janadhvani

Kannada Online News Paper

ಮಂಗಳೂರು ಐತಿಹಾಸಿಕ ಪ್ರತಿಭಟನೆಗೆ ಕ್ಷಣಗಣನೆ- ಲಕ್ಷಕ್ಕೂ ಹೆಚ್ಚು ಜನರ ಸಮಾಗಮ

ಮಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧ ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ಅಡ್ಯಾರ್‌ ಕಣ್ಣೂರಿನಲ್ಲಿ ಮುಸ್ಲಿಂ ಸೆಂಟ್ರಲ್‌ ಕಮಿಟಿ ನೇತೃತ್ವದಲ್ಲಿ ಇಂದು (ಜ.15) ಬೃಹತ್‌ ಪ್ರತಿಭಟನೆ ನಡೆಯಲಿದೆ. ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ಸಾಧ್ಯತೆ ಇರುವುದರಿಂದ 3,000ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.

ಎರಡು ಬಾರಿ ಮುಂದೂಡಿಕೆಯಾಗಿದ್ದ ಪ್ರತಿಭಟನಾ ಸಮಾವೇಶವನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್‌ ಕಮಿಟಿ ನೇತೃತ್ವದಲ್ಲಿ ನಡೆಯುವ ಪ್ರತಿಭಟನೆಗೆ 28 ಸಂಘಟನೆಗಳು ಕೈಜೋಡಿಸಿವೆ. ‌ಅಡ್ಯಾರ್‌ ಕಣ್ಣೂರಿನ ಶಹಾ ಗಾರ್ಡನ್‌ನ 5 ಎಕರೆ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ 2.30ರಿಂದ ಸಂಜೆ 6.30ರವರೆಗೂ ಸಮಾವೇಶ ನಡೆಯಲಿದೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಒಂದು ಲಕ್ಷಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಆಯೋಜಕರು ಪ್ರಕಟಿಸಿದ್ದಾರೆ. ಈ ಸಂಖ್ಯೆ 1.50 ಲಕ್ಷ ದಾಟಬಹುದು ಎಂದು ಗುಪ್ತಚರ ಅಧಿಕಾರಿಗಳು ಅಂದಾಜಿಸಿದ್ದಾರೆ. ಭಾರಿ ಪ್ರಮಾಣದ ಜನರು ಸೇರುವುದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ವಿಶೇಷ ಕಾರ್ಯತಂತ್ರ ರೂಪಿಸಿಕೊಂಡಿದ್ದಾರೆ.

ಮುಸ್ಲಿಂ ಧರ್ಮ ಗುರುಗಳು, ರಾಜಕೀಯ ಮುಖಂಡರು, ವಿವಿಧ ಸಂಘಟನೆಗಳ ನೇತಾರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವರು. ಅವರೊಂದಿಗೆ ಹಿಂದೂ ಮತ್ತು ಕ್ರೈಸ್ತ ಧಾರ್ಮಿಕ ಮುಖಂಡರೂ ಭಾಗವಹಿಸಲಿದ್ದಾರೆ. ಗಣ್ಯರಿಗಾಗಿ ಪ್ರತಿಭಟನಾ ಸ್ಥಳದಲ್ಲಿ 500 ಆಸನಗಳನ್ನು ಮೀಸಲಿಡಲಾಗಿದೆ.

