janadhvani

Kannada Online News Paper

‘ಮಹಾ’ಬಿಕ್ಕಟ್ಟು: ನಾಳೆ ಸಂಜೆ 5 ರೊಳಗೆ ಬಹುಮತ ಸಾಬೀತುಪಡಿಸಿ- ಸುಪ್ರೀಮ್

ನವದೆಹಲಿ: ಮಹಾರಾಷ್ಟ್ರ ಸರ್ಕಾರ ರಚನೆ ಬಿಕ್ಕಟ್ಟಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ಆದೇಶ ನೀಡಿದ್ದು ನಾಳೆ ಸಂಜೆ 5 ಗಂಟೆಯೊಳಗೆ ಸದನದಲ್ಲಿ ಬಹುಮತ ಸಾಬೀತುಪಡಿಸಿ ಎಂದು ಆದೇಶ ನೀಡಿದೆ.

ಅಲ್ಲದೆ ಹಂಗಾಮಿ ಸ್ಪೀಕರ್ ಅವರನ್ನು ನೇಮಕ ಮಾಡಬೇಕೆಂದು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರಿಗೆ ಆದೇಶ ನೀಡಿರುವ ನ್ಯಾಯಾಲಯ ಎಲ್ಲಾ ಚುನಾಯಿತ ಪ್ರತಿನಿಧಿಗಳು ನಾಳೆ ಸಂಜೆಯೊಳಗೆ ಪ್ರಮಾಣವಚನ ಸ್ವೀಕರಿಸಬೇಕೆಂದು ಹೇಳಿದೆ.

ಬಹುಮತ ಸಾಬೀತು ಪ್ರಕ್ರಿಯೆಯನ್ನು ಹಂಗಾಮಿ ಸ್ಪೀಕರ್ ನೇತೃತ್ವದಲ್ಲಿ ನಡೆಯಬೇಕು, ಮತದಾನ ಪ್ರಕ್ರಿಯೆಯನ್ನು ನೇರ ಪ್ರಸಾರ ಮಾಡಬೇಕು, ಗೌಪ್ಯ ಮತದಾನದ ಮೂಲಕ ಮತದಾನ ನಡೆಯಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡುವ ಮೂಲಕ ನಾಳೆ ಮಹಾರಾಷ್ಟ್ರ ಸರ್ಕಾರದ ಅಳಿವು-ಉಳಿವಿನ ಭವಿಷ್ಯ ನಿರ್ಧಾರವಾಗಲಿದೆ. ನಾಳೆ ಸಂಜೆ 5 ಗಂಟೆಗೆ ದೇವೇಂದ್ರ ಫಡ್ನವಿಸ್ ಅವರಿಗೆ ಅಗ್ನಿಪರೀಕ್ಷೆಯ ಸಮಯವಾಗಿದೆ.

ತಕ್ಷಣ ಬಹುಮತ ಸಾಬೀತಿಗೆ ಆದೇಶ ನೀಡಿ ಎಂದು ಒತ್ತಾಯಿಸುತ್ತಾ ಬಂದಿದ್ದ ಶಿವಸೇನೆ, ಎನ್ ಸಿಪಿ-ಕಾಂಗ್ರೆಸ್ ಗೆ ಇದು ಸದ್ಯದ ಮಟ್ಟಿಗೆ ಸಣ್ಣ ಗೆಲುವಾಗಿ ಕಂಡುಬಂದರೂ ಸಹ ಹಂಗಾಮಿ ಸ್ಪೀಕರ್ ಆಗಿ ಯಾರನ್ನು ನೇಮಕ ಮಾಡಬೇಕೆಂಬ ಬಗ್ಗೆ ಸ್ಪಷ್ಟತೆಯಿಲ್ಲ.
ಕಳೆದ ಬಾರಿ ಕರ್ನಾಟಕದಲ್ಲಿ ಹಂಗಾಮಿ ಸ್ಪೀಕರ್ ಹುದ್ದೆಗೆ ಮೂವರ ಹೆಸರುಗಳನ್ನು ಸೂಚಿಸಲಾಗಿತ್ತು, ಅವರಲ್ಲಿ ಒಬ್ಬರ ಹೆಸರನ್ನು ಕಾಂಗ್ರೆಸ್ ವಿರೋಧಿಸಿತ್ತು.

ಸತತ ಎರಡು ದಿನಗಳ ಕಾಲ ವಾದ ವಿವಾದ ಆಲಿಸಿದ ನ್ಯಾಯಮೂರ್ತಿಗಳಾದ ಎನ್ ವಿ ರಮಣ, ಅಶೋಕ್ ಭೂಷಣ್ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ನಿನ್ನೆ ಮಹಾರಾಷ್ಟ್ರ ರಾಜ್ಯಪಾಲ, ಬಿಜೆಪಿ ಮತ್ತು ಇತರ ಮೂರೂ ಪಕ್ಷಗಳ ಪರ ನ್ಯಾಯವಾದಿಗಳ ವಾದ-ವಿವಾದ ಆಲಿಸಿ ಇಂದು ತೀರ್ಪಿ ಕೊಟ್ಟಿದೆ.

ಕಳೆದ 23ರಂದು ಬೆಳ್ಳಂಬೆಳಗ್ಗೆ ರಾಜಭವನದಲ್ಲಿ ಬಿಜೆಪಿಯ ದೇವೇಂದ್ರ ಫಡ್ನವಿಸ್ ಮತ್ತು ಎನ್ ಸಿಪಿಯ ಅಜಿತ್ ಪವಾರ್ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಅವಕಾಶ ಮಾಡಿಕೊಟ್ಟ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಕ್ರಮವನ್ನು ಪ್ರಶ್ನಿಸಿ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

ರಾಜ್ಯಪಾಲರ ನಿರ್ಧಾರದ ನ್ಯಾಯಾಂಗ ಪರಿಶೀಲನೆಯನ್ನು ಇನ್ನಷ್ಟು ವಿಚಾರಣೆ ನಡೆಸಿ ಎಲ್ಲಾ ಪಕ್ಷಗಳು ತಮ್ಮ ಪ್ರತಿಕ್ರಿಯೆಯನ್ನು ಮತ್ತು ಈ ವಿಷಯದ ಕುರಿತು ಇನ್ನಷ್ಟು ವಿಚಾರಣೆಯನ್ನು ಇನ್ನು 8 ವಾರಗಳೊಳಗೆ ನೀಡಲು ನ್ಯಾಯಾಲಯ ನಿರ್ಧರಿಸಿದೆ.

error: Content is protected !! Not allowed copy content from janadhvani.com