janadhvani

Kannada Online News Paper

ನಾನು ಭಯೋತ್ಪಾದಕನೇ? ಸರ್ಕಾರವೇ ಉತ್ತರ ನೀಡಬೇಕು- ಅಸದುದ್ದೀನ್ ಉವೈಸಿ

ನವದೆಹಲಿ, ಜುಲೈ 15:- ಹೈದ್ರಾಬಾದ್ ನಗರ ಭಯೋತ್ಪಾಕರ ಆವಾಸ ಸ್ಥಾನ ಎಂಬ ಕೇಂದ್ರ ಗೃಹ ಖಾತೆ ರಾಜ್ಯಸಚಿವ ಜಿ. ಕಿಶನ್ ರೆಡ್ಡಿ ಅವರ ಹೇಳಿಕೆಗೆ ಎ ಐ ಎಂ ಐ ಎಂ ಪಕ್ಷದ ಸದಸ್ಯ ಅಸದುದ್ದೀನ್ ಉವೈಸಿ ಸೋಮವಾರ ಲೋಕಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ರಾಷ್ಟ್ರೀಯ ತನಿಖಾ ಸಂಸ್ಥೆ ತಿದ್ದುಪಡಿ ವಿಧೇಯಕ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಉವೈಸಿ, ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರ ಗುಂಪು ತಮ್ಮನ್ನು ಹಿಂದೂ ರಾಷ್ಟ್ರದ ಗುಲಾಮ ಎಂದು ಬಣ್ಣಿಸಲಾಗಿರುವ ವಿಡಿಯೋ ದೇಶಾದ್ಯಂತ ವೈರಲ್ ಆಗಿರುವುದನ್ನು ಉಲ್ಲೇಖಿಸಿದ ಅವರು, ಈ ಸನ್ನಿವೇಶದಲ್ಲಿ ನನ್ನ ಪ್ರಶ್ನೆ, ನಾನು ಏನು ? ನಾನು ಈ ದೇಶಕ್ಕೆ ಸೇರಿದವನಾ?, ಅಥವಾ ಭಯೋತ್ಪಾದಕರೊಂದಿಗೆ ಸೇರಿದವನಾ..? ಸರ್ಕಾರವೇ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ಎನ್ ಐ ಎ ತಿದ್ದುಪಡಿ ವಿಧೇಯಕವನ್ನು ತೀವ್ರವಾಗಿ ವಿರೋಧಿಸಿದ ಅವರು, ತನಿಖಾ ಸಂಸ್ಥೆ ನಿಭಾಯಿಸಿದ ಹಳೆಯ ಪ್ರಕರಣಗಳಲ್ಲಿ ಕೆಲವು ಆರೋಪಿಗಳು ನ್ಯಾಯಾಲಯದಿಂದ ಖುಲಾಸೆಗೊಂಡಿದ್ದಾರೆ.
ಹಾಗಾಗಿ ಖುಲಾಸೆಗೊಂಡವರಲ್ಲಿ ಸರ್ಕಾರ ಲಿಖಿತವಾಗಿ ಕ್ಷಮೆಯಾಚಿಸಲಿದೆಯೇ ? ಎಂದು ಸರ್ಕಾರವನ್ನು ಉವೈಸಿ ಪ್ರಶ್ನಿಸಿದರು.

ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕ್ರಿಯಾ ಲೋಪ ಎತ್ತಿ, ಉವೈಸಿ ಪ್ರಸ್ತಾಪಿಸಿರುವ ಪ್ರಕರಣಗಳು ನ್ಯಾಯಾಲಯದ ಮುಂದೆ ಈಗಲೂ ಬಾಕಿ ಉಳಿದುಕೊಂಡಿವೆ. ಈ ವಿಷಯಗಳನ್ನು ಸದನದಲ್ಲಿ ಪ್ರಸ್ತಾಪಿಸಲು ಉವೈಸಿ ಅವರಿಗೆ ಯಾವುದೇ ಹಕ್ಕು ಇಲ್ಲ ಎಂದರು.ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್ ಓಂ ಬಿರ್ಲಾ, ದಾಖಲೆಗಳನ್ನು ಪರಿಶೀಲಿಸಿ ನಿಯಮಾವಳಿ ಅನುಸಾರ ರೂಲಿಂಗ್ ನೀಡುವುದಾಗಿ ನುಡಿದರು.

error: Content is protected !! Not allowed copy content from janadhvani.com