janadhvani

Kannada Online News Paper

ಉಪ ಚುನಾವಣೆಗೆ ಸುಪ್ರೀಂ ತಡೆ- ಅನರ್ಹರು ನಿರಾಳ

ನವದೆಹಲಿ: ರಾಜ್ಯ ವಿಧಾನಸಭೆ ಉಪ ಚುನಾವಣೆಗೆ ಸುಪ್ರೀಂ ಕೋರ್ಟ್ ಗುರುವಾರ ತಡೆಯಾಜ್ಞೆ ವಿಧಿಸಿದ್ದು, 15 ಅನರ್ಹ ಶಾಸಕರು ನಿರಾಳರಾಗಿದ್ದಾರೆ.ಇಂದು ಸತತ ಎರಡನೇ ದಿನವೂ ಅನರ್ಹ ಶಾಸಕರ ಅರ್ಜಿ ವಿಚಾರಣೆಯ ವಾದ-ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ನ್ಯಾಯಪೀಠ ಉಪ ಚುನಾವಣೆಗೆ ತಾತ್ಕಾಲಿಕ ತಡೆ ನೀಡಿ ವಿಚಾರಣೆಯನ್ನು ಅಕ್ಟೋಬರ್ 22ಕ್ಕೆ ಮುಂದೂಡಿದೆ.

ತಮ್ಮನ್ನು ಅನರ್ಹಗೊಳಿಸಿರುವ ಸ್ಪೀಕರ್ ಆದೇಶಕ್ಕೆ ತಡೆ ನೀಡಿ, ಇಲ್ಲವೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿ ಅಥವಾ ಉಪ ಚುನಾವಣೆಗೆ ತಡೆ ನೀಡುವಂತೆ ಕೋರಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.ಇಂದು ಕಾಂಗ್ರಸ್‌ ಪರ ವಾದ ಮಂಡಿಸಿದ ವಕೀಲ ಕಪಿಲ್‌ ಸಿಬಲ್‌ ಅವರು, ಸ್ಪೀಕರ್‌ ಕಚೇರಿಗೆ ನ್ಯಾಯಾಲಯ ನಿರ್ದೇಶನ ನೀಡಲು ಅವಕಾಶವಿಲ್ಲ ಆದರೆ, ನ್ಯಾಯಾಲಯ ಅಂತಹದ್ದೊಂದು ನಿರ್ದೇಶನ ನೀಡಿದೆ.

ತಮಿಳುನಾಡಿನ ಒಂದು ಪ್ರಕರಣದಲ್ಲಿ ನ್ಯಾಯಾಲಯವು ಸ್ಪೀಕರ್‌ ಅವರ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿರುವುದನ್ನು ಸಿಬಲ್‌ ಉಲ್ಲೇಖಿಸಿದ್ದರು.ಅನರ್ಹ ಶಾಸಕರು ತಾವು ಈಗಲೂ ಪಕ್ಷವನ್ನು ತ್ಯಜಿಸಿಲ್ಲ ಎಂದು ಹೇಳುತ್ತಾರೆ. ಆದರೆ, ಕಾಂಗ್ರೆಸ್ ಆಹ್ವಾನಿಸಿದ ಸಭೆಗಳಲ್ಲಿ ಏಕೆ ಭಾಗವಹಿಸಿಲ್ಲ ಎಂದು ಕಪಿಲ್‌ ಸಿಬಲ್‌ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದರು. ಸುಪ್ರಿಂಕೋರ್ಟ್ ತೀರ್ಪಿಗೆ ಅನರ್ಹ ಶಾಸಕರು ಸಂತಸ ವ್ಯಕ್ತಪಡಿಸಿದ್ದು, ನ್ಯಾಯಾಲಯದಲ್ಲಿ ಜಯ ಸಿಗುವ ವಿಶ್ವಾಸವಿದೆ ಎಂದು ರಾಜರಾಜೇಶ್ವರಿನಗರ ಅನರ್ಹ ಕಾಂಗ್ರೆಸ್ ಶಾಸಕ ಮುನಿರತ್ನ ಹೇಳಿದ್ದಾರೆ.

ಉಪ ಚುನಾವಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ‌ನೀಡಿ, ಪ್ರಕರಣದ ಬಗ್ಗೆ ವ್ಯಾಪಕ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ಸ್ಪೀಕರ್ ಉದ್ದೇಶಪೂರ್ವಕವಾಗಿ ನಮ್ಮನ್ನು ಅನರ್ಹಗೊಳಿಸಿದ್ದಾರೆ. ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಗಲಿದೆ. ಸ್ಪೀಕರ್ ಕಾಂಗ್ರೆಸ್ ಪಕ್ಷದ ಪರವಾಗಿ‌ ತೀರ್ಪು ಕೊಟ್ಟಿದ್ದಾರೆ ಹೊರತು‌ ನ್ಯಾಯಯುತ ತೀರ್ಪು ನೀಡಿಲ್ಲ ಎಂದರು.ಆರ್.ಶಂಕರ್ ಮಾತನಾಡಿ, ನ್ಯಾಯಾಲಯ ಉಪಚುನಾವಣೆಗೆ ತಡೆ ನೀಡಿದೆ.

ನನ್ನ ಕ್ಷೇತ್ರಕ್ಕೆ ಚುನಾವಣೆಯೇ ನಡೆಯಬೇಕಿರಲಿಲ್ಲ. ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್ ಜತೆ‌ ವಿಲೀನ ಮಾಡಿರಲಿಲ್ಲ.‌ ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.ರಾಜರಾಜೇಶ್ವರಿ ನಗರ ಹಾಗೂ ಮಸ್ಕಿ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ 15 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಆಯೋಗ ಉಪಚುನಾವಣೆ ಘೋಷಿಸಿತ್ತು‌

error: Content is protected !! Not allowed copy content from janadhvani.com