ನವದೆಹಲಿ.ನ,09: ಅಯೋಧ್ಯೆಯಲ್ಲಿನ ರಾಮ ಜನ್ಮಭೂಮಿ–ಬಾಬರಿ ಮಸೀದಿಗೆ ಸಂಬಂಧಿಸಿದ ಬಹುಕಾಲದ ಅನಿಶ್ಚಿತ ಸ್ಥಿತಿ ಕೊನೆಯಾಗಲಿದೆ. ವಿವಾದಿತ ರಾಮಜನ್ಮಭೂಮಿ ಪ್ರಕರಣದ ವಿವಾದ ವಿಚಾರದಲ್ಲಿ ಸುಪ್ರೀಂಕೋರ್ಟ್ ಇಂದು ತೀರ್ಪು ಪ್ರಕಟ ಮಾಡಿದೆ. ಎಲ್ಲಾ ಧರ್ಮವನ್ನೂ ಗೌರವಿಸುವುದಾಗಿ ಹೇಳಿದ ಸುಪ್ರೀಂ ಕೋರ್ಟ್ನ ಸಾಂವಿಧಾನಿಕ ಪೀಠ, ಕೇವಲ ನಂಬಿಕೆಗಳಿಂದ ಭೂಮಿಯ ಹಕ್ಕುದಾರಿಕೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಜತೆಗೆ ಹಿಂದೂಗಳಿಗೆ ಕೆಲವು ಷರತ್ತುಗಳನ್ನು ವಿಧಿಸಿ ಅಯೋಧ್ಯೆಯಲ್ಲಿ ಜಾಗವನ್ನು ನೀಡಿ ಸುಪ್ರೀಂ ಕೋರ್ಟ್ ಆದೇಶಿಸಿದೆ. ಇನ್ನು ಮುಸ್ಲಿಂ ಸಮುದಾಯಕ್ಕೆ ಬದಲಿ ಜಾಗವನ್ನು ನೀಡಲು ಸಹ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಮೂಲಕ ಅತಿ ಹಳೆಯ ವಿವಾದಕ್ಕೆ ತೆರೆ ಎಳೆದಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಸಂವಿಧಾನ ಪೀಠವು ಪ್ರಕರಣದ ವಿಚಾರಣೆಯನ್ನು ಸತತ 40 ದಿನ ನಡೆಸಿ, ಅಕ್ಟೋಬರ್ 16ರಂದು ತೀರ್ಪು ಕಾಯ್ದಿರಿಸಿತ್ತು.
ಟ್ರಸ್ಟ್ ರಚಿಸಲು, ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮತ್ತು ಮಸೀದಿಗೆ ಪರ್ಯಾಯ ಭೂಮಿ ನೀಡಲು ಸರ್ಕಾರಕ್ಕೆ 3–4 ತಿಂಗಳ ಗಡುವು ವಿಧಿಸಿದ ಸುಪ್ರೀಂ ಕೋರ್ಟ್
- ಮಂದಿರ ನಿರ್ಮಾಣ ಹೊಣೆ ಸರ್ಕಾರಕ್ಕೆ, ನಿರ್ವಹಣೆ ಹೊಣೆ ಟ್ರಸ್ಟ್ಗೆ ನೀಡುವಂತೆ ಸರ್ಕಾರಕ್ಕೆ ಆದೇಶ
- ಸುನ್ನಿ ವಕ್ಫ್ ಬೋರ್ಡ್ಗೆ ಮಸೀದಿ ನಿರ್ಮಾಣಕ್ಕೆ ಬೇರೆಡೆ ಪ್ರತ್ಯೇಕ 5 ಎಕರೆ ಭೂಮಿ ನೀಡುವಂತೆ ಸರ್ಕಾರಕ್ಕೆ ಆದೇಶ
- ವಿವಾದಿತ ಜಮೀನು ರಾಮಲಲ್ಲಾಗೆ ಸೇರಿದ್ದು, ಮಂದಿರ ನಿರ್ಮಾಣಕ್ಕೆ ನಿಯಮ ರೂಪಿಸಿ ಎಂದ ಸುಪ್ರೀಂ ಕೋರ್ಟ್
- ವಿವಾದಿತ ಜಾಗವನ್ನು ಮೂರು ಭಾಗ ಮಾಡಿದ್ದಕ್ಕೆ ಎಲ್ಲೆಡೆಯಿಂದಲೂ ವಿರೋಧವಿದೆ
- ಮಸೀದಿಗೆ ಹಾನಿ ಮಾಡಿದ್ದು, ಕಾನೂನು ಕೈಗೆ ತೆಗೆದುಕೊಂಡಿದ್ದೂ ಸರಿಯಲ್ಲ
- ಬಾಬರಿ ಮಸೀದಿಯನ್ನು ಖಾಲಿ ಜಮೀನಿನಲ್ಲಿ ನಿರ್ಮಿಸಿದ್ದಲ್ಲ ಅಲ್ಲಿ ದೊಡ್ಡ ಕಟ್ಟಡವಿತ್ತು, ಆ ಕಟ್ಟಡವು ಇಸ್ಲಾಮಿಕ್ ಮೂಲದ್ದಲ್ಲ ಅಂತ ಪುರಾತತ್ವ ಇಲಾಖೆ ಹೇಳಿದೆ. ಬಾಬರಿ ಕಟ್ಟಡದ ಅಡಿಯಲ್ಲಿ ಇಸ್ಲಾಮೇತರ ಕಟ್ಟಡದ ಅವಶೇಷವಿತ್ತು. ಮಂದಿರವನ್ನು ಧ್ವಂಸ ಮಾಡಿರುವ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ.
