janadhvani

Kannada Online News Paper

ಅಯೋಧ್ಯೆ ತೀರ್ಪು: ಪ್ರಚೋದನಕಾರಿ ಪೋಸ್ಟ್- 88 ಮಂದಿ ಬಂಧನ

ಅಯೋಧ್ಯೆ ,ನ. 11: ಸುಪ್ರೀಂಕೋರ್ಟ್​ನಲ್ಲಿ ಅಯೋಧ್ಯೆಯ ರಾಮಜನ್ಮಭೂಮಿ- ಬಾಬ್ರಿ ಮಸೀದಿ ವಿವಾದಿತ ಜಾಗದ ಕುರಿತು ತೀರ್ಪು ಪ್ರಕಟವಾಗಿ 2 ದಿನಗಳು ಕಳೆದಿವೆ. ಆಯೋಧ್ಯೆ ತೀರ್ಪು ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದ ಆರೋಪದ ಹಿನ್ನಲೆಯಲ್ಲಿ ಪೊಲೀಸರು ಸುಮಾರು 88 ಮಂದಿಯನ್ನು ಬಂಧಿಸಿದ್ದಾರೆ.

ಅಯೋಧ್ಯೆ ತೀರ್ಪು ಹೊರಬಿದ್ದ ಬಳಿಕ ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರು ತೀವ್ರ ನಿಗಾ ಇರಿಸಿದ್ದು, ಶಾಂತಿ ಕದಡುವ ಸಾಮಾಜಿಕ ಜಾಲತಾಣಗಳ ಪೋಸ್ಟ್​, ಮೆಸೇಜ್​ಗಳ ಮೇಲೆ ನಿಗಾ ಇರಿಸಲಾಗಿತ್ತು. ಅಯೋಧ್ಯೆ ತೀರ್ಪಿನ ಕುರಿತು ಕೋಮು ಸೌಹಾರ್ದತೆ ಕದಡುವ ಪ್ರಚೋದನಕಾರಿ ಪೋಸ್ಟ್ ಹಾಕಿದ್ದ 88 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ವಿವಾದಿತ ರಾಮಜನ್ಮಭೂಮಿ ಪ್ರಕರಣದ ವಿಚಾರದಲ್ಲಿ ಸುಪ್ರೀಂಕೋರ್ಟ್​ ಶನಿವಾರ ತೀರ್ಪು ಪ್ರಕಟ ಮಾಡಿತ್ತು. ಎಲ್ಲ ಧರ್ಮವನ್ನೂ ಗೌರವಿಸುವುದಾಗಿ ಹೇಳಿದ ಸುಪ್ರೀಂ ಕೋರ್ಟ್​ನ ಸಾಂವಿಧಾನಿಕ ಪೀಠ ಹಿಂದೂಗಳಿಗೆ ಕೆಲವು ಷರತ್ತುಗಳನ್ನು ವಿಧಿಸಿ ಅಯೋಧ್ಯೆಯಲ್ಲಿ ಜಾಗವನ್ನು ನೀಡಿ ಆದೇಶ ಹೊರಡಿಸಿತ್ತು. ಮುಸ್ಲಿಂ ಸಮುದಾಯಕ್ಕೆ 5 ಎಕರೆ ಬದಲಿ ಜಾಗವನ್ನು ನೀಡಲು ಸುಪ್ರೀಂ ಕೋರ್ಟ್​ ಆದೇಶಿಸಿತ್ತು. ಈ ತೀರ್ಪು ಹೊರಬಿದ್ದ 2 ದಿನಗಳಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿರುವ 88 ಜನರನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶವೊಂದರಲ್ಲೇ 77 ಮಂದಿಯನ್ನು ಬಂಧಿಸಲಾಗಿದೆ.

ಮೂಲಗಳ ಪ್ರಕಾರ ಆಯೋಧ್ಯ ತೀರ್ಪಿನ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದ ಸುಮಾರು 8,275 ಪೋಸ್ಟ್ ಗಳನ್ನು ಪೊಲೀಸರು ಶೋಧಿಸಿದ್ದು, ಈ ಪೈಕಿ ಭಾನುವಾರ ಒಂದೇ ದಿನ 4,563 ಪೋಸ್ಟ್ ಗಳನ್ನು ವೀಕ್ಷಿಸಿದ್ದಾರೆ. ಗ್ವಾಲಿಯರ್​ನಲ್ಲಿ ಅಯೋಧ್ಯೆ ತೀರ್ಪು ಹೊರಬಿದ್ದ ಬೆನ್ನಲ್ಲೇ ಪಟಾಕಿ ಸಿಡಿಸಿ ಸಂಭಮಿಸಿದ್ದ ಜೈಲು ವಾರ್ಡನ್ ಮಹೇಶ್ ಎಂಬುವವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

error: Content is protected !! Not allowed copy content from janadhvani.com