janadhvani

Kannada Online News Paper

ಮೋದಿಯ ಹೆಸರಿಟ್ಟಿದ್ದ ಮುಸ್ಲಿಮ್ ಮಗುವಿಗೆ ಮರುನಾಮಕರಣ

ಗೊಂಡಾ: ತಮ್ಮ ಮಗುವಿಗೆ ನರೇಂದ್ರ ದಾಮೋದರ್‌ದಾಸ್ ಮೋದಿ ಎಂದು ನಾಮಕರಣ ಮಾಡಿದ್ದ ಮುಸ್ಲಿಂ ಕುಟುಂಬವೀಗ ಮಗುವಿಗೆ ಹೊಸ ಹೆಸರಿನ ಹುಡುಕಾಟದಲ್ಲಿದೆ.

ಮೇ. 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿದ್ದರು. ಉತ್ತರ ಪ್ರದೇಶದ ಗೊಂಡಾದಲ್ಲಿ ಇದೇ ದಿನ ಜನಿಸಿದ ಮಗುವೊಂದಕ್ಕೆ ನರೇಂದ್ರ ಮೋದಿ ಎಂದು ನಾಮಕರಣ ಮಾಡಲಾಗಿತ್ತು. ಮುಸ್ಲಿಂ ಕುಟುಂಬವೊಂದು ಮಗುವಿಗೆ ಪ್ರಧಾನಿಯ ಹೆಸರಿಟ್ಟದ್ದು ದೊಡ್ಡ ಸುದ್ದಿಯಾಗಿತ್ತು.

ಈ ಸುದ್ದಿಯ ಬೆನ್ನಲ್ಲೇ ಮಗು ಮೇ. 23ರಂದು ಹುಟ್ಟಿದ್ದು ಅಲ್ಲ. ಪ್ರಚಾರಕ್ಕಾಗಿ ಮಗುವಿನ ಜನ್ಮ ದಿನಾಂಕ ಬದಲಿಸಲಾಗಿದೆ. ಮಗು ಹುಟ್ಟಿದ್ದು ಮೇ.12ರಂದು ಎಂಬ ವಾದ ಕೇಳಿ ಬಂದಿತ್ತು. ಆಸ್ಪತ್ರೆಯ ದಾಖಲೆಗಳ ಪ್ರಕಾರ ಮಗುವಿನ ಜನನ ಮೇ.12ರಂದು ಆಗಿತ್ತು. ಹೆಸರು ಮತ್ತು ಜನ್ಮ ದಿನಾಂಕದ ಬಗ್ಗೆ ಚರ್ಚೆಯಾಗುತ್ತಿದ್ದಂತೆ ಅಮ್ಮ ಮೆಹನಾಜ್ ಬೇಗಂ ಮಗುವಿನ ಹೆಸರು ಮೊಹಮ್ಮದ್ ಅಲ್ತಾಫ್ ಆಲಂ ಮೋದಿ ಬದಲಿಸಿದ್ದರು.

ಮೆಹನಾಜ್ ಅವರು ಪಂಚಾಯತ್‌ನ ಎಡಿಒ ಘನಶ್ಯಾಮ್ ಪಾಂಡೆ ಅವರಿಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಮಗು ಮೇ.12ರಂದು ಜನಿಸಿದ್ದು ಎಂದಿದೆ. ಅದೇ ವೇಳೆ ಮಗುವಿನ ಹೆಸರು ನರೇಂದ್ರ ದಾಮೋದರ್ ದಾಸ್ ಮೋದಿ ಎಂದು ಅಫಿಡವಿಟ್‌ನಲ್ಲಿದೆ. ಇದನ್ನು ನಾನು ಜಿಲ್ಲಾ ಮೆಜಿಸ್ಟ್ರೇಟ್‌ಗೆ ಕಳುಹಿಸಿದ್ದೇನೆ ಎಂದಿದ್ದಾರೆ ಘನಶ್ಯಾಮ್.

ಈ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್ ಜತೆ ಮಾತನಾಡಿದ ಮೆಹನಾಜ್, ಇಷ್ಟೊಂದು ಸಮಸ್ಯೆ ಆಗುತ್ತದೆ ಎಂದು ನಮಗೆ ತಿಳಿದಿರಲಿಲ್ಲ, ನಮ್ಮ ಅತ್ತೆಯ ಮಗನ ಮಾತಿಗೆ ಮರುಳಾಗಿ ಇದೆಲ್ಲಾ ಆಗಿಹೋಯಿತು ಎಂದಿದ್ದಾರೆ.

ಈಕೆಯ ಅತ್ತೆ ಮಗ ಮುಷ್ತಾಕ್ ಅಹಮದ್ ಗೊಂಡಾದಲ್ಲಿರುವ ಹಿಂದಿ ಪತ್ರಿಕೆ ‘ಹಿಂದೂಸ್ತಾನ್’ ನಲ್ಲಿ ಪತ್ರಕರ್ತನಾಗಿದ್ದಾನೆ.ಮಗುವಿಗೆ ಮೋದಿ ಎಂಬ ಹೆಸರಿಡಿ ಎಂದು ಸೂಚಿಸಿದ್ದು ಅವನೇ. ಅಷ್ಟೇ ಅಲ್ಲದೆ ಮಗು ಮೇ. 23ರಂದು ಜನಿಸಿದ್ದು ಎಂದು ಸುದ್ದಿ ಹಬ್ಬಿಸಿದ. ಮೇ 25ರಂದು ಹಿಂದೂಸ್ತಾನ್ ಪತ್ರಿಕೆಯ ಲಖನೌ ಸಂಚಿಕೆಯ ಪುಟ 12ರಲ್ಲಿ ಮೆಹನಾಜ್ ಮತ್ತು ಮಗು ಮೋದಿ ಬಗ್ಗೆ ವರದಿ ಪ್ರಕಟವಾಗಿತ್ತು. ಮುಷ್ತಾಕ್ ಅಹಮದ್ ಮತ್ತು ಬ್ಯೂರೊ ಮುಖ್ಯಸ್ಥ ಖಮರ್ ಅಬ್ಬಾಸ್ ಅವರ ಬೈಲೈನ್ (ಸುದ್ದಿ ಬರೆದವರ ಹೆಸರು) ಇತ್ತು

ಮಗು 23ರಂದು ಜನಿಸಿರುವ ಕಾರಣ ಮಗುವಿಗೆ ನರೇಂದ್ರ ಮೋದಿ ಎಂದು ಹೆಸರಿಡಲು ನಿರ್ಧರಿಸಿದೆವು ಎಂದು ಮಾಧ್ಯಮದವರ ಮುಂದೆ ಹೇಳುವಂತೆ ಮುಷ್ತಾಕ್ ಹೇಳಿಕೊಟ್ಟಿದ್ದ. ನಾನು ಅನಕ್ಷರಸ್ಥೆ ಮತ್ತು ನನಗೆ ನರೇಂದ್ರ ಮೋದಿ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ ಅಂತಿದ್ದಾರೆ ಮೆಹನಾಜ್.

ಆದರೆ ತಾನು ಹೇಳಿದ ಕಾರಣ ಮಗುವಿಗೆ ಮೋದಿ ಎಂದು ಹೆಸರಿಟ್ಟಿದ್ದು ಎಂಬ ಮೆಹನಾಜ್ ಆರೋಪನ್ನು ಮುಷ್ತಾಕ್ ನಿರಾಕರಿಸಿದ್ದಾನೆ. ಹೆಸರು ನಾನು ಸೂಚಿಸಿದ್ದು ಅಲ್ಲ. ಮಗುವಿಗೆ ನರೇಂದ್ರ ಮೋದಿ ಎಂದು ಹೆಸರಿಡುವುದಾಗಿ ಅವರೇ ಹೇಳಿದ್ದು. ಹೀಗಾಗಿ ನಾನು ಪತ್ರಿಕೆಯಲ್ಲಿ ಸುದ್ದಿ ಬರೆದ. ಆದರೆ ಮಗುವಿನ ಹುಟ್ಟಿದ ದಿನಾಂಕದ ಬಗ್ಗೆ ಆಕೆ ತಪ್ಪು ಮಾಹಿತಿ ನೀಡಿದ್ದು ನನಗೆ ಗೊತ್ತಿರಲಿಲ್ಲ ಎಂದಿದ್ದಾರೆ.

error: Content is protected !! Not allowed copy content from janadhvani.com