janadhvani

Kannada Online News Paper

ಹೃದಯಾಘಾತಕ್ಕೀಡಾಗಿ ತುರ್ತು ಚಿಕಿತ್ಸೆ ಪಡೆಯುವ ವಿದೇಶೀಯರಿಗೆ ಉಚಿತ ಚಿಕಿತ್ಸೆ

ಕುವೈತ್: ಹೃದಯಾಘಾತಕ್ಕೀಡಾಗಿ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟ ವಿದೇಶೀಯರಿಗೆ ಇನ್ನು ಮುಂದೆ ಕುವೈತ್‌ನಲ್ಲಿ ಉಚಿತ ಚಿಕಿತ್ಸೆ ದೊರೆಯಲಿದೆ. ಆರೋಗ್ಯ ಸಚಿವ ಶೈಖ್ ಬಾಸಿಲ್ ಅಸ್ಸ್ವಬಾಹ್ ಈ ಬಗ್ಗೆ ಮೆಡಿಕಲ್ ಬಾಬ್ತಿನಿಂದ ಮುಕ್ತಗೊಳಿಸಿ ಆದೇಶ ನೀಡಿದ್ದಾರೆ.

ಮಾನವೀಯ ದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅರೋಗ್ಯ ಸಚಿವಾಲಯ ವ್ಯಕ್ತಪಡಿಸಿದೆ.ಹೃದಯಾಘಾತ ಸಂಭವಿಸಿ ಆಸ್ಪತ್ರೆಗೆ ತಲುಪುವ ರೋಗಿಗೆ ಚಿಕಿತ್ಸೆ ನೀಡುವ ಡಾಕ್ಟರ್ ಮತ್ತು ಆಸ್ಪತ್ರೆಯ ಅಧಿಕಾರಿಯ ವರದಿಯ ಆಧಾರಲ್ಲಿ ಈ ಪ್ರಯೋಜನ ಲಭಿಸಲಿದೆ. ಎಲ್ಲಾ ವಿಭಾಗದ ವಿದೇಶೀಯರಿಗೂ ಈ ಪ್ರಯೋಜನ ಲಭ್ಯವಾಗಲಿದ್ದು, ಮನೆಕೆಲಸ ಸಹಿತ ಹತ್ತು ವಿಭಾಗದಲ್ಲಿ ಕೆಲಸ ನಿರ್ವಹಿಸುವ ವಿದೇಶೀಯರಿಗೆ ಈ ಹಿಂದೆಯೇ ಉಚಿತ ಚಿಕಿತ್ಸೆಯ ಪ್ರಯೋಜನ ಲಭಿಸುತ್ತಿತ್ತು.

ಆರೋಗ್ಯ ಇಲಾಖೆಯ ಸಿಬ್ಬಂದಿ, ಹನ್ನೆರಡರ ಒಳಗಿನ ಪ್ರಾಯದವರಾದ ಕ್ಯಾನ್ಸರ್ ಪೀಡಿತ ಮಕ್ಕಳು, ಅಭಯ ಕೇಂದ್ರದ ನಿವಾಸಿಗಳು, ಜಿಸಿಸಿ ರಾಷ್ಟ್ರದ ಪೌರರು, ಬಿದೂನಿಗಳು, ದೇಶಕ್ಕೆ ಬಂದಿರುವ ಅಧಿಕೃತ ಸಂಘದ ಪ್ರತಿನಿಧಿಗಳು, ಟ್ರಾನ್ಸಿಟ್ ಯಾತ್ರಿಕರು, ಜೈಲುಗಳಲ್ಲಿರುವ ವಿದೇಶೀ ಖೈದಿಗಳು, ವಿದ್ಯಾಭ್ಯಾಸ ಸಚಿವಾಲಯದ ಪ್ರಾಯೋಜತ್ವದಲ್ಲಿ ಕಲಿಯುತ್ತಿರುವ ವಿದೇಶೀ ವಿದ್ಯಾರ್ಥಿಗಳು ಮುಂತಾದವರಿಗೆ ಸರಕಾರಿ ಆಸ್ಪತ್ರೆಯ ಉಚಿತ ಚಿಕಿತ್ಸೆ ದೊರೆಯಲಿದೆ.

error: Content is protected !! Not allowed copy content from janadhvani.com