ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ ಆರ್‌ಟಿಇ ಮೀಸಲಾತಿಗೆ ಫೆ.20ರಿಂದ ಅರ್ಜಿ ಆಹ್ವಾನ

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷಕ್ಕೆ ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ ಮೀಸಲಿಟ್ಟಿರುವ ಶೇ.25ರಷ್ಟು ಆರ್‌ಟಿಇ ಸೀಟಿಗೆ ಫೆ.20ರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆರ್‌ಟಿಇ ಅಡಿ ಅರ್ಜಿ ಸಲ್ಲಿಸುವ ಮಗು, ಮಗುವಿನ ತಂದೆ ಅಥವಾ ತಾಯಿ ಕಡ್ಡಾಯವಾಗಿ ಆಧಾರ್‌ ಸಂಖ್ಯೆ ಹೊಂದಿರಬೇಕು. ಬೆಂಗಳೂರು ಒನ್‌, ಕರ್ನಾಟಕ ಒನ್‌, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಅಟಲ್‌ಜಿ ಜನಸ್ನೇಹಿ ಕೇಂದ್ರ, ಕಂಪ್ಯೂಟರ್‌ ಹಾಗೂ ಮೊಬೈಲ್‌ ಮೂಲಕವೂ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ವಿಶೇಷ ಪ್ರವರ್ಗದಡಿ ಮೀಸಲಾತಿ ಅರ್ಜಿ ಸಲ್ಲಿಸುವವರು ನಿರ್ದಿಷ್ಟ ದಾಖಲೆಗಳನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸುವಲ್ಲಿ ದೋಷಗಳಾದರೇ ಎಸ್‌ಎಂಎಸ್‌ ಮೂಲಕ ಅಲರ್ಟ್‌ ಮಾಡಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ.

ವೇಳಾಪಟ್ಟಿ
ನೆರೆಹೊರೆ ಶಾಲೆಗಳ ಅಂತಿಮ ಪಟ್ಟಿ, ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ ಲಭ್ಯವಿರುವ ಸೀಟುಗಳ ವಿವರವನ್ನು ಫೆ.15ಕ್ಕೆ ಪ್ರಕಟಿಸಲಾಗುತ್ತದೆ. ನೆರೆಹೊರೆ ಶಾಲೆಗಳ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಫೆ.18ರ ತನಕ ಅವಕಾಶ ಇರುತ್ತದೆ. ಫೆ.20ರಿಂದ ಮಾರ್ಚ್‌ 21ರವರೆಗೆ ಅರ್ಜಿ ಸಲ್ಲಿಸುವ ಅವಕಾಶ ಇರುತ್ತದೆ. ಇಐಡಿ ಮೂಲಕ ಸಲ್ಲಿಸಿದ ಅರ್ಜಿಯ ದತ್ತಾಂಶ ಪರಿಶೀಲನೆಗೆ ಮಾ.23ರತನಕ ಅವಕಾಶ ಇರುತ್ತದೆ. ವಿಶೇಷ ಪ್ರವರ್ಗ ಮತ್ತು ಕ್ರಮಬದ್ಧವಲ್ಲದ ಅರ್ಜಿಗಳನ್ನು ಮಾ.23ರಿಂದ 27ರತನಕ ಪರಿಶೀಲಿಸಲಾಗುತ್ತದೆ. ಏ.2ರಂದು ಆನ್‌ಲೈನ್‌ ಲಾಟರಿ ಪ್ರಕ್ರಿಯೆಗೆ ಅರ್ಹತಾ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಏ.6ರಂದು ಮೊದಲ ಸುತ್ತಿನ ಸೀಟು ಹಂಚಿಕೆ ಲಾಟರಿ ಮೂಲಕ ನಡೆಯಲಿದೆ.

