janadhvani

Kannada Online News Paper

NRC, CAA ವಿರುದ್ಧ ಜ.18 ರಂದು ಮಂಗಳೂರಿನಲ್ಲಿ ನಡೆಯಬೇಕಿದ್ದ ಸಮಾವೇಶಕ್ಕೆ ಅನುಮತಿಯಿಲ್ಲ

ಮಂಗಳೂರು: ಜ.18 ರಂದು ಅಪರಾಹ್ನ ಬಲ್ಮಠ ಮೈದಾನದಲ್ಲಿ ಪಿಯುಸಿಎಲ್ ದ.ಕ. ಜಿಲ್ಲಾ ಸಮಿತಿ ಮತ್ತು ಎಸ್ಕೆಎಸ್ಸೆಸ್ಸೆಎಫ್ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ನಡೆಸಲು ಉದ್ದೇಶಿಸಿದ್ದ ಎನ್ ಆರ್ ಸಿ ಮತ್ತು ಸಿಎಎ ವಿರುದ್ಧ ಜಾಗೃತಿ ಸಮಾವೇಶಕ್ಕೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ.

ಗುರುವಾರ ರಾತ್ರಿ ಪಿಯುಸಿಎಲ್ ಜಿಲ್ಲಾಧ್ಯಕ್ಷರಿಗೆ ಕದ್ರಿ ಠಾಣೆಯ ಇನ್ ಸ್ಪೆಕ್ಟರ್ ನೋಟಿಸ್ ಜಾರಿಗೊಳಿಸಿ, ಪ್ರತಿಭಟನಾ-ಜಾಗೃತಿ ಸಮಾವೇಶ ನಡೆಸುವ ಮೈದಾನದ ವಿವಾದವು ಸುಪ್ರೀಂ ಕೋರ್ಟ್ನಲ್ಲಿದೆ. ಅಲ್ಲಿ ಕಾರ್ಯಕ್ರಮ ನಡೆಸಲು ನ್ಯಾಯಾಲಯದ ಅನುಮತಿ ಬೇಕಾಗಿದೆ. ಅಲ್ಲದೆ ಆಸುಪಾಸಿನ ಜನರ, ಸಂಸ್ಥೆಗಳ ಆಕ್ಷೇಪಣೆ ಇರುವುದರಿಂದ ಕಾರ್ಯಕ್ರಮ ನಡೆಸಲು ನೀಡಿದ್ದ ಅನುಮತಿಯನ್ನು ವಾಪಸ್ ಪಡೆಯಲಾಗಿದೆ. ಹಾಗಾಗಿ ಜ.18ರಂದು‌ ಬಲ್ಮಠ ಮೈದಾನದಲ್ಲಿ‌ ಕಾನೂನು ಸುವ್ಯವಸ್ಥೆಗೆ ಭಂಗವಾದಲ್ಲಿ ತಮ್ಮನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ.

ಜ.18ರಂದು ಎರಡೂ ಸಂಘನೆಗಳು ಜಂಟಿಯಾಗಿ ಕಾರ್ಯಕ್ರಮ ನಡೆಸಲು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದಿತ್ತು. ಅದರಂತೆ ಗುರುವಾರ ಅಪರಾಹ್ನ ಜಂಟಿ ಸುದ್ದಿಗೋಷ್ಠಿ ನಡೆಸಿ ಕಾರ್ಯಕ್ರಮದ ಬಗ್ಗೆ ಸಂಘಟಕರು ಮಾಹಿತಿ ನೀಡಿದ್ದರು. ಅದಾದ ಕೆಲವೇ ಗಂಟೆಯೊಳಗೆ ಎಸ್‌ಕೆಎಸ್ಸೆಸ್ಸೆಎಫ್ ಸಂಘಟನೆಗೆ ನೋಟಿಸ್ ಜಾರಿಗೊಳಿಸಿದ ಪೊಲೀಸರು ಜ.18ರ ಕಾರ್ಯಕ್ರಮಕ್ಕೆ ತಮಗೆ ಅನುಮತಿ‌ ನೀಡಿಲ್ಲ. ತಾವು ಪ್ರತ್ಯೇಕವಾಗಿ ಕಾರ್ಯಕ್ರಮ ನಡೆಸಲು ಅನುಮತಿ ಕೇಳಿದರೆ ಪರಿಶೀಲಿಸಲಾಗುವುದು ಎಂದು ತಿಳಿಸಲಾಗಿತ್ತು. ಅದರಂತೆ ಎಸ್ಕೆಎಸ್ಸೆಸ್ಸೆಎಫ್ ಸಂಘಟನೆಯು ಜ.18ರ ಪ್ರತಿಭಟನೆಯಿಂದ ಹಿಂದೆ ಸರಿದಿತ್ತು. ಇದೀಗ ಪಿಯುಸಿಎಲ್ ಸಂಘಟನೆಗೂ ಪ್ರತಿಭಟನಾ-ಜಾಗೃತಿ ಸಮಾವೇಶಕ್ಕೆ ಅನುಮತಿ‌ ನಿರಾಕರಿಸಿದ ಕಾರಣ ಜ.18ರ ಕಾರ್ಯಕ್ರಮ ರದ್ದಾಗುವ ಸಾಧ್ಯತೆ ಇದೆ.

error: Content is protected !! Not allowed copy content from janadhvani.com