janadhvani

Kannada Online News Paper

ಗಲ್ಫ್ ವಲಯವು ಅತ್ಯಂತ ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸುತ್ತಿದೆ- ಕುವೈತ್ ಅಮೀರ್

ಕುವೈತ್ ಸಿಟಿ: ಗಲ್ಫ್ ವಲಯವು ಅತ್ಯಂತ ಗಂಭೀರ ಮತ್ತು ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸುತ್ತಾ ಸಾಗುತ್ತಿದೆ ಎಂದು ಕುವೈತ್ ಅಮೀರ್ ಆತಂಕ ವ್ಯಕ್ತಪಡಿಸಿದ್ದಾರೆ. ಕಾರ್ಯತಂತ್ರ ಪ್ರತಿನಿಧಿಗಳಿಗೆ ಈ ಸನ್ನಿವೇಶದಲ್ಲಿ ದುಪ್ಪಟ್ಟು ಜವಾಬ್ದಾರಿ ಇದ್ದು, ಸಮಾಧಾನಕರ ವಾತಾವರಣವನ್ನು ಮರಳಿಪಡೆಯಲೇ ಬೇಕಿದೆ ಎಂದವರು ತಿಳಿಸಿದ್ದಾರೆ.

ವಿದೇಶಾಂಗ ಸಚಿವಾಲಯದಲ್ಲಿ ಹಮ್ಮಿಕೊಂಡ ರಮಝಾನ್ ಸಂದರ್ಶನ ವೇಳೆ ಅಮೀರ್ ಶೈಖ್ ಅಲ್ ಅಹ್ಮದ್ ಅಲ್ ಜಾಬಿರ್ ಅಲ್ ಸ್ವಬಾಹ್ ಈ ಬಗ್ಗೆ ಮಾತನಾಡುತ್ತಿದ್ದರು. ದೇಶದ ಹಿತವನ್ನು ಮುಂದಿರಿಸಿ ಕಾರ್ಯಾಚರಿಸಬೇಕೆಂದು ಅವರು ವಿದೇಶಾಂಗ ಸಚಿವಾಲಯದ ಸಿಬ್ಬಂದಿಗೆ ತಿಳಿಸಿದ್ದು, ವಲಯದಲ್ಲಿ ಸಮಾಧಾನಕರ ಸನ್ನಿವೇಶವನ್ನು ಮರಳಿಪಡೆಯುವುದು ಸಾಧ್ಯ ಎನ್ನುವ ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ.

ಕಾರ್ಯತಂತ್ರ ರಂಗದಲ್ಲಿನ ಕುವೈತ್ ‌ನ ಕಾರ್ಯವೈಖರಿಯನ್ನು ವಿಶ್ವವು ಅಂಗೀಕರಿಸಿದೆ. ಯಾವುದೇ ಪಕ್ಷ ಸೇರದೆ ಶಾಂತಿಗಾಗಿ ನೆಲೆ ನಿಲ್ಲುವುದು ದೇಶದ ನಿಲುವಾಗಿದೆ ಎಂದು ಅಮೀರ್ ವ್ಯಕ್ತಪಡಿಸಿದರು.

ಯುವರಾಜ ನವಾಫ್ ಅಲ್ ಅಹ್ಮದ್ ಅಲ್ ಸ್ವಾಬಾಹ್ ಜೊತೆಗಿದ್ದರು. ವಿದೇಶಾಂಗ ಸಚಿವ ಶೈಖ್ ಸಬಾಹ್ ಖಾಲಿದ್ ಅಲ್ ಹಮದ್ ಅಸ್ಸಬಾಹ್ ಅಮೀರ್ ಮತ್