janadhvani

Kannada Online News Paper

ಡಿಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

ನವದೆಹಲಿ,ಸೆ.18:ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆಯನ್ನು ರೋಸ್ ಅವೆನ್ಯೂ ಕೋರ್ಟ್ ಗುರುವಾರಕ್ಕೆ ಮುಂದೂಡಿಕೆ.

ಇ.ಡಿ. ಪರ ವಕೀಲರಾದ ಕೆಎಂ ನಟರಾಜ್ ಅವರು ಗೈರು ಹಾಜರಾದ ಹಿನ್ನೆಲೆಯಲ್ಲಿ ವಿಚಾರಣೆ ನಾಳೆಗೆ ಮುಂದೂಡುವಂತೆ ಇಡಿ ಮನವಿ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಜಡ್ಜ್ ಅಜಯ್ ಕುಮಾರ್ ಕುಹರ್ ಅವರು ವಿಚಾರಣೆ ನಾಳೆಗೆ ಮುಂದೂಡಿದರು.

ರಕ್ತದೊತ್ತಡದಿಂದ ಬಳಲುತ್ತಿರುವ ಡಿಕೆ ಶಿವಕುಮಾರ್ ಇಂದು ರೋಸ್ ಅವೆನ್ಯೂ ಕೋರ್ಟ್ ಗೆ ಹಾಜರಾಗಿರಲಿಲ್ಲವಾಗಿತ್ತು. ಡಿಕೆಶಿ ಪರ ವಕೀಲರಾದ ಅಭಿಷೇಕ ಮನು ಸಿಂಘ್ವಿ ವಾದ ಮಂಡಿಸಿದ್ದರು.

ಡಿಕೆಶಿ ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಡಿಕೆ ಶಿವಕುಮಾರ್ ಚುನಾವಣಾ ಆಯೋಗಕ್ಕೆ ನೀಡಿದ ಅಫಿಡವಿತ್ ನಲ್ಲಿ ಸಲ್ಲಿಸಿರುವುದನ್ನು ಮಾತ್ರ ಇ.ಡಿ.ವೈಭವೀಕರಣ ಮಾಡುತ್ತಿದೆ. ತಪ್ಪು ಅಫಿಡವಿತ್ ನೀಡಿದ್ದರೆ ಅನರ್ಹರಾಗುತ್ತಾರೆ. ಘೋಷಣೆಯಾದ ಆಸ್ತಿ ಅಕ್ರಮ ಹೇಗಾಗುತ್ತೆ ಎಂದು ಡಿಕೆಶಿ ಪರ ವಕೀಲರಾದ ಸಿಂಘ್ವಿ ವಾದ ಮಂಡಿಸಿದ್ದರು.

ಶರ್ಮಾ ಟ್ರಾನ್ಸ್ ಪೋರ್ಟ್ 50ವರ್ಷ ಹಳೆಯದ್ದು, ಡಿಕೆಶಿ ಒಕ್ಕಲಿಗ ಸಮುದಾಯಕ್ಕೆ ಸೇರಿದವರು, ಒಕ್ಕಲಿಗರು ಸಾಕಷ್ಟು ಜಮೀನು ಹೊಂದಿರುತ್ತಾರೆ. ಈ ಸಮುದಾಯ ಕೃಷಿಯನ್ನು ನಂಬಿ ಬದುಕುತ್ತದೆ. ಡಿಕೆಶಿಗೆ ವಂಶಪಾರಂಪರ್ಯವಾಗಿ ಆಸ್ತಿ ಬಂದಿದೆ. ಕೃಷಿ ಜಮೀನು ನಗರೀಕರಣದ ಬಳಿಕ ಮೌಲ್ಯ ಗಣನೀಯವಾಗಿ ಏರಿಕೆಯಾಗುತ್ತದೆ. ಜಮೀನಿನ ಮೌಲ್ಯ ಏರಿದ್ದನ್ನೇ ಅಕ್ರಮ ಎನ್ನಲಾಗುತ್ತಿದೆ. ಡಿಕೆಶಿಯನ್ನು ನ್ಯಾಯಾಂಗ ಬಂಧನದಲ್ಲಿಟ್ಟುಕೊಳ್ಳುವುದರಲ್ಲಿ ಅರ್ಥವಿದೆಯೇ?ಎಂದು ಸಿಂಘ್ವಿ ವಾದಿಸಿದ್ದರು.

800 ಕೋಟಿ ರೂ.ಮೌಲ್ಯದ ಆಸ್ತಿ ಸಿಕ್ಕಿದೆ ತನಿಖೆಯಾಗಬೇಕು ಅಂತ ಹೇಳುತ್ತಾರೆ. 800 ಕೋಟಿ ರೂಪಾಯಿ ಆಸ್ತಿ ಘೋಷಣೆಯಾಗಿದೆ. ಅಕ್ರಮ ಹಣ ವರ್ಗಾವಣೆ ಎಂದರೇನು? ಎಂದು ಪ್ರಶ್ನಿಸಿದರು.

ಏತನ್ಮಧ್ಯೆ ಇ.ಡಿ ಪರ ವಕೀಲರು ಗೈರುಹಾಜರಾಗಿದ್ದು, ವಿಚಾರಣೆ ಮುಂದೂಡುವಂತೆ ಇ.ಡಿ ಪರ ಕಿರಿಯ ವಕೀಲರು ಮನವಿ ಮಾಡಿಕೊಂಡಿದ್ದರು.

error: Content is protected !! Not allowed copy content from janadhvani.com