janadhvani

Kannada Online News Paper

ಧಕ್ಷ ಐಪಿಎಸ್​ ಅಧಿಕಾರಿ ಅಣ್ಣಾಮಲೈ ರಾಜೀನಾಮೆ

ಬೆಂಗಳೂರು.ಮೇ,28: ಧಕ್ಷ, ಪ್ರಾಮಾಣಿಕ, ಖಡಕ್​ ಐಪಿಎಸ್​ ಅಧಿಕಾರಿ ಅಣ್ಣಾಮಲೈ ಕಡೆಗೂ ತಾವು ನಿರ್ಧರಿಸಿದಂತೆಯೇ ನಾಗರಿಕ ಸೇವೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇಂದು ಬೆಳಗ್ಗೆ ಪತ್ರಮುಖೇನ ರಾಜ್ಯ ಪೊಲೀಸ್​ ಮಹಾ ನಿರ್ದೇಶಕಿ ನೀಲ್ಮಣಿ ಎನ್​ ರಾಜು ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಈ ಮೂಲಕ ಹತ್ತು ವರ್ಷಗಳ ಪ್ರಾಮಾಣಿಕ ಸೇವೆಗೆ ಅಣ್ಣಾಮಲೈ ಅಂತಿಮ ವಿದಾಯ ಹೇಳಿದ್ದಾರೆ.

ತಮ್ಮ ರಾಜೀನಾಮೆಗೆ ಇದುವರೆಗೂ ನಿಖರ ಕಾರಣವನ್ನು ಅಣ್ಣಾಮಲೈ ಹೇಳದಿದ್ದರೂ ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂಬ ಭರವಸೆ ನೀಡಿದ್ದಾರೆ. ಮಾಧ್ಯಮದ ಜತೆ ಮಾತನಾಡಿದ ಅವರು, ಈಗಾಗಲೇ ರಾಜೀನಾಮೆ ಪತ್ರವನ್ನು ಡಿಜಿ ಮತ್ತು ಐಜಿಪಿ ಅವರಿಗೆ ಸಲ್ಲಿಸಿದ್ದೇನೆ. ಅವರು ವಿವರಣೆ ನೀಡಲು ಕರೆದರೆ, ರಾಜೀನಾಮೆಯನ್ನು ಅಂಗೀಕರಿಸುವಂತೆ ಮನವಿ ಮಾಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಈಗಲೇ ಮಾಧ್ಯಮಕ್ಕೆ ಕಾರಣವನ್ನು ತಿಳಿಸಲು ಸಾಧ್ಯವಿಲ್ಲ ಎಂದ ಅಣ್ಣಾಮಲೈ, ಮೂರು ನಾಲ್ಕು ದಿನಗಳಲ್ಲಿ ಎಲ್ಲಾ ಪ್ರಕ್ರಿಯೆಗಳೂ ಮುಗಿಯಲಿವೆ. ಅದಾದ ನಂತರ ನಾನು ಮಾಧ್ಯಮಕ್ಕೆ ಮಾಹಿತಿ ನೀಡುತ್ತೇನೆ. ಅದಕ್ಕೂ ಮುನ್ನ ನೀಡುವುದು ಸರಿಯಲ್ಲ ಎನ್ನುತ್ತಾರೆ.

ನಿವೃತ್ತಿಯ ನಂತರ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮಾಡಲು ಸಾವಿರವಿದೆ, ಇದಷ್ಟೇ ಜೀವನವಲ್ಲ. ಮುಂದಿನ ಆರು ತಿಂಗಳುಗಳ ಕಾಲ ಏನೂ ಮಾಡುವುದಿಲ್ಲ. ಸ್ವಲ್ಪ ಸಮಯ ರೆಸ್ಟ್​ ಮಾಡುತ್ತೇನೆ. ಹಿಮಾಲಯ ಟ್ರಕ್ಕಿಂಗ್​ಗೆ ಹೋಗುತ್ತೇನೆ. ಅದಾದ ಬಳಿಕ ಮುಂದೆ ಏನು ಮಾಡಬೇಕು ಎಂಬುದನ್ನು ನಿರ್ಧರಿಸುತ್ತೇನೆ ಎಂದಿದ್ದಾರೆ.

ಒಟ್ಟಿನಲ್ಲಿ ತಮ್ಮ ರಾಜೀನಾಮೆಗೆ ಸ್ಪಷ್ಟ ಕಾರಣವನ್ನು ಅಣ್ಣಾಮಲೈ ಬಿಟ್ಟುಕೊಡುತ್ತಿಲ್ಲ. ಇಷ್ಟು ವರ್ಷಗಳಿಂದ ದುಷ್ಟರ ಸಿಂಹಸ್ವಪ್ನರಾಗಿ, ಜನರಿಂದಲೇ ಸಿಂಗಂ ಎಂದು ಕರೆಸಿಕೊಂಡ ಧಕ್ಷ ಅಧಿಕಾರಿ ಇದ್ದಕ್ಕಿದ್ದಂತೆ ಈ ರೀತಿಯ ನಿರ್ಧಾರ ಮಾಡಿರುವುದು ಯಾಕೆ ಎಂಬ ಪ್ರಶ್ನೆ ಈಗ ಅವರ ಅಭಿಮಾನಿಗಳಲ್ಲಿ ಮತ್ತು ಜನರಿಂದ ಕೇಳಿಬರುತ್ತಿದೆ.

ಅಣ್ಣಾಮಲೈ ರಾಜೀನಾಮೆ ನೀಡಬಾರದು, ಅವರು ಸಾರ್ವಜನಿಕ ಜೀವನದಲ್ಲಿ ಇನ್ನಷ್ಟು ಕಾಲ ಇರಬೇಕು ಎಂಬುದಾಗಿಯೂ ಒತ್ತಾಯಗಳು ಕೇಳಿ ಬರುತ್ತಿವೆ. ಆದರೆ ಅಣ್ಣಾಮಲೈ ಮಾತ್ರ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ.

error: Content is protected !! Not allowed copy content from janadhvani.com