janadhvani

Kannada Online News Paper

ಸೌದಿ ಟೂರಿಸ್ಟ್ ವೀಸಾ- ಅರ್ಜಿ ಸ್ವೀಕಾರ ಆರಂಭ

ರಿಯಾದ್, ಸೆ.27: ಇದೇ ಮೊದಲಬಾರಿಗೆ ಸೌದಿ ಅರೇಬಿಯಾ ಟೂರಿಸ್ಟ್ ವೀಸಾ ನೀಡಲು ನಿರ್ಧರಿಸಿದ್ದು ಈ ಮೂಲಕ ತೈಲೇತರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಮಹತ್ವದ ಕ್ರಮವನ್ನು ಕೈಗೊಂಡಿದೆ.

ಆನ್‍ಲೈನ್ ಟೂರಿಸ್ಟ್ ವೀಸಾಗಳಿಗೆ ಅರ್ಜಿ ಸ್ವೀಕರಿಸುವ ಪ್ರಕ್ರಿಯೆಯನ್ನು ಸೌದಿ ಅರೇಬಿಯಾ 49 ದೇಶಗಳ ನಾಗರಿಕರಿಗೆ ಸೆ.28 (ಶನಿವಾರ) ಆರಂಭಿಸಲಿದೆ.

ವೀಸಾಗಳು ಆನ್‌ಲೈನ್‌ನಲ್ಲಿ ಸುಮಾರು $ 80 (Dh294) ಗೆ ಲಭ್ಯವಿರುತ್ತವೆ, ಹಿಂದಿನಂತೆ ಮಹಿಳೆಯರ ಉಡುಗೆಯಲ್ಲಿ ಯಾವುದೇ ನಿರ್ಬಂಧಗಳಿಲ್ಲ. ಮುಸ್ಲಿಂ ಪವಿತ್ರ ನಗರಗಳಾದ ಮಕ್ಕಾ ಮತ್ತು ಮದೀನಾಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ರಿಯಾದ್‌ನ ಯುನೆಸ್ಕೊ (ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ವಿಶ್ವ ಪರಂಪರೆಯ ತಾಣವಾದ ಆಡ್ ದಿರಿಯಾದಲ್ಲಿ ನಡೆಯಲಿರುವ ಅನಾವರಣ ಸಮಾರಂಭದಲ್ಲಿ ಶುಕ್ರವಾರ ರಾತ್ರಿ 10.30 ಕ್ಕೆ ಹೊಸ ವೀಸಾ ನಿಯಮಗಳ ಹೆಚ್ಚಿನ ವಿವರಗಳನ್ನು ಪ್ರಕಟಿಸಲಾಗುವುದು.

ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಅವರ ವಿಷನ್ -2030 ಕಾರ್ಯಕ್ರಮದಲ್ಲಿ ಈ ಟೂರಿಸ್ಟ್ ವೀಸಾ ಯೋಜನೆಯೂ ಅಡಕವಾಗಿದೆ.ಸೌದಿ ಅರೇಬಿಯಾದ ತೈಲ ನಿಕ್ಷೇಪಗಳ ಮೇಲೆ ಡ್ರೋನ್ ದಾಳಿ ನಡೆದ ಎರಡು ವಾರಗಳಲ್ಲಿಯೇ ಈ ಘೋಷಣೆ ಹೊರಬಿದ್ದಿದೆ.

‘ಸೌದಿ ಅರೇಬಿಯಾವನ್ನು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ತೆರೆಯುವುದು ನಮ್ಮ ದೇಶಕ್ಕೆ ಒಂದು ಐತಿಹಾಸಿಕ ಕ್ಷಣವಾಗಿದೆ,” ಎಂದು ಪ್ರವಾಸೋದ್ಯಮ ಮುಖ್ಯಸ್ಥ ಅಹ್ಮದ್ ಅಲ್-ಖತೀಬ್ ಹೇಳಿದ್ದಾರೆ.

ಖತೀಬ್ ಅವರು ಹೇಳಿಕೆಯಂತೆ ,ಸೌದಿ ಮಹಿಳೆಯರಿಗೆ ಕಡ್ಡಾಯವಾಗಿರುವ ಮೈಮುಚ್ಚುವ ಬಟ್ಟೆ ಧರಿಸಬೇಕೆಂಬ ನಿಯಮ ವಿದೇಶಿ ಪ್ರವಾಸಿಗರಿಗೆ ಅನ್ವಯವಾಗದು. ಆದರೆ ವಿದೇಶಿ ಮಹಿಳೆಯರು ಸಭ್ಯ ಉಡುಗೆಗಳನ್ನು ಧರಿಸಬೇಕು ಎಂದು ಅವರು ಹೇಳಿದ್ದಾರೆ.

ಈ ತನಕ ಸೌದಿ ಅರೇಬಿಯಾದ ವೀಸಾಗಳು ವಲಸಿಗ ಕಾರ್ಮಿಕರಿಗೆ, ಅವರ ಅವಲಂಬಿತರಿಗೆ ಹಾಗೂ ಮಕ್ಕಾ ಮದೀನಾಗೆ ಪ್ರಯಾಣಿಸುವ ಮುಸ್ಲಿಂ ಹಜ್ ಯಾತ್ರಿಗಳಿಗೆ ಮಾತ್ರ ಸೀಮಿತವಾಗಿತ್ತು.ಕಳೆದ ವರ್ಷವಷ್ಟೇ ವಿದೇಶೀಯರಿಗೆ ಸೌದಿಯಲ್ಲಿ ನಡೆಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ತಾತ್ಕಾಲಿಕ ವೀಸಾ ನೀಡುವ ಪ್ರಕ್ರಿಯೆ ಆರಂಭಗೊಂಡಿತ್ತು.

error: Content is protected !! Not allowed copy content from janadhvani.com