janadhvani

Kannada Online News Paper

ಉಪಚುನಾವಣೆ ಫಲಿತಾಂಶ ನಂತರ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸರಕಾರ?

ಬೆಂಗಳೂರು: ಉಪಚುನಾವಣೆ ಫಲಿತಾಂಶ ಪ್ರಕಟವಾಗುವ ಡಿ. 9ರ ನಂತರ ರಾಜ್ಯ ರಾಜಕಾರಣದಲ್ಲಿ ಮತ್ತೆ ಬದಲಾವಣೆಯ ಪರ್ವ ಪ್ರಾರಂಭವಾಗುತ್ತದೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಹೇಳುತ್ತಲೇ ಬಂದಿದ್ಧಾರೆ. ಇಂದು ಸುದ್ದಿಗೋಷ್ಠಿ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರೂ ಇದನ್ನೇ ಪುನರುಚ್ಚರಿಸಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಡಿಸೆಂಬರ್ 9ರ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಮತ್ತೆ ಅಸ್ತಿತ್ವಕ್ಕೆ ಬರಬಹುದು ಎಂದು ಹೇಳಿದ್ದಾರೆ.

ಡಿಸೆಂಬರ್ 9ರ ನಂತರ ಕಾಂಗ್ರೆಸ್ ಪಕ್ಷಕ್ಕೆ ಎರಡು ಆಯ್ಕೆಗಳಿವೆ. ಒಂದು ವಿಪಕ್ಷ ಸ್ಥಾನದಲ್ಲಿ ಕೂರುವುದು. ಮತ್ತೊಂದು ಜೆಡಿಎಸ್ ಜೊತೆ ಸೇರಿ ಸರ್ಕಾರ ಮಾಡುವುದು. ಇದರಲ್ಲಿ ಎರಡನೇ ಅವಕಾಶ ಹೆಚ್ಚಿದೆ. ಒಂದು ವೇಳೆ ಅಂಥ ಸಂದರ್ಭ ಬಂದರೆ ಸರ್ಕಾರ ರಚನೆಯ ನಿರ್ಧಾರವನ್ನು ವರಿಷ್ಠರು ತೆಗೆದುಕೊಳ್ಳುತ್ತಾರೆ. ಜನರಿಗೆ ಮತ್ತೊಂದು ಚುನಾವಣೆಯ ಹೊರೆ ಹಾಕಬಾರದು ಎಂಬ ಕಾರಣದಿಂದ ಜೆಡಿಎಸ್ ಜೊತೆ ಮತ್ತೊಮ್ಮೆ ಮೈತ್ರಿ ಸರ್ಕಾರ ಮಾಡುವ ಅಭಿಪ್ರಾಯ ಇದೆ ಎಂದು ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಪರ ಆಡಳಿತ ಕೊಟ್ಟಿತ್ತು. ಮೈತ್ರಿ ಸರ್ಕಾರ ಇದ್ದಾಗಲೂ ಅಭಿವೃದ್ಧಿ ಇತ್ತು. ಈಗ ಇಂಥ ದುರಾಡಳಿತ ಮತ್ತು ಅಸಮರ್ಥ ಸರ್ಕಾರ ರಾಜ್ಯದ ಜನತೆಗೆ ಬೇಕಾ? ಪಕ್ಷಾಂತರಿಗಳಿಗೆ ಸಹಕಾರ ಕೊಡಬೇಡಿ. ಬಿಜೆಪಿ ಅಭ್ಯರ್ಥಿಗಳನ್ನು ತಿರಸ್ಕರಿಸಿರಿ ಎಂದು ರಾಜ್ಯದ ಜನತೆಗೆ ಮನವಿ ಮಾಡುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ಪರಮೇಶ್ವರ್ ಕರೆಕೊಟ್ಟಿದ್ದಾರೆ.ಸಿದ್ದರಾಮಯ್ಯ ಜೊತೆ ತಮಗೆ ಯಾವುದೇ ಮುನಿಸಿಲ್ಲ ಎಂದವರು ಈ ವೇಳೆ ಸ್ಪಷ್ಟಪಡಿಸಿದ್ದಾರೆ.

“ನಾವಿಬ್ಬರು ಒಟ್ಟಿಗೆ ಹೋಗಿ ಪ್ರಚಾರ ಮಾಡದೇ ಇರುವುದು. ಒಬ್ಬರೇ ಹೋಗಿ ಪ್ರಚಾರ ಮಾಡುವುದು ಒಂದು ರಣತಂತ್ರವಾಗಿದೆ. ಸಿದ್ದರಾಮಯ್ಯ ಅವರನ್ನು ನಾವು ಯಾವುದೇ ಕಾರಣಕ್ಕೂ ಏಕಾಂಗಿ ಆಗಲು ಬಿಡುವುದಿಲ್ಲ” ಎಂದು ಜಿ. ಪರಮೇಶ್ವರ್ ಹೇಳಿದ್ದಾರೆ.

error: Content is protected !! Not allowed copy content from janadhvani.com