- ಹಿಂದೂಗಳು ಅಯೋಧ್ಯೆಯನ್ನು ರಾಮನ ಜನ್ಮಸ್ಥಾನ ಅಂತ ನಂಬಿದ್ದಾರೆ, ಈ ವಿಚಾರದಲ್ಲಿ ಅವರಿಗೆ ಧಾರ್ಮಿಕ ಭಾವನೆಗಳಿವೆ. ಮುಸ್ಲಿಮರು ಆ ಜಾಗ ಬಾಬ್ರಿ ಮಸೀದಿಯದ್ದು ಅಂತಾರೆ. ಆದರೆ ರಾಮ ಅಲ್ಲಿ ಜನಿಸಿದ್ದ ಎಂಬ ಹಿಂದುಗಳ ನಂಬಿಕೆ ವಿವಾದರಹಿತವಾದದ್ದು
- ಪುರಾತತ್ವ ಇಲಾಖೆಯ ಶೋಧನೆಯನ್ನು ಮಾನ್ಯ ಮಾಡಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ
- ರಾಮ ಅಲ್ಲಿಯೇ ಜನಿಸಿದ ಎಂಬುದು ಹಿಂದುಗಳ ನಂಬಿಕೆ. ನಂಬಿಕೆಯು ವೈಯಕ್ತಿಕ ವಿಷಯ
- ಹಿಂದುಗಳು ಅಯೋಧ್ಯೆಯನ್ನು ರಾಮಜನ್ಮಭೂಮಿ ಅಂತ ಒಪ್ಪಿಕೊಂಡಿರುವುದಲ್ಲಿ ಯಾವುದೇ ವಿವಾದ ಇಲ್ಲ
- ಬಾಬ್ರಿ ಮಸೀದಿಯನ್ನು ಖಾಲಿ ಜಾಗದಲ್ಲಿ ನಿರ್ಮಿಸಲಾಗಿಲ್ಲ, ವಿವಾದಿತ ಕಟ್ಟಡ ಇಸ್ಲಾಮಿಕ್ ಸಂರಚನೆ ಹೊಂದಿಲ್ಲ
- ನಿರ್ಮೋಹಿ ಅಖಾಡದ ಅರ್ಜಿ ವಜಾ, ರಾಮಲಲ್ಲಾ ಮುಖ್ಯ ಅರ್ಜಿದಾರ ಎಂದು ಮಾನ್ಯ ಮಾಡಿದ ಸುಪ್ರೀಂ ಕೋರ್ಟ್
ಐವರು ಸದಸ್ಯರ ಸಾಂವಿಧಾನಿಕ ಪೀಠದಲ್ಲಿರುವವರು: ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ನ್ಯಾಯಮೂರ್ತಿಗಳಾದ ಎಸ್ ಎ ಬೊಬ್ಡೆ, ಡಿ.ವೈ.ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್.ಅಬ್ದುಲ್ ನಜೀರ್.
ತೀರ್ಪು ನಮಗೆ ತೃಪ್ತಿ ತಂದಿಲ್ಲ, ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸುತ್ತೇವೆ–ಸುನ್ನಿ ವಕ್ಫ್ ಬೋರ್ಡ್ ಪರ ವಕೀಲ
ನವದೆಹಲಿ: ಅಯೋಧ್ಯೆ ಭೂ ವಿವಾದದ ಬಗ್ಗೆ ಸುಪ್ರೀಂಕೋರ್ಟಿನ ಸಾಂವಿಧಾನಿಕ ಪೀಠ ನೀಡಿರುವ ತೀರ್ಪನ್ನು ಗೌರವಿಸುತ್ತೇವೆ. ಆದರೆ, ತೃಪ್ತಿ ಇಲ್ಲ ಎಂದು ಸುನ್ನಿ ವಕ್ಫ್ ಬೋರ್ಡ್ ಪರ ವಕೀಲ ಜಾಫರ್ ಯಾಬ್ ಜಿಲಾನಿ ಹೇಳಿದ್ದಾರೆ. ತೀರ್ಪು ಹೊರಬಂದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಸೀದಿ ನಿರ್ಮಾಣಕ್ಕೆ ಪ್ರತ್ಯೇಕ ಜಾಗ ನೀಡಿಕೆ ಸರಿಯಲ್ಲ. ತೀರ್ಪಿನ ಕೆಲ ಸಂಗತಿಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ತೀರ್ಪನ್ನು ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ನಮ್ಮ ಜಾಗವನ್ನು ಬೇರೆಯವರಿಗೆ ನೀಡಲಾಗಿದೆ. ತೀರ್ಪು ಮರು ಪರಿಶೀಲನೆ ಕೋರಿ ಮನವಿ ಸಲಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.