janadhvani

Kannada Online News Paper

ಆನ್-ಅರೈವಲ್ ಸೌಲಭ್ಯ ಭಾರತೀಯರಿಗಿಲ್ಲ- ಇ-ವೀಸಾಕ್ಕೆ ಅರ್ಜಿ ಸಲ್ಲಿಸಬಹುದು

ರಿಯಾದ್: ಸೌದಿ ಅರೇಬಿಯಾ ಘೋಷಿಸಿದ ಆನ್-ಅರೈವಲ್ ಸೌಲಭ್ಯ ಭಾರತೀಯರಿಗೆ ಸಾಧ್ಯವಾಗದಿದ್ದರೂ, ಇ-ವೀಸಾಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಹತ್ತಿರದ ಸೌದಿ ರಾಯಭಾರ ಕಚೇರಿಯಿಂದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬಹುದಾಗಿದ್ದು, ವೀಸಾ ಶುಲ್ಕ 300 ರಿಯಾಲ್ ಆಗಿದೆ. ಹೆಚ್ಚುವರಿಯಾಗಿ, ಸೌದಿಯ ಅಧಿಕೃತ ಪ್ರಯಾಣ ವಿಮೆಯನ್ನು ಪಡೆದಿರಬೇಕು.

18 ವರ್ಷಕ್ಕಿಂತ ಮೇಲ್ಪಟ್ಟವರು ವೀಸಾ ಫೋರಂ ಮೂಲಕ ಅರ್ಜಿ ಸಲ್ಲಿಸಬಹುದು. 18 ವರ್ಷದೊಳಗಿನವರು ಇತರ ಯಾರಾದರೂ ಹಿರಿಯ ಪ್ರವಾಸಿಯೊಂದಿಗೆ ದೇಶಕ್ಕೆ ಪ್ರಯಾಣಿಸಲು ಅವಕಾಶ ನೀಡಲಾಗುವುದು. ಪಾಸ್ಪೋರ್ಟ್ ಕನಿಷ್ಠ ಆರು ತಿಂಗಳವರೆಗೆ ಮಾನ್ಯವಾಗಿರಬೇಕು. ಪ್ರಾಯೋಜಕ ಅಗತ್ಯವಿಲ್ಲದಿದ್ದರೂ, ರಿಟರ್ನ್ ಟಿಕೆಟ್, ಹೋಟೆಲ್ ಬುಕಿಂಗ್ ಡಾಕ್ಯುಮೆಂಟ್, ಬ್ಯಾಂಕ್ ಸ್ಟೇಟ್ಮೆಂಟ್, ಗುರುತಿನ ದಾಖಲೆ, ಉದ್ಯೋಗ ದಾಖಲೆ ಮತ್ತು ದೇಶದ ವಿಳಾಸವನ್ನು ಅರ್ಜಿಯೊಂದಿಗೆ ಒದಗಿಸಬೇಕು.

ಒಂದು ಅಥವಾ ಎರಡು ದಿನಗಳಲ್ಲಿ ವೀಸಾ ಲಭಿಸಲಿದೆ. ಟಿಕೆಟ್ ಬುಕಿಂಗ್, ಹೋಟೆಲ್ ಬುಕಿಂಗ್ ಮತ್ತು ಕಾರು ಬಾಡಿಗೆಗೆ ಸೌದಿ ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್ ಮೂಲಕ ಲಭ್ಯವಿದೆ. ಮುಸ್ಲಿಮೇತರ ಪ್ರವಾಸಿಗರು ಮಕ್ಕಾ ಅಥವಾ ಮದೀನಾವನ್ನು ಪ್ರವೇಶಿಸಲು ಸಾಧ್ಯವಿಲ್ಲ. ಈ ವೀಸಾ ಹೊಂದಿರುವವರಿಗೆ ಹಜ್ ಸಮಯದಲ್ಲಿ ಹಜ್ ಮತ್ತು ಉಮ್ರಾ ನಿರ್ವಹಿಸಲು ಅನುಮತಿ ಇಲ್ಲ. ಆದರೆ ಇತರ ಸಮಯಗಳಲ್ಲಿ ಉಮ್ರಾ ನಿರ್ವಹಿಸಲು ಯಾವುದೇ ಅಡೆತಡೆಗಳಿಲ್ಲ.

ಏಕ ಪ್ರವೇಶ ಮತ್ತು ಬಹು ಪ್ರವೇಶಕ್ಕಾಗಿ ಎರಡು ರೀತಿಯ ವೀಸಾಗಳನ್ನು ಅನುಮತಿಸಲಾಗಿದೆ. ಏಕ ಪ್ರವೇಶ ವೀಸಾದಲ್ಲಿ ದೇಶದಲ್ಲಿ ಗರಿಷ್ಠ 30 ದಿನಗಳವರೆಗೆ ಉಳಿಯಬಹುದಾಗಿದೆ. ಬಹು ಪ್ರವೇಶ ವೀಸಾ 12 ತಿಂಗಳವರೆಗೆ ಮಾನ್ಯವಾಗಿರುತ್ತದೆ. ಆದರೆ ಅವರು ಸತತವಾಗಿ 90 ದಿನಗಳ ಕಾಲ ದೇಶದಲ್ಲಿ ಉಳಿಯಬಹುದು. ಊರಿಗೆ ಮರಳಿದ ನಂತರ, ಅವರು ಮತ್ತೆ ಅದೇ ವೀಸಾದಲ್ಲಿ ಹಿಂತಿರುಗಿ, ಇನ್ನೂ 90 ದಿನಗಳ ಕಾಲ ತಂಗಬಹುದಾಗಿದ್ದು, ವೀಸಾ ಅವಧಿ ಮುಗಿದ ನಂತರ ದೇಶದಲ್ಲಿ ಉಳಿಯುವವರಿಗೆ ದಿನಕ್ಕೆ 100 ರಿಯಾಲ್ ದಂಡ ವಿಧಿಸಲಾಗುತ್ತದೆ.

error: Content is protected !! Not allowed copy content from janadhvani.com