ಬಾಬರೀ ಮಸ್ಜಿದ್ ವಿವಾದ: ವಿಚಾರಣೆ ಮಾರ್ಚ್ 14ಕ್ಕೆ ಮುಂದೂಡಿಕೆ

ನವದೆಹಲಿ :ಬಾಬರೀ ಮಸ್ಜಿದ್ ರಾಮ ಜನ್ಮ ಭೂಮಿ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮಾರ್ಚ್ 14ಕ್ಕೆ ಮುಂದೂಡಿದೆ. ದಾಖಲೆಗಳ ಭಾಷಾಂತರ ಸಂಪೂರ್ಣಗೊಂಡಿಲ್ಲವಾದ್ದರಿಂದ ವಿಚಾರಣೆಯನ್ನು ಮುಂದೂಡಿದೆ. ಪ್ರಕರಣದ ಸಂಬಂಧ ಅಲಹಬಾದ್ ಹೈಕೋರ್ಟ್ ನೀಡಿರುವ ಎಲ್ಲಾ ದಾಖಲಾತಿಗಳ ಎಲ್ಲಾ ಪ್ರತಿಗಳನ್ನು ಇಂಗ್ಲೀಷ್‌ಗೆ ಭಾಷಾಂತರಿಸಿ ಎರಡು ವಾರಗಳ ಒಳಗೆ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.

ಹೈಕೋರ್ಟ್‌ನ ಎಲ್ಲಾ ದಾಖಲೆಗಳ  ಜತೆಗೆ ವಿಡಿಯೋ ಚಿತ್ರೀಕರಣದ ಪ್ರತಿಗಳನ್ನು ಒದಗಿಸುವಂತೆಯೂ ಸುಪ್ರೀಂಕೋರ್ಟ್ ಹೇಳಿದೆ. ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರ ನ್ಯಾಯಮೂರ್ತಿಗಳಾದ ಎಸ್.ಎ. ನಜೀರ್ ಹಾಗೂ ಅಶೋಕ್‌ಭೂಷಣ್ ಅವರನ್ನೊಳಗೊಂಡ ವಿಶೇಷ ಪೀಠವು ವಿಚಾರಣೆಯನ್ನು ಮಾರ್ಚ್ 14ರಿಂದ ಪ್ರತಿದಿನ ವಿಚಾರಣೆ ನಡೆಸುವುದಾಗಿ ಹೇಳಿದೆ. ಈ ವಿಚಾರಣೆಯನ್ನು ಸಂಪೂರ್ಣವಾಗಿ ‘ಭೂ ವಿವಾದ’ದ ನೆಲೆಯಲ್ಲೇ ನಡೆಸಲಾಗುವುದು. ಇತರ ಕೋನಗಳಿಂದ ಸಲ್ಲಿಸಲಾಗಿರುವ ಅರ್ಜಿಗಳನ್ನು ಪ್ರತ್ಯೇಕವಾಗಿ ಕೈಗೆತ್ತಿಕೊಳ್ಳಲಾಗುವುದು’ ಎಂದು ತಿಳಿಸಿತು.

ಕಳೆದ ವರ್ಷ ಡಿ.5ರಂದು ಕಾಂಗ್ರೆಸ್ ಮುಖಂಡ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಲೋಕಸಭಾ ಚುನಾವಣೆಯವರೆಗೆ ವಿಚಾರಣೆಯನ್ನು ಮುಂದೂಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ನ್ಯಾಯಾಲಯ ಈ ಮನವಿಯನ್ನು ತಿರಸ್ಕರಿಸಿತ್ತು. ಸುನ್ನಿ ವಕ್ಫ್ ಮಂಡಳಿಯೂ ಸಿಬಲ್ ಅವರ ವಾದವನ್ನು ನಿರಾಕರಿಸಿತ್ತು. ಪ್ರತಿವಾದಿಗಳ ಪರವಾಗಿ ಹಾಜರಾಗಿದ್ದ ಹರೀಶ್ ಸಾಳ್ವೆ , ನ್ಯಾಯಾಲಯಕ್ಕೆ ಸಂಬಂಧಪಟ್ಟಂತೆ ಇದೂ ಒಂದು ಪ್ರಕರಣ ಅಷ್ಟೇ. ಯಾವುದೇ ರೀತಿಯ ಫಲಿತಾಂಶ ಹೊರಬಂದರೂ ಪರಿಣಾಮಕ್ಕೂ ನ್ಯಾಯಾಲಯಕ್ಕೂ ಸಂಬಂಧವಿಲ್ಲ ಎಂದು ವಾದಿಸಿದ್ದರು.

Leave a Reply

Your email address will not be published. Required fields are marked *

error: Content is protected !!