janadhvani

Kannada Online News Paper

ತನ್ವೀರ್ ಸೇಠ್ ಹಲ್ಲೆ ಪ್ರಕರಣ- ಬಂಧಿತ ಎಸ್‌ಡಿಪಿಐ ಕಾರ್ಯಕರ್ತನ ಪತ್ನಿಯಿಂದ ಆತ್ಮಹತ್ಯೆ ಬೆದರಿಕೆ

ಮೈಸೂರು: ತನ್ವೀರ್ ಸೇಠ್ ಮೇಲೆ ಈಚೆಗೆ ನಡೆದ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿರುವ ಆರೋಪಿಗಳ ಕುಟುಂಬಸ್ಥರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ್ದಾರೆ.

ಬಂಧಿತ 6 ಮಂದಿ ಆರೋಪಿಗಳ ಪೈಕಿ ಒಬ್ಬನಾದ ಸೈಯ್ಯದ್ ಮೊಹೀಬ್ ಅವರ ಪತ್ನಿ ಹೀನಾ ಕೌಸರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನ್ನ ಪತಿ ಮುಗ್ಧ. ಅವರಿಗೂ ಪ್ರಕರಣಕ್ಕೂ ಸಂಬಂಧ ಇಲ್ಲ. ಒಂದು ವೇಳೆ ನ್ಯಾಯ ಸಿಗದೇ ಹೋದರೆ ಕಮೀಷನರ್ ಅವರ ಕಚೇರಿಯಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದರು.

ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮಾತನಾಡಿ, ಪೊಲೀಸರು ಬಿಜೆಪಿ ಮತ್ತು ಕಾಂಗ್ರೆಸ್ ಒತ್ತಡಕ್ಕೆ ಮಣಿದು ಎಸ್‌ಡಿಪಿಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಸೈಯದ್ ಮೊಹೀಬ್, ಮುಜಾಮಿರ್ ಪಕ್ಷದ ಕಾರ್ಯಕರ್ತರಾಗಿದ್ದಾರೆ. ಇವರೊಂದಿಗೆ ಬಂಧಿಸಿರುವ ಇನ್ನಿತರ ಆರೋಪಿಗಳು ಮುಗ್ಧರು ಎಂದು ಪಕ್ಷದ ಆಂತರಿಕ ಶಿಸ್ತು ಸಮಿತಿಯ ವರದಿ ಹೇಳಿದೆ. ಹೀಗಾಗಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಈಚೆಗೆ ಆರೋಪಿಗಳನ್ನು ಪಕ್ಷದ ಕಚೇರಿಗೆ ಕರೆದುಕೊಂಡು ಬಂದು ಫೋಟೊ ತೆಗೆದಿದ್ದಾರೆ. ಇದು ಯಾವ ರೀತಿಯ ವಿಚಾರಣೆ ಎಂಬುದು ಗೊತ್ತಾಗುತ್ತಿಲ್ಲ. ಎಸ್‌ಡಿಪಿಐನ್ನು ಉದ್ದೇಶಪೂರ್ವಕವಾಗಿ ಪ್ರಕರಣದಲ್ಲಿ ಸಿಲುಕಿಸುವ ಉದ್ದೇಶದಿಂದಲೇ ಪೊಲೀಸರು ಈ ರೀತಿ ಮಾಡುತ್ತಿದ್ದಾರೆ. ಆರೋಪಿಗಳು ಕುರಾನ್ ಮೇಲೆ, ತಾಯಿ ತಂದೆ ಮೇಲೆ ಪ್ರಮಾಣ ಮಾಡಲು ತಯಾರಿದ್ದಾರೆ. ಅವರನ್ನು ಸುಳ್ಳು ಹೇಳಿ ಪೊಲೀಸ್ ಠಾಣೆಗೆ ಕರೆದೋಯ್ದು ದೋಷಾರೋಪ ಹೊರಿಸಲಾಗಿದೆ. ಇವೆಲ್ಲವೂ ಕಟ್ಟುಕತೆ ಎಂದು ಕಿಡಿಕಾರಿದರು‌.

ವಕೀಲ ಅನಸ್, ಆರೋಪಿಗಳ ಪರ ವಕಾಲತ್ತು ವಹಿಸಿ ಜಾಮೀನಿಗೆ ಯತ್ನಿಸಲಾಗುವುದು ಎಂದು ತಿಳಿಸಿದರು

error: Content is protected !! Not allowed copy content from janadhvani.com