್ವೆಸ್ಟಿಗೇಷನ್ ವಿಭಾಗದ ಮುಖ್ಯಸ್ಥ ಅಹ್ಮದ್ ಸಯೀದ್ ಅಲ್ ನುಐಮಿ‌ ತಿಳಿಸಿದ್ದಾರೆ.

ಪ್ರತಿವಾದಿಗಳು ಕಪ್ಪು ಕಾಗದದ ತುಂಡನ್ನು ತೋರಿಸಿದರು. ನಂತರ ಅದಕ್ಕೆ ಶಾಯಿಯಂತಹ ದ್ರಾವಕವನ್ನು ಸಿಂಪಡಿಸಲಾಯಿತು. ಆ ಮೂಲಕ ಕಪ್ಪು ಕಾಗದವನ್ನು 100 ದಿರ್ಹಂ ನೋಟ್ ಆಗಿ ಮಾರ್ಪಾಟುಗೊಳಿಸಿ ತೋರಿಸಿದರು.15 ಸಾವಿರ ದಿರ್ಹಂ ಪಾವತಿಸಿದರೆ ಅದೇ ರೀತಿಯ ಕಪ್ಪು ಕಾಗದ ಮತ್ತು ಶಾಯಿಯನ್ನು ನೀಡುವುದಾಗಿ ಭರವಸೆ ನೀಡಿದರು.

ಹಣ ಪಾವತಿಸಿದ ನಂತರ, ಕಪ್ಪು ಕಾಗದದಿಂದ ತುಂಬಿದ ಚೀಲವನ್ನು ನೀಡಲಾಯಿತು. ಚೀಲವನ್ನು ತಕ್ಷಣ ತೆರೆಯದಂತೆ ತಿಳಿಸಿದ ಅವರು, ಕಾಗದವು ನೋಟ್‌ಗಳಾಗಿ ಮಾರ್ಪಾಡಾಗಲು ಸಮಯಾವಕಾಶ ತೆಗೆದುಕೊಳ್ಳುತ್ತದೆ ಎಂದು ನಂಬಿಸಿದರು. ಆದರೆ, ನಂತರ ವಂಚನೆಗೊಳಗಾಗಿರುವುದಾಗಿ ತಿಳಿದಾಗ, ಪೊಲೀಸರನ್ನು ಸಂಪರ್ಕಿಸಿದ್ದರು.

ದೂರನ್ನು ಸ್ವೀಕರಿಸಿದ ನಂತರ, ಅಜ್ಮಾನ್ ಪೊಲೀಸರು ಸಿಐಡಿ ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಿ ವಿವರವಾದ ತನಿಖೆಯನ್ನು ಪ್ರಾರಂಭಿಸಿದರು. ಬಳಿಕ‌ ಸಮಾನವಾದ ರೀತಿಯಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವ ಇಬ್ಬರನ್ನೂ ಸಾರ್ವಜನಿಕ ಪ್ರಾಸಿಕ್ಯೂಷನ್‌ಗೆ ಒಪ್ಪಿಸಲಾಯಿತು. ಇಂತಹ ವಂಚನೆಯಲ್ಲಿ ಯಾರಾದರೂ ಭಾಗಿಯಾಗಿರುವುದಾಗಿ ತಿಳಿದುಬಂದಲ್ಲಿ ಪೊಲೀಸರಿಗೆ ತಕ್ಷಣ ಕರೆ ಮಾಡುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !! Not allowed copy content from janadhvani.com