janadhvani

Kannada Online News Paper

ಪುತ್ತೂರು: ಆರ್‌ಎಸ್‌ಎಸ್‌ನ ಬೈಠಕ್ ಸ್ಥಳ ಅತ್ಯಾಚಾರಿಗಳ ಕೇಂದ್ರ- ಕೆ.ಹರೀಶ್ ಕುಮಾರ್

ಪುತ್ತೂರು: ‘ಹೆಣ್ಣನ್ನು ದೇವತೆಯಂತೆ ಪೂಜಿಸಬೇಕೆಂದು ಹೇಳಿಕೊಡಲಾಗುತ್ತದೆ ಎಂದು ಎದೆ ತಟ್ಟಿಕೊಳ್ಳುವವರ ವಿಚಾರ ಕೇಂದ್ರವಾದ ಆರ್‌ಎಸ್‌ಎಸ್‌ನ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಬೈಠಕ್ ನಡೆಯುವ ಸ್ಥಳವೇ ಈಗ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ಸ್ಥಳವಾಗಿ ಮೂಡಿ ಬಂದಿದೆ’ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅವರು ಟೀಕಿಸಿದರು.

ಪುತ್ತೂರಿನಲ್ಲಿ ನಡೆದ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಮತ್ತು ದಲಿತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಶನಿವಾರ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಖಂಡನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಸಂಜೀವ ಮಠಂದೂರು ಅವರು ಪುತ್ತೂರಿನ ಶಾಸಕರಾದ ಮೇಲೆ ಇಲ್ಲಿ ಅಶಕ್ತರಿಗೆ ರಕ್ಷಣೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆಯೇ’ ಎಂದು ಅವರು ಪ್ರಶ್ನಿಸಿದರು.

ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಮಾತನಾಡಿ, ‘ಆರೋಪಿಗಳು ಎಬಿವಿಪಿಯವರಲ್ಲ ಎಂದು ಹೇಳಿಕೆ ಕೊಟ್ಟ ಮಾತ್ರಕ್ಕೆ ಜನ ನಂಬಲಾರರು. ಬೇರೆ ಕೋಮಿನವರಿಗೆ ಹಲ್ಲೆ , ಬಸ್‌ಗೆ ಕಲ್ಲು ಹೊಡೆದವರನ್ನು ನಮ್ಮವರು ಎನ್ನುತ್ತೀರಿ. ಈಗ ಮಾತ್ರ ನಿಮ್ಮವರಲ್ಲವೇ’ ಎಂದು ಛೇಡಿಸಿದರು. ‘ಶೋಭಾ ಕರಂದ್ಲಾಜೆಯವರೇ, ನಿಮ್ಮ ಸರ್ಕಾರ ರಾಜ್ಯದಲ್ಲಿದ್ದಾಗ ಸಚಿವರು, ಶಾಸಕರು ಮಾಡಿದ ಚುಂಬನ, ಆಲಿಂಗನ, ಶಯನ ಮುಂತಾದ ಕರ್ಮಕಾಂಡವೇ ಇಂದು ಯುವಜನರಿಗೆ ಕೆಟ್ಟ ಪ್ರೇರಣೆಯಾಗಿ ನಿಮ್ಮದೇ ಜಿಲ್ಲೆಯಲ್ಲಿ ಪ್ರತಿಧ್ವನಿಸುತ್ತಿದೆ’ ಎಂದು ಸವಾಲೆಸೆದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಸ್ವಾಗತಿಸಿದರು. ಪಕ್ಷದ ಮುಖಂಡ ಎಂ.ಬಿ. ವಿಶ್ವನಾಥ ರೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪ್ಪಿನಂಗಡಿ ವಿಟ್ಲ ಬ್ಲಾಕ್ ಅಧ್ಯಕ್ಷ ಮುರಳಿಧರ ರೈ ಮಠಂತಬೆಟ್ಟು, ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ಉಮಾನಾಥ ಶೆಟ್ಟಿ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸಿಫ್, ಜಿಲ್ಲಾ ಎನ್ಎಸ್ಯುಐ ಅಧ್ಯಕ್ಷ ಅಬ್ದುಲ್ಲಾ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಮುಖಂಡರಾದ ಎ.ಕೆ. ಜಯರಾಮ ರೈ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದಶರ್ಿಗಳಾದ ಅಮಳ ರಾಮಚಂದ್ರ, ಕೃಷ್ಣ ಪ್ರಸಾದ್ ಆಳ್ವ ಇದ್ದರು. ಬಳಿಕ ಹರೀಶ್ ಕುಮಾರ್ ನೇತೃತ್ವದಲ್ಲಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

error: Content is protected !! Not allowed copy content from janadhvani.com