janadhvani

Kannada Online News Paper

ಯುಎಇ ಯಲ್ಲಿ ಹೆಚ್ಚುತ್ತಿದೆ ‘Money Chain’ ಶೈಲಿಯ ವ್ಯವಹಾರ ವಂಚನೆ- ಎಚ್ಚರಿಕೆ

ದುಬೈ: ಹಣ ಸರಪಳಿ(money chain) ಶೈಲಿಯ ವ್ಯವಹಾರ ವಂಚನೆ ಹೆಚ್ಚುತ್ತಿದೆ. ವರದಿಗಳ ಪ್ರಕಾರ, ದುಬೈ ಮತ್ತು ಶಾರ್ಜಾದಲ್ಲಿ ಹಲವಾರು ಜನರು ಈ ಹಗರಣದ ಹಿಂದೆ ಕಾರ್ಯಾಚರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅವರ ಪೈಕಿ ಹೆಚ್ಚಿನವರು ಭಾರತೀಯರಾಗಿದ್ದು, ನೂರಾರು ಮಂದಿ ಈಗಾಗಲೇ ಈ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ.

ಕಂಪನಿಯ ಪ್ರತಿನಿಧಿಗಳು ತಮ್ಮ ಗ್ರಾಹಕರಿಗೆ ಮೂರು ತಿಂಗಳಿಂದ ಎರಡು ವರ್ಷಗಳ ಒಳಗಾಗಿ ಕೋಟ್ಯಾಧಿಪತಿಗಳಾಗಬಹುದು ಮತ್ತು ಕನಸಿನ ಜೀವನವನ್ನು ನಡೆಸಬಹುದು ಎಂದು ಭರವಸೆ ನೀಡುತ್ತಾರೆ ಎನ್ನಲಾಗಿದೆ.

ಜೀವನದಲ್ಲಿ ಕಷ್ಟ ಅನುಭವಿಸುವವರು ತಮ್ಮಲ್ಲಿರುವ ಮೊತ್ತ ಮತ್ತು ಬಡ್ಡಿಗೆ ಪಡೆದ ಹಣವನ್ನು ನೀಡಿ ಈ ಜಾಲಕ್ಕೆ ಹಣ ಸಂದಾಯ ಮಾಡುತ್ತಾರೆ. ಸಿನೆಮಾ ಧಾರಾವಾಹಿಗಳಲ್ಲಿ ಮತ್ತು ಇತರ ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡುವ ನಟ-ನಟಿಯರನ್ನು ಮುಂದಿರಿಸಿ, ಈ ಗ್ಯಾಂಗ್ ಜನರನ್ನು ವಂಚಿಸುತ್ತಿದೆ. ಈ ವಂಚನಾ ಜಾಲಕ್ಕೆ ಸಿಲುಕಿ ಅನೇಕರು ತಮ್ಮ ಉದ್ಯೋಗ ಮತ್ತು ಉಳಿತಾಯವನ್ನು ಕಳೆದುಕೊಂಡಿದ್ದಾರೆ.

ಈ ಕಂಪನಿಗೆ ಹೊಸತಾಗಿ ಸೇರುವವರು ಕನಿಷ್ಠ 8,000 ರೂ. ಪಾವತಿಸಬೇಕು. ತಕ್ಷಣವೇ, ಕಂಪನಿಯ ಪ್ರತಿನಿಧಿಗಳು ಗ್ರಾಹಕರಿಗೆ ಸರಾಸರಿ ವ್ಯಕ್ತಿಯ ಜೀವನಕ್ಕೆ ಯಾವುದೇ ಸಂಬಂಧವಿಲ್ಲದ ಕೆಲವು ವಸ್ತುಗಳು ಮತ್ತು ಭರವಸೆಗಳನ್ನು ನೀಡುತ್ತಾರೆ. ಆ ಮೂಲಕ ಆ ವ್ಯಕ್ತಿ ಜಾಲದಿಂದ ಹೊರಗೆ ಬರಲಾರದ ರೀತಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಕೆಲವು ಸಮಯದ ನಂತರ, ಗ್ರಾಹಕರು ಮೋಸವನ್ನ ಅರಿತುಕೊಳ್ಳುತ್ತಾರೆ. ಅವರು ನಂತರ ಪಾವತಿಸಿದ ಹಣವನ್ನು ಕೇಳಿದರೆ ಅದನ್ನು ಪಡೆಯುವುದು ಸಾಧ್ಯವಿಲ್ಲ.

ಈ ಮೂಲಕ ಸಿಲುಕಿರುವ ವ್ಯಕ್ತಿಯು ಹಣವನ್ನು ಕಳೆದು ಕೊಳ್ಳಬೇಕು. ಅಥವಾ ಕಂಪೆನಿ ಅವರಿಗೆ ನೀಡಿದ ವಸ್ತುಗಳ ಮೂಲಕ ನಿಕಟ ಸ್ನೇಹಿತರು ಅಥವಾ ಸಹೋದ್ಯೋಗಿಗಳನ್ನು ಕಂಪನಿಗೆ ಸೇರಿಸಿ ಅವರು ಕಳಕೊಂಡ ಹಣವನ್ನು ಪರು ಪಡೆಯಬೇಕು. ಯುಎಇಯಲ್ಲಿ ಭಾರತ ಮೂಲದ ಅನೇಕ ಹಣ ಸರಪಳಿ ವಂಚನೆ ಜಾಲಗಳು ಕೋಟ್ಯಂತರ ರೂಪಾಯಿಗಳನ್ನು ವಂಚಿಸುತ್ತಿವೆ.
ಸಾಮಾನ್ಯವಾಗಿ ಒಂದೇ ಗುಂಪು ಬೇರೆ ಬೇರೆ ಹೆಸರಿನಲ್ಲಿ ಮತ್ತೆ ಕಾಣಿಸಿಕೊಳ್ಳುತ್ತವೆ. ತೆರೆಮರೆಯಲ್ಲಿ ಕೆಲಸ ಮಾಡುವ ಅನೇಕರು ಪ್ರವಾಸಿ ವೀಸಾದಲ್ಲಿ ದುಬೈಗೆ ಬಂದವರಾಗಿರುತ್ತಾರೆ

error: Content is protected !! Not allowed copy content from janadhvani.com