ಪ್ರತಿಭಟನೆಗೆ ಬರುವವರನ್ನು ತಡೆಯಬೇಡಿ: ಮಾಜಿ ಶಾಸಕ ಬಿ.ಎ.ಮೊಹಿಯುದ್ದೀನ್‌ ಬಾವಾ

ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧ ಅಡ್ಯಾರ್‌– ಕಣ್ಣೂರಿನಲ್ಲಿ ಬುಧವಾರ ನಡೆಯುವ ಪ್ರತಿಭಟನಾ ಸಮಾವೇಶಕ್ಕೆ ಬರುವ ಜನರನ್ನು ತಡೆಯುವ ಕೆಲಸವನ್ನು ಪೊಲೀಸರು ಮಾಡಬಾರದು ಎಂದು ಮಾಜಿ ಶಾಸಕ ಬಿ.ಎ.ಮೊಹಿಯುದ್ದೀನ್‌ ಬಾವಾ ಆಗ್ರಹಿಸಿದರು.‘ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್‌ ಕಮಿಟಿ ನೇತೃತ್ವದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ಹೆಚ್ಚಿನ ಜನರು ಪಾಲ್ಗೊಳ್ಳುತ್ತಾರೆ ಎಂಬ ಕಾರಣದಿಂದ ಪ್ರತಿಭಟನೆಗೆ ಬರುವವರನ್ನು ದಾರಿ ಮಧ್ಯದಲ್ಲೇ ತಡೆಯುವ ಪ್ರಯತ್ನವನ್ನು ಪೊಲೀಸರು ಮಾಡಬಾರದು. ಆ ರೀತಿ ಮಾಡಿದರೆ ಗೊಂದಲ ಮತ್ತು ಸಮಸ್ಯೆ ಸೃಷ್ಟಿಗೆ ಕಾರಣವಾಗುತ್ತದೆ’ ಎಂದು ಎಚ್ಚರಿಸಿದರು.

ಪ್ರತಿಭಟನಾ ಸಮಾವೇಶಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಇತರೆ ಭಾಗಗಳ ಜನರೂ ಭಾಗವಹಿಸಬಹುದು. ಇದು ಮುಸ್ಲಿಮರಿಗೆ ಸೀಮಿತವಾಗಿ ನಡೆಯುವ ಪ್ರತಿಭಟನೆ ಅಲ್ಲ. ಸಿಎಎ ಮತ್ತು ಎನ್‌ಆರ್‌ಸಿ ಜಾರಿಯಿಂದ ಎಲ್ಲ ಜಾತಿ, ಧರ್ಮದ ಬಡ ಜನರು ತೊಂದರೆಗೆ ಒಳಗಾಗುತ್ತಾರೆ. ಅಂತಹ ಎಲ್ಲರೂ ಈ ಹೋರಾಟದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.ಇದು ಯಾವುದೇ ಧರ್ಮ ಅಥವಾ ಜನರ ವಿರುದ್ಧದ ಪ್ರತಿಭಟನೆ ಅಲ್ಲ. ಪೌರತ್ವದ ಹೆಸರಿನಲ್ಲಿ ಜನರನ್ನು ಬೀದಿಪಾಲು ಮಾಡುವ ಮತ್ತು ಭಯದ ವಾತಾವರಣ ಸೃಷ್ಟಿಸುವುದರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ.

3,000 ಸಿಬ್ಬಂದಿ ನಿಯೋಜನೆ: ಪ್ರತಿಭಟನಾ ಸಭೆಯ ಬಂದೋಬಸ್ತ್‌ಗೆ ನಗರ ಪೊಲೀಸರು, ನಗರ ಸಶಸ್ತ್ರ ಮೀಸಲು ಪೊಲೀಸ್‌ ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆ, ರಾಜ್ಯ ಮೀಸಲು ಪೊಲೀಸ್‌ ಪಡೆ, ಕ್ಷಿಪ್ರ ಕಾರ್ಯಾಚರಣೆ ಪಡೆ ಸೇರಿದಂತೆ 3,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮರ್‌ ಕುಮಾರ್‌ ಪಾಂಡೆ ಸೋಮವಾರ ರಾತ್ರಿಯಿಂದ ನಗರದಲ್ಲಿ ಮೊಕ್ಕಾಂ ಹೂಡಿದ್ದು, ಭದ್ರತಾ ಉಸ್ತುವಾರಿಯ ನೇತೃತ್ವ ವಹಿಸಿದ್ದಾರೆ. ಪಶ್ಚಿಮ ವಲಯ ಐಜಿಪಿ ಅರುಣ್‌ ಚಕ್ರವರ್ತಿ, ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ, ದಕ್ಷಿಣ ಕನ್ನಡ ಎಸ್‌ಪಿ ಬಿ.ಎಂ.ಲಕ್ಷ್ಮೀಪ್ರಸಾದ್‌ ನೇರವಾಗಿ ಬಂದೋಬಸ್ತ್‌ ಮೇಲುಸ್ತುವಾರಿ ನಿರ್ವಹಿಸುತ್ತಿದ್ದಾರೆ. ವಿವಿಧ ಜಿಲ್ಲೆಗಳ ಹಲವು ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.

9 ಸ್ಥಳಗಳಲ್ಲಿ ಪಾರ್ಕಿಂಗ್‌: ರಾಷ್ಟ್ರೀಯ ಹೆದ್ದಾರಿ 75ರ ಇಕ್ಕೆಲಗಳಲ್ಲಿ ಒಂಬತ್ತು ಸ್ಥಳಗಳಲ್ಲಿ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ನಿಗದಿ ಮಾಡಲಾಗಿದೆ. ಪ್ರತಿಭಟನೆಯಲ್ಲಿ ಭಾಗವಹಿಸುವವರಿಗೆ ಏಳು ಸ್ಥಳಗಳನ್ನು ನೀಡಿದ್ದರೆ, ಎರಡು ಕಡೆ ಪೊಲೀಸ್‌ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ಪರ್ಯಾಯ ಮಾರ್ಗ ಬಳಸಲು ಸೂಚನೆ: ಪ್ರತಿಭಟನಾ ಸಭೆಯ ಕಾರಣದಿಂದ ನಗರವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮುಖ್ಯ ರಸ್ತೆಗಳಲ್ಲಿ ಭಾರಿ ಪ್ರಮಾಣದ ಸಂಚಾರ ದಟ್ಟಣೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಈ ಕಾರಣದಿಂದ ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸ್‌ ಕಮಿಷನರ್‌ ಸಲಹೆ ಮಾಡಿದ್ದಾರೆ.

ಉಡುಪಿ ಕಡೆಯಿಂದ ಬೆಂಗಳೂರಿಗೆ ಹೋಗುವ ವಾಹನಗಳು ಪಡುಬಿದ್ರಿಯಲ್ಲಿ ತಿರುವು ಪಡೆದು ಕಾರ್ಕಳ-ಧರ್ಮಸ್ಥಳ ಮೂಲಕ ಶಿರಾಡಿ ಘಾಟ್‍ನಲ್ಲಿ ಪ್ರಯಾಣಿಸಬೇಕು.‌ ಬೆಂಗಳೂರು ಕಡೆಯಿಂದ ಮಂಗಳೂರಿಗೆ ಬರುವ ವಾಹನಗಳು ಮೆಲ್ಕಾರ್, ಕೊಣಾಜೆ, ತೊಕ್ಕೊಟ್ಟು ಮಾರ್ಗವಾಗಿ ಪಂಪ್‍ವೆಲ್ ಮೂಲಕ ಮಂಗಳೂರು ನಗರ ಪ್ರವೇಶಿಸಬೇಕು.

ಮಂಗಳೂರಿನಿಂದ ಬೆಂಗಳೂರು ಕಡೆಗೆ ಪ್ರಯಾಣಿಸುವ ವಾಹನಗಳು ನಂತೂರಿನಲ್ಲಿ ತಿರುವು ಪಡೆದು ಪಂಪ್‍ವೆಲ್‌-ತೊಕ್ಕೊಟ್ಟು-ಕೊಣಾಜೆ-ಬಿ.ಸಿ ರೋಡ್ ಮೂಲಕ ತೆರಳಬೇಕು. ಬಿ.ಸಿ.ರೋಡ್‍ನಿಂದ ಮಂಗಳೂರಿಗೆ ಬರುವ ವಾಹನಗಳು ಕೈಕಂಬದಲ್ಲಿ ತಿರುವು ಪಡೆದು ಕೈಕಂಬ, ಬೆಂಜನಪದವು, ಪೊಳಲಿ ಮೂಲಕ ಸಾಗಬೇಕು ಎಂದು ಸಲಹೆ ನೀಡಿದ್ದಾರೆ.

ಕಾಂಗ್ರೆಸ್‌ ಬೆಂಬಲ:ಮುಸ್ಲಿಂ ಸೆಂಟ್ರಲ್‌ ಕಮಿಟಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಬೆಂಬಲ ವ್ಯಕ್ತಪಡಿಸಿದೆ. ಪಕ್ಷದ ವಿವಿಧ ಘಟಕಗಳ ಮುಖಂಡರು, ಚುನಾಯಿತ ಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಹರೀಶ್‌ ಕುಮಾರ್‌ ಕರೆ ನೀಡಿದ್ದಾರೆ.

error: Content is protected !! Not allowed copy content from janadhvani.com