ಏ.7ರಿಂದ 17ರ ತನಕ ಶಾಲೆಗಳಲ್ಲಿ ಪ್ರವೇಶಾತಿ ಆರಂಭವಾಗಲಿದೆ. ಮಾ.19ರೊಳಗೆ ಶಾಲೆಗಳಿಂದ ದಾಖಲಾದ ಮಕ್ಕಳ ಮಾಹಿತಿ ಅಪ್‌ಲೋಡ್‌ ಮಾಡಲಾಗುತ್ತದೆ. ಏ.26ಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆ ನಡೆಯಲಿದೆ. ಮೇ 14ಕ್ಕೆ ಮೂರನೇ ಸುತ್ತಿನ ಸೀಟು ಹಂಚಿಕೆ ಮಾಡಲಾಗುತ್ತದೆ. ಮೇ 30ರೊಳಗೆ ಹಂಚಿಕೆ ಪ್ರಕ್ರಿಯೆ ಹಾಗೂ ಮಾಹಿತಿ ಅಪ್‌ಲೋಡ್‌ ಮಾಡುವ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

2017-18ನೇ ಸಾಲಿನಲ್ಲಿ 1.29 ಲಕ್ಷ ಆರ್‌ಟಿಇ ಸೀಟು ಲಭ್ಯವಿದ್ದು, ಅದರಲ್ಲಿ ಸುಮಾರು 1.15 ಲಕ್ಷ ಸೀಟು ಭರ್ತಿಯಾಗಿತ್ತು. ಈ ವರ್ಷ ಅನುದಾನಿತ ಶಾಲೆಗಳನ್ನು ಆರ್‌ಟಿಇ ಅಡಿಗೆ ತಂದಿರುವುದರಿಂದ ಸೀಟುಗಳ ಪ್ರಮಾಣದಲ್ಲಿ ಏರಿಕೆಯಾಗಲಿದೆ. 1.30 ಲಕ್ಷ ದಾಟುವ ನಿರೀಕ್ಷೆಯಿದೆ.

ಆರ್‌ಟಿಇ ಅರ್ಹತೆ:
ಅಲ್ಪಸಂಖ್ಯಾತರ ಹಾಗೂ ಭಾಷಾ ಅಲ್ಪಸಂಖ್ಯಾತರ ಶಾಲೆಗಳನ್ನು ಹೊರತುಪಡಿಸಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಸರ್ಕಾರದಿಂದ ಪಡೆದುಕೊಂಡಿರುವ ಅನುಮತಿಯ ಆಧಾರದಲ್ಲಿ ಆರ್‌ಟಿಇ ಸೀಟು ನಿಗದಿಯಾಗುತ್ತದೆ. ಒಂದನೇ ತರಗಯಿಂದ ಅನುಮತಿ ಪಡೆದ ಶಾಲೆಯಲ್ಲಿ ಒಂದನೇ ತರಗತಿಗೆ ಮಾತ್ರ ಆರ್‌ಟಿಇ ಸೀಟು ಹಂಚಿಕೆ ಮಾಡಲಾಗುತ್ತದೆ. ಎಲ್‌ಕೆಜಿ ಅಥವಾ ಯುಕೆಜಿಗೆ ಅನುಮತಿ ಪಡೆದಿದ್ದರೆ, ಅದೇ ತರಗತಿಗೆ ಹಂಚಿಕೆ ಮಾಡಲಾಗುತ್ತದೆ. 5 ವರ್ಷ 10 ತಿಂಗಳಿಂದ 6 ವರ್ಷ 10 ತಿಂಗಳೊರಗಿನ ಮಕ್ಕಳು 1ನೇ ತರಗತಿಗೆ ಹಾಗೂ 3 ವರ್ಷ 10 ತಿಂಗಳಿಂದ 4 ವರ್ಷ 10 ತಿಂಗಳ ಮಕ್ಕಳು ಎಲ್‌ಕೆಜಿ, ಯುಕೆಜಿಗೆ ಆರ್‌ಟಿಇ ಅಡಿ ಅರ್ಜಿ ಸಲ್ಲಿಸಬಹುದು.

ಪ್ರವೇಶ ವಿಳಂಬ?
ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಆರ್‌ಟಿಇ ಅಡಿ ಲಭ್ಯವಿರುವ ಶೇ.25ರಷ್ಟು ಸೀಟುಗಳನ್ನು ಹೊರತುಪಡಿಸಿ ಉಳಿಸಿ ಶೇ.75ರಷ್ಟು ಸೀಟಿಗೆ ಮಕ್ಕಳನ್ನು ದಾಖಲಿಸಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಅನುಮತಿ ಪಡೆಯಬೇಕು. ಖಾಸಗಿ ಹಾಗೂ ಅನುದಾನಿತ ಶಾಲಾಡಳಿತ ಮಂಡಳಿಗಳು ಆರ್‌ಟಿಇಯಡಿ ಮೀಸಲಿಟ್ಟಿರುವ ಸೀಟಿನ ವಿವರವನ್ನು ಖಚಿತಪಡಿಸದೇ ಇಲಾಖೆಯಿಂದ ಬೇರೆ ಮಕ್ಕಳ ಪ್ರವೇಶಾತಿಗೆ ಅನುಮತಿ ನೀಡುವುದಿಲ್ಲ. ಮುಂದಿನ ವರ್ಷದ ದಾಖಲಾತಿ ಪ್ರಕ್ರಿಯೆ ವಿಳಂಬವಾಗಿರುವುದರಿಂದ ಬಹುತೇಕ ಖಾಸಗಿ ಶಾಲೆಗಳು ಕಾನೂನು ಬಾಹಿರವಾಗಿ ವಿದ್ಯಾರ್ಥಿಗಳ ದಾಖಲಾತಿ ಮಾಡಿಕೊಂಡಿವೆ. ಇದು ಬಡ ಮತ್ತು ಮಧ್ಯಮ ವರ್ಗದ ಪಾಲಕರಲ್ಲಿ ಆತಂಕ ಸೃಷ್ಟಿದೆ.

ಆಧಾರ್‌ ಕಡ್ಡಾಯ :
ಮುಂದಿನ ವರ್ಷದ ಆರ್‌ಟಿಇ ಸೀಟುಗಳಿಗೆ ಆಧಾರ್‌ ಕಡ್ಡಾಯ ಮಾಡಲಾಗಿದೆ. ಆಧಾರ್‌ ಸಂಖ್ಯೆ ಇಲ್ಲದೇ ಆನ್‌ಲೈನ್‌ ಮೂಲಕ ಆರ್‌ಟಿಇ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಇದಕ್ಕಾಗಿ ಪ್ರತ್ಯೇಕ ಸಾಫ್ಟ್ವೇರ್‌ ಕೂಡ ರಚನೆ ಮಾಡಲಾಗಿದೆ.

www.schooleducation.kar.nic.in ನಲ್ಲಿ ಆರ್‌ಟಿಇ ಸಂಬಂಧಿಸಿದ ಲಿಂಕ್‌ ಒಪನ್‌ ಮಾಡಿದರೆ, ಹೊಸ ವೆಬ್‌ಸೈಟ್‌ ತೆರೆದುಕೊಳ್ಳುತ್ತದೆ. ವೆಬ್‌ಸೈಟ್‌ ಈಗ ತಯಾರಿಕಾ ಹಂತದಲ್ಲಿದ್ದು, ಸಂಪೂರ್ಣ ಮಾಹಿತಿ ಅದರಲ್ಲಿ ಲಭ್ಯವಾಗುವುದಿಲ್ಲ. ಸರ್ಕಾರದಿಂದ ಅಧಿಸೂಚನೆ ಹೊರಡಿಸಿದ ನಂತರ ಎಲ್ಲ ಮಾಹಿತಿ ಸಿಗಲಿದೆ.

 

Leave a Reply

Your email address will not be published. Required fields are marked *

error: Content is protected !!