janadhvani

Kannada Online News Paper

ಅರ್ಜಿಯಲ್ಲಿ ಧರ್ಮ ನಮೂದಿಸಲಿರುವ ಕಾಲಂನಲ್ಲಿ “ಮಾನವೀಯತೆ” ಎಂಬ ಆಯ್ಕೆ

ಕೊಲ್ಕತ್ತ: ಸರ್ಕಾರಿ ಕೆಲಸಕ್ಕಾಗಿರುವ ಅರ್ಜಿ, ಬ್ಯಾಂಕ್ ಅಥವಾ ಕಾಲೇಜು ಪ್ರವೇಶ ಅರ್ಜಿಗಳಲ್ಲಿ ಧರ್ಮ (Religion) ಯಾವುದು? ಎಂಬ ಪ್ರಶ್ನೆ ಇದ್ದೇ ಇರುತ್ತದೆ. ಆದರೆ ಕೊಲ್ಕತ್ತದ ಕಾಲೇಜೊಂದರಲ್ಲಿ ಈ ಪ್ರಶ್ನೆಗಿರುವ ಉತ್ತರದ ಆಯ್ಕೆಯಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಮೊದಲಾದ ಧರ್ಮದ ಜತೆಗೆ ಮಾನವೀಯತೆ (Humanity) ಎಂಬ ಆಯ್ಕೆಯೂ ಇದೆ.

ಕೊಲ್ಕತ್ತದ ಬೆಥೂನ್ ಕಾಲೇಜ್‌ ಪ್ರವೇಶ ಅರ್ಜಿಯಲ್ಲಿ ಈ ರೀತಿ ಧರ್ಮ ನಮೂದಿಸಲಿರುವ ಕಾಲಂನಲ್ಲಿ ಮಾನವೀಯತೆ ಎಂಬ ಆಯ್ಕೆ ನೀಡಿ ಗಮನ ಸೆಳೆದಿದೆ.

2019ರ ಸಾಲಿನ ಪದವಿಪೂರ್ವ ಶಿಕ್ಷಣಕ್ಕೆ ಮೇ. 27ರಂದು ಅರ್ಜಿ ಸ್ವೀಕರಿಸಲು ಆರಂಭವಾಗಿದ್ದು, ಈ ಬಾರಿ ಹೊಸ ಆಯ್ಕೆಯನ್ನು ಸೇರಿಸಲಾಗಿದೆ. ಆನ್‌ಲೈನಲ್ಲಿಯೂ ಅರ್ಜಿ ಲಭ್ಯವಿದೆ.

ಪ್ರವೇಶ ಅರ್ಜಿಯಲ್ಲಿ ಧರ್ಮದ ಹೆಸರನ್ನು ನಮೂದಿಸುವುದಕ್ಕೆ ಕೆಲವು ವಿದ್ಯಾರ್ಥಿಗಳು ಇಷ್ಟಪಡುವುದಿಲ್ಲ. ಅವರ ನಿಲುವುಗಳನ್ನು ನಾವು ಗೌರವಿಸುತ್ತೇವೆ. ಹಾಗಾಗಿ ಮಾನವೀಯತೆಯೇ ಧರ್ಮ ಎಂಬುದಾಗಿ ನಮೂದಿಸುವ ಅವಕಾಶವನ್ನು ಇಲ್ಲಿ ನೀಡಲಾಗಿದೆ. ಈ ರೀತಿಯ ಆಯ್ಕೆಯನ್ನು ಅರ್ಜಿಯಲ್ಲಿ ಸೇರಿಸುವುದಕ್ಕೆ ಆಡಳಿತ ಮಂಡಳಿ ಒಕ್ಕೊರಲಿನಿಂದ ಸಮ್ಮತಿಸಿತ್ತು ಎಂದು ಬೆಥೂನ್ ಕಾಲೇಜಿನ ಪ್ರಾಂಶುಪಾಲೆ ಮಮತಾ ರೇ ಹೇಳಿರುವುದಾಗಿ ದಿ ಮಿಲೇನಿಯಂ ಪೋಸ್ಟ್ ವರದಿ ಮಾಡಿದೆ.

1879ರಲ್ಲಿ ಆರಂಭವಾದ ಬೆಥೂನ್ ಕಾಲೇಜು ಈ ಹಿಂದೆ ಹಿಂದೂ ಫೀಮೇಲ್ ಸ್ಕೂಲ್ ಎಂದು ಕರೆಯಲ್ಪಡುತ್ತಿತ್ತು. NAAC-Grade A ಅರ್ಹತೆ ಪಡೆದ ಮೊದಲ ಮಹಿಳಾ ಕಾಲೇಜು ಇದಾಗಿದೆ.

error: Content is protected !! Not allowed copy content from janadhvani.com