janadhvani

Kannada Online News Paper

ಕಾಶ್ಮೀರ ಬಿಕ್ಕಟ್ಟು: ಭಾರತ-ಪಾಕ್ ಉದ್ವಿಗ್ನತೆ ತಣಿಸಲು ಸೌದಿ, ಯುಎಇ ಯತ್ನ

ಅಬುಧಾಬಿ: ಕಾಶ್ಮೀರ ವಿಷಯದ ಬಗ್ಗೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಸೌದಿ ಅರೇಬಿಯಾ ಮತ್ತು ಯುಎಇ ರಾಜತಾಂತ್ರಿಕ ಮಾತುಕತೆಗೆ ಮುಂದಾಗಿವೆ. ಇಸ್ಲಾಮಿಕ್ ದೇಶಗಳ ಒಕ್ಕೂಟವಾದ ಒಐಸಿಯ ಪ್ರಮುಖ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಈ ನಡೆ ಎನ್ನಲಾಗಿದೆ. ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆಯ ಮೂಲಕ ಪರಿಹಾರವನ್ನು ಕಾಣಬೇಕು ಎಂಬುದು ಒಐಸಿಯ ಅಭಿಪ್ರಾಯವಾಗಿದೆ.

ಸೌದಿ ವಿದೇಶಾಂಗ ಸಚಿವ ಆದಿಲ್ ಅಲ್ ಝುಬೈರ್ ಮತ್ತು ಯುಎಇ ವಿದೇಶಾಂಗ, ಅಂತರರಾಷ್ಟ್ರೀಯ ಸಹಕಾರ ಸಚಿವ ಶೈಖ್ ಅಬ್ದುಲ್ಲಾ ಬಿನ್ ಝಾಯಿದ್ ಆಲ್ ನಹ್ಯಾನ್ ಮುಂತಾದವರು ಇತ್ತೀಚೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿ ಪರಿಸ್ಥಿತಿ ಕುರಿತು ಚರ್ಚಿಸಿದರು. ಪಾಕಿಸ್ತಾನದ ಮುಖಂಡರೊಂದಿಗೆ ಈ ಪ್ರದೇಶದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದೇವೆ ಎಂದು ಸೌದಿ ಮತ್ತು ಯುಎಇ ನಾಯಕತ್ವ ತಿಳಿಸಿದೆ.

ಭಾರತ ಮತ್ತು ಪಾಕಿಸ್ತಾನವು ಪರಮಾಣು ಶಕ್ತಿಗಳಾಗಿದ್ದು, ಅವರ ನಡುವಿನ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಬೇಕು ಎಂಬ ಅಭಿಪ್ರಾಯವನ್ನು ಸೌದಿ ಮತ್ತು ಯುಎಇ ವ್ಯಕ್ತಪಡಿಸಿವೆ. ಗಡಿ ಉದ್ವಿಗ್ನತೆ ಅಪಾಯಕಾರಿ ಸನ್ನಿವೇಶವು ಉಲ್ಬಣ ಗೊಳ್ಳಬಾರದೆಂದು ಈ ದೇಶಗಳು ಬಯಸುತ್ತವೆ. ಭಾರತದೊಂದಿಗೂ ಅನೌಪಚಾರಿಕ ಚರ್ಚೆಗಳು ಮುಂದುವರೆದಿದೆ.

ಕಾಶ್ಮೀರ ದೇಶೀಯ ಸಮಸ್ಯೆಯೆಂದು ಭಾರತ ಘೋಷಿಸಿದ್ದು ಹೊರಗಿನವರ ಹಸ್ತಕ್ಷೇಪ ಅಗತ್ಯವಿಲ್ಲ ಎಂದಿದೆ. ಪಾಕಿಸ್ತಾನದೊಂದಿಗೆ ಸಮಸ್ಯೆಗಳನ್ನು ಚರ್ಚಿಸಲು ಭಾರತ ಈಗಾಗಲೇ ಒಪ್ಪಿಕೊಂಡಿತ್ತು.

ಕಾಶ್ಮೀರವನ್ನು ವಿಭಜಿಸುವ ಮತ್ತು ಅದರ ಸವಲತ್ತು ಹಿಂತೆಗೆದುಕೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರದ ಕುರಿತು ಪಾಕಿಸ್ತಾನವು ಒಐಸಿ ನಾಯಕತ್ವವನ್ನು ಸಂಪರ್ಕಿಸಿತ್ತು, ಆದರೆ ಅದು ವಿಫಲವಾಯಿತು. ಒಐಸಿಯಲ್ಲಿರುವ ಹೆಚ್ಚಿನ ದೇಶಗಳು ಭಾರತದೊಂದಿಗಿನ ಮಾತುಕತೆಗಳ ಮೂಲಕ ಸಮಸ್ಯೆಯನ್ನು ಬಗೆಹರಿಸಬೇಕು ಎಂಬ ಅಭಿಪ್ರಾಯವನ್ನು ಹೊಂದಿವೆ. ಭಾರತ ಇತ್ತೀಚೆಗೆ ಕೊಲ್ಲಿ ರಾಷ್ಟ್ರಗಳೊಂದಿಗೆ ಉತ್ತಮ ರಾಜತಾಂತ್ರಿಕ ಸಂಬಂಧವನ್ನು ಸ್ಥಾಪಿಸಿದೆ. ಆದ್ದರಿಂದ, ಕಾಶ್ಮೀರ ವಿಷಯದಲ್ಲಿ ಈ ದೇಶಗಳನ್ನು ತಮ್ಮ ನಿಲುವುಗಳಿಗೆ ಅನುಕೂಲಕರವಾಗಿ ತರಲು ಸಾಧ್ಯವಾಗಲಿದೆ ಎಂದು ಕೇಂದ್ರ ನಾಯಕತ್ವ ನಿರೀಕ್ಷಿಸುತ್ತಿದೆ.

error: Content is protected !! Not allowed copy content from janadhvani.com