janadhvani

Kannada Online News Paper

ಟೇಕಾಫ್ ಆದ ಕೂಡಲೇ ಪತನಗೊಂಡ ವಿಮಾನ- 29 ಕ್ಕೂ ಅಧಿಕ ಮಂದಿ ನಿಧನ

ಗೋಮ,ನ. 25: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ದೇಶದ ಗೋಮ ನಗರದಲ್ಲಿ ವಿಮಾನವೊಂದು ಅಪಘಾತಕ್ಕೀಡಾಗಿದ್ದು, 29ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಟೇಕಾಫ್​ ಆದ ಕೂಡಲೆ ವಿಮಾನವು ಪತನಗೊಂಡಿದೆ.

ವಿಮಾನದಲ್ಲಿದ್ದವರಲ್ಲಿ ಬಹುತೇಕ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ ಎಂದು ನಾರ್ತ್ ಕಿವು ಸರ್ಕಾರ ತಿಳಿಸಿದೆ. ಬ್ಯುಸಿ ಬೀ ಎಂಬ ಸ್ಥಳೀಯ ಸಂಸ್ಥೆಗೆ ಸೇರಿದ ಈ ವಿಮಾನ ಬೆನಿ ನಗರಕ್ಕೆ ಹೊರಟಿತ್ತು. ಟೇಕಾಫ್​ ಆಗುವ ವೇಳೆ ಅಪಘಾತಕ್ಕೀಡಾಗಿದೆ ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಕಾರಣ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಈ ವಿಮಾನ ಸಂಸ್ಥೆಯ ಕಳಪೆ ನಿರ್ವಹಣೆಯಿಂದಾಗಿ ಆಗಿಂದಾಗ್ಗೆ ವಿಮಾನ ಅಪಘಾತಗಳು ಸಂಭವಿಸುತ್ತಿವೆ. ಹಾಗಾಗಿ ಯುರೋಪಿಯನ್ ಒಕ್ಕೂಟದಲ್ಲಿ ಈ ವಿಮಾನಗಳ ಕಾರ್ಯ ನಿರ್ವಹಣೆಯನ್ನು ನಿಷೇಧಿಸಲಾಗಿದೆ.

ಒಟ್ಟಾರೆ 29 ಮೃತದೇಹಗಳು ಪತ್ತೆಯಾಗಿವೆ. ಏರ್​ಪೋರ್ಟ್​ ಬಳಿ ಇದ್ದ 2 ಮನೆಗಳ ಮೇಲೆ ವಿಮಾನ ಬಿದ್ದಿದ್ದರಿಂದ ಅವೆರಡೂ ಮನೆಗಳು ನೆಲಸಮವಾಗಿವೆ ಎಂದು ಅಲ್ಲಿನ ಸರ್ಕಾರದ ಪ್ರಕಟಣೆ ತಿಳಿಸಿದೆ. ತಾಂತ್ರಿಕ ಸಮಸ್ಯೆಯಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

error: Content is protected !! Not allowed copy content from janadhvani.com