janadhvani

Kannada Online News Paper

ಮೊಬೈಲ್ ಸೇವೆ ತುಟ್ಟಿ- ಶೇ.42 ರಷ್ಟು ಹೆಚ್ಚಳ

ನವದೆಹಲಿ,ಡಿ.2: ಮೊಬೈಲ್‌ ಬಳಕೆದಾರರು ಮಂಗಳವಾರದಿಂದ (ಡಿ. 3) ಪ್ರತಿ ಕರೆ ಮತ್ತು ಡೇಟಾ ಬಳಕೆಗೆ ಶೇ 42ರವರೆಗೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ.

ವೊಡಾಫೋನ್‌ ಐಡಿಯಾ ಮತ್ತು ಭಾರ್ತಿ ಏರ್‌ಟೆಲ್‌ ಕಂಪನಿಗಳು ಡಿಸೆಂಬರ್‌ 3ರಿಂದ ಜಾರಿಗೆ ಬರುವಂತೆ ಮೊಬೈಲ್‌ ಕರೆ ಮತ್ತು ಡೇಟಾ ಶುಲ್ಕದಲ್ಲಿ ಏರಿಕೆಯನ್ನು ಘೋಷಿಸಿವೆ. ರಿಲಯನ್ಸ್‌ ಜಿಯೊ ಕಂಪನಿಯ ಶೇ 40ರಷ್ಟು ದರ ಏರಿಕೆಯು ಇದೇ 6ರಿಂದ ಅನ್ವಯಿಸಲಿದೆ.

ವೊಡಾಫೋನ್‌ ಐಡಿಯಾದ ಪ್ರೀ–ಪೇಯ್ಡ್‌ ಗ್ರಾಹಕರು ಒಟ್ಟಾರೆ ಶೇ 42ರಷ್ಟು ಅಧಿಕ ಶುಲ್ಕ ತೆರಬೇಕಾಗಿದೆ. ಬೇರೆ ಕಂಪನಿಗಳ ಮೊಬೈಲ್‌ ನಂಬರ್‌ಗೆ ಕಾಲ್‌ ಮಾಡಿದರೆ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ತೆರಬೇಕಾಗುತ್ತದೆ.

ಅನಿಯಮಿತ ಕೊಡುಗೆಯಲ್ಲಿ ಹಾಲಿ ಇರುವ ಎಲ್ಲಾ ಪ್ಲ್ಯಾನ್‌ಗಳೂ ಹೊಸ ಪ್ಲ್ಯಾನ್‌ಗೆ ಬದಲಾಗಲಿವೆ. ಮಾರುಕಟ್ಟೆಯ ಪ್ರತಿಕ್ರಿಯೆ ಆಧಾರದ ಮೇಲೆ ಹೊಸ ಪ್ಲ್ಯಾನ್‌ನಲ್ಲಿ ಪರಿಷ್ಕರಣೆ ಆಗಲಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರಿ ನಷ್ಟದಲ್ಲಿರುವ ಈ ದೂರಸಂಪರ್ಕ ಸೇವಾ ಕಂಪನಿಗಳು ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಗ್ರಾಹಕರಿಗೆ ನೀಡುವ ಸೇವೆಗಳ ಮೇಲೆ ಹೆಚ್ಚಿನ ಶುಲ್ಕ ವಿಧಿಸುವ ನಿರ್ಧಾರ ಕೈಗೊಂಡಿವೆ.

ಜಿಯೊ ಕಂಪನಿಯು ಹೊಸ ‘ಆಲ್‌ ಇನ್‌ ಒನ್‌ ಪ್ಲ್ಯಾನ್‌’ ಪರಿಚಯಿಸಲಿದ್ದು, ಅನಿಯಮಿತ ಕರೆ ಮತ್ತು ಡೇಟಾ ನೀಡಲಿದೆ. ಬೇರೆ ನೆಟ್‌ವರ್ಕ್‌ಗೆ ಮಾಡುವ ಕರೆಗೆ ಸಂಬಂಧಿಸಿದಂತೆ ನ್ಯಾಯೋಚಿತ ಬಳಕೆ ನೀತಿ ಪಾಲಿಸಲಾಗುವುದು ಎಂದು ತಿಳಿಸಿದೆ.

error: Content is protected !! Not allowed copy content from janadhvani.com