ದುಬೈ ಹೊಸ ವೀಸಾ ನಿಯಮ:ಕೇಂದ್ರ ಸರಕಾರ ಮಧ್ಯಪ್ರವೇಶಿಸಬೇಕು-ಕೇರಳ ಸಿಎಂ ನಿಂದ ಪ್ರಧಾನಿಗೆ ಪತ್ರ

ತಿರುವನಂತಪುರ: ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಸಲ್ಲಿಸಿದರೆ  ಮಾತ್ರವೇ ಕಾರ್ಮಿಕ ವೀಸಾ ನೀಡಲಾಗುವುದು ಎಂಬ ಯುಎಇ ಸರಕಾರದ ಹೊಸ ಕಾನೂನಿನ ಬಗ್ಗೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

ಈ ತಿಂಗಳಿನಿಂದ ಹೊಸ ಕಾರ್ಮಿಕ ವೀಸಾಗಳನ್ನು ಅನುಮತಿಸಲು ಪೊಲೀಸ್ ಕ್ಲಿಯರೆನ್ಸ್ ಕಡ್ಡಾಯಗೊಳಿಸಲು ಯುಎಇ ಸರ್ಕಾರ ನಿರ್ಧರಿಸಿದೆ. ತಿರುವನಂತಪುರ ದೂತಾವಾಸವೊಂದರಲ್ಲೇ  ದಿನಂಪ್ರತಿ 250 ರಿಂದ 300 ವೀಸಾಗಳನ್ನು ನೀಡಲಾಗುತ್ತಿದೆ. ವಿದೇಶಿ ಪ್ರಯಾಣ ದಾಖಲೆಗಳನ್ನು ಸರಿಪಡಿಸಿ ಕೊಡುವ ಏಜೆನ್ಸಿಗಳು ಭಾರತದ ಇತರ ರಾಜ್ಯಗಳಿಂದ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರಗಳನ್ನು ಒದಗಿಸುತ್ತಿದ್ದು,ಈ ರೀತಿ ಪಿ.ಸಿ.ಸಿ  ಸೌಲಭ್ಯವನ್ನು ದುರುಪಯೋಗ ಮಾಡುವ ಸಾಧ್ಯತೆಯಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಲೋಪರಹಿತ ಪೋಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರಗಳನ್ನು ಪಡೆಯಲು ಕೇಂದ್ರೀಯ ಅಪರಾಧ ಪತ್ತೆದಾರರ ಮಧ್ಯಸ್ಥಿಕೆ ಅಗತ್ಯವಿದೆ. ಅಂತಹ ಪ್ರಮಾಣಪತ್ರಗಳನ್ನು ವಿಶೇಷ ಐಟಿ ಆಧಾರಿತ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವ ಮೂಲಕ  ಸಾಧ್ಯಗೊಳಿಸಿದ್ದಲ್ಲಿ ಜನ ಸಾಮಾನ್ಯರಿಗೆ ಯಾವುದೇ ತೊಂದರೆ ಇಲ್ಲದೆ PCC ಲಭಿಸಬಹುದು.ಇದನ್ನು ಪರಿಗಣಿಸಿ PCC ಯನ್ನು 6 ತಿಂಗಳ ಕಾಲ ತಡೆಹಿಡಿಯುವಂತೆ ಯುಎಇ ಸರ್ಕಾರವನ್ನು ಕೋರುವಂತೆ ಕೇರಳ ಮುಖ್ಯಮಂತ್ರಿ ಕೇಂದ್ರ ಸರಕಾರವನ್ನು ಕೇಳಿಕೊಂಡಿದ್ದಾರೆ.

ಅಲ್ಲಿತನಕ ಎಂದಿನಂತೆ ವೀಸಾ ಮುಂದುವರಿಸಬೇಕು. ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಸಂಪೂರ್ಣ ಪರಿಶೀಲನೆ ನಡೆಸಿ ಯುಎಇ ದೂತಾವಾಸಕ್ಕೆ ಸಕಾಲಕ್ಕೆ  ಹಸ್ತಾಂತರಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಯುಎಇಯಲ್ಲಿ ಉದ್ಯೋಗ ಹುಡುಕುವವರಿಗೆ ಇದು ಉಪಯುಕ್ತವಾಗಲಿದೆ ಎಂದು ಅವರು ಪತ್ರದಲ್ಲಿ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!