janadhvani

Kannada Online News Paper

ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಮೊದಲ ಸಂಸತ್ ಕಲಾಪ ನಾಳೆಯಿಂದ

ನವದೆಹಲಿ(ಜೂನ್.16): ಇತ್ತೀಚೆಗಿನ ಲೋಕಸಭಾ ಚುನಾವಣೆಯಲ್ಲಿ ಜಯ ಸಾಧಿಸಿ,ಎರಡನೇ ಬಾರಿಗೆ ಅಧಿಕಾರಕ್ಕೇರಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಮೊದಲ ಸಂಸತ್ ಕಲಾಪವು ಜೂ.17ರಿಂದ ಜು.26ರವರೆಗೆ ನಡೆಯಲಿದೆ.

ಅಧಿವೇಶನದಲ್ಲಿ ಪ್ರಮುಖವಾಗಿ ಬಜೆಟ್ ಮತ್ತು ತ್ರಿವಳಿ ತಲಾಖ್ ಕುರಿತಾದ ಹೊಸ ಬಿಲ್ ಮಂಡನೆಗೆ ಆದ್ಯತೆ ನೀಡಲಾಗುತ್ತಿದೆ. ಈ ಬಾರಿಯೂ ಕಾಂಗ್ರೆಸ್ ಪಕ್ಷವೇ ಸಂಸತ್ನಲ್ಲಿ ಪ್ರಮುಖ ವಿರೋಧ ಪಕ್ಷವಾಗಿದೆ.

ಸಂಸತ್ತಿನ ಮುಂಗಡಪತ್ರ ಅಧಿವೇಶನದ ಆರಂಭದ ಮುನ್ನಾದಿನವಾದ ರವಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಸರ್ವಪಕ್ಷಗಳ ಸಭೆಯನ್ನು ನಡೆಸಿದರು. ಕೃಷಿ ಸಂಕಷ್ಟ,ನಿರುದ್ಯೋಗ ಮತ್ತು ಬರ ಸೇರಿದಂತೆ ಹಲವಾರು ವಿಷಯಗಳ ಮೇಲೆ ಚರ್ಚೆಗೆ ಪ್ರತಿಪಕ್ಷವು ಆಗ್ರಹಿಸಿತು. ನೂತನವಾಗಿ ರಚನೆಯಾಗಿರುವ 17ನೇ ಲೋಕಸಭೆಯ ಮೊದಲ ಅಧಿವೇಶನ ಜೂ.17ರಿಂದ ಜು.26ರವರೆಗೆ ನಡೆಯಲಿದೆ.

ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಝಾದ್,ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಮತ್ತು ಟಿಎಂಸಿ ನಾಯಕ ಡೆರೆಕ್ ಒ’ಬ್ರಿಯಾನ್ ಸೇರಿದಂತೆ ಎಲ್ಲ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಮುಖ ಮಸೂದೆಗಳನ್ನು ಬೆಂಬಲಿಸುವಂತೆ ಪ್ರಧಾನಿ ಕೋರಿಕೆಗೆ ಸ್ಪಂದಿಸಿದ ಆಝಾದ್,ಜನರ ಹಿತಾಸಕ್ತಿಯಲ್ಲಿರುವ ಮಸೂದೆಗಳಿಗೆ ವಿರೋಧವಿರುವುದಿಲ್ಲ ಎಂದು ಭರವಸೆ ನೀಡಿದರು.

ರಾಷ್ಟ್ರಪತಿ ಆಡಳಿತ ಜಾರಿಯಲ್ಲಿರುವ ಜಮ್ಮು-ಕಾಶ್ಮೀರದಲ್ಲಿ ಶೀಘ್ರವೇ ಚುನಾವಣೆಗಳನ್ನು ನಡೆಸುವಂತೆ ಆಝಾದ್ ಸೂಚಿಸಿದರು. ಲೋಕಸಭಾ ಚುನಾವಣೆಗಳ ಜೊತೆಯಲ್ಲಿಯೇ ವಿಧಾನಸಭಾ ಚುನಾವಣೆಗಳನ್ನೇಕೆ ನಡೆಸಲಿಲ್ಲ ಎಂದು ಪ್ರಶ್ನಿಸಿದ ಅವರು,ಕೇಂದ್ರವು ರಾಜ್ಯಪಾಲರ ಆಡಳಿತದ ಮೂಲಕವೇ ರಾಜ್ಯವನ್ನು ನಡೆಸಲು ಬಯಸಿರುವಂತಿದೆ ಎಂದು ಆರೋಪಿಸಿದರು.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿಯನ್ನು ಕಲ್ಪಿಸುವ ಮಹಿಳಾ ಮೀಸಲಾತಿ ಮಸೂದೆಯನ್ನು ಸದನದಲ್ಲಿ ತಕ್ಷಣವೇ ಮಂಡಿಸುವಂತೆ ಒ’ಬ್ರಿಯೆನ್ ಆಗ್ರಹಿಸಿದರು.

ಸಭೆಯ ಬಳಿಕ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರು, ಪ್ರತಿಪಕ್ಷಗಳು 16ನೇ ಲೋಕಸಭೆಯ ಕೊನೆಯ ಎರಡು ವರ್ಷಗಳ ಕಲಾಪಗಳನ್ನು ವ್ಯರ್ಥಗೊಳಿಸಿದ ಹಿನ್ನೆಲೆಯಲ್ಲಿ ಸಂಸದರಿಗೆ ಜನರ ಆಕಾಂಕ್ಷೆಗಳನ್ನು ಈಡೇರಿಸಲು ಸಾಧ್ಯವೇ ಎಂಬ ಬಗ್ಗೆ ಆತ್ಮಪರೀಕ್ಷೆ ಮಾಡಿಕೊಳ್ಳುವಂತೆ ಮೋದಿ ಅವರು ಎಲ್ಲ ಪಕ್ಷಗಳ ನಾಯಕರನ್ನು ಒತ್ತಾಯಿಸಿದರು ಎಂದು ತಿಳಿಸಿದರು.

ಸಂಸತ್ತಿನ ಉಭಯ ಸದನಗಳ ಕಲಾಪಗಳು ಸುಗಮವಾಗಿ ನಡೆಯಲು ಎಲ್ಲ ಪಕ್ಷಗಳ,ವಿಶೇಷವಾಗಿ ಪ್ರತಿಪಕ್ಷಗಳ ಸಹಕಾರವನ್ನು ಸರಕಾರವು ಕೋರಿದೆ ಎಂದೂ ಜೋಶಿ ತಿಳಿಸಿದರು.

‘ಒಂದು ರಾಷ್ಟ್ರ,ಒಂದು ಚುನಾವಣೆ ’ಕುರಿತು ಚರ್ಚೆಗೆ ಜೂ.19ರಂದು ಎಲ್ಲ ಪಕ್ಷಾಧ್ಯಕ್ಷರ ಸಭೆ

‘ಒಂದು ರಾಷ್ಟ್ರ,ಒಂದು ಚುನಾವಣೆ ’ವಿಷಯವನ್ನು ಚರ್ಚಿಸಲು ಪ್ರಧಾನಿ ಮೋದಿಯವರು ಜೂ.19ರಂದು ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಪ್ರಾತಿನಿಧ್ಯ ಹೊಂದಿರುವ ಎಲ್ಲ ಪಕ್ಷಗಳ ಅಧ್ಯಕ್ಷರ ಸಭೆಯೊಂದನ್ನು ಕರೆದಿದ್ದಾರೆ ಎಂದು ಜೋಶಿ ತಿಳಿಸಿದರು.

ಮೋದಿಯವರು ಜೂ.20ರಂದು ಸಂಸದರ ಸಭೆಯೊಂದನ್ನೂ ಕರೆದಿದ್ದು,2022ರಲ್ಲಿ ಭಾರತದ 75ನೇ ಸ್ವಾತಂತ್ರ್ಯೋತ್ಸವ ಮತ್ತು ಈ ವರ್ಷ ಮಹಾತ್ಮಾ ಗಾಂಧಿಯವರ 150ನೇ ಜಯಂತಿಯ ಆಚರಣೆ ಇತ್ಯಾದಿಗಳ ಕುರಿತು ಈ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅವರು ಹೇಳಿದರು.

error: Content is protected !! Not allowed copy content from janadhvani.com