ಮಠ, ಮಂದಿರಗಳ ಉಸಾಬರಿ ನಮಗಿಲ್ಲ – ಸಿದ್ದರಾಮಯ್ಯ

ಬೆಂಗಳೂರು:- ಮಠ, ಮಂದಿರ ನಿಯಂತ್ರಿಸಲು ಪ್ರಕಟಣೆ ಹೊರಡಿಸಿ ಅಭಿಪ್ರಾಯ ಕೇಳಿದ್ದ ಸರ್ಕಾರದ ನಿಲುವಿಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಧಾರ್ಮಿಕ ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಪರಿಷತ್‌ನಲ್ಲಿ ಇಂದು ತಿಳಿಸಿದರು.
ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರು ನಿಲುವಳಿ ಸೂಚನೆಯಡಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು ಸರ್ಕಾರ ಮುಜರಾಯಿ ದೇವಸ್ಥಾನಗಳಷ್ಟೇ ಮಾತ್ರ ನೋಡಿಕೊಳ್ಳುತ್ತದೆ. ದೇವಸ್ಥಾನಗಳ ಬೇರೆ ಮಠಗಳು, ದೇವಸ್ಥಾನದ ಉಸಾಬರಿ ನಮಗೇಕೆ ಎಂದರು.
ಪ್ರತಿಪಕ್ಷದ ನಾಯಕರು ಆರೋಪಿಸಿದಂತೆ ಇದು ಸರ್ಕಾರದ ಸುತ್ತೋಲೆ ಅಲ್ಲ, ಕೇವಲ ಪ್ರಕಟಣೆಯಷ್ಟೇ ಅದನ್ನು ವಾಪಾಸು ಪಡೆಯಲಾಗಿದೆ ಎಂದು ಅವರು ತಿಳಿಸಿದರು.
ಮಠಗಳು ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣಕ್ಕೆ ಒಳಪಡಿಸುವ ದುರದ್ದೇಶವೇ ಇಲ್ಲ ಎಂದು ಹೇಳಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿದ್ದಾಗಲೇ ಇಂತಹದೊಂದು ಪ್ರಸ್ತಾವನೆ ಇತ್ತು. ಹೈಕೋರ್ಟ್ ವಿಭಾಗೀಯ ಪೀಠ ಎಲ್ಲ ಮಠಗಳು, ದೇವಸ್ಥಾನಗಳು ಒಂದೇ ಕಾನೂನು ಅಡಿ ತರುವಂತೆ ಸೂಚನೆ ನೀಡಿತ್ತು. ನಿಮ್ಮ ಸರ್ಕಾರವೇ ಅಧಿಕಾರದಲ್ಲಿ ಇತ್ತು. ಆಗ ನೀವೇನು ಮಾಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ಆಗ ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದ ಬಿಜೆಪಿ ನ್ಯಾಯಮೂರ್ತಿ ರಾಮಜೋಯಿಸ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತು. ಆಗಲೇ ಇಂತಹ ಪ್ರಕಟಣೆಯನ್ನು ಹೊರಡಿಸಲಾಗಿತ್ತು. ಅದೇ ಪ್ರಕಟಣೆಯನ್ನು ಈಗಲೂ ನಾವು ಹೊರಡಿಸಿದ್ದೇವೆ ಹೊರತು ನಮ್ಮ ಕಾಲದಲ್ಲಿ ಆಗಿದ್ದಲ್ಲ ಎಂದು ಹೇಳಿದರು.
ಹೈಕೋರ್ಟ್‌ನ ನಿದರ್ಶನವನ್ನು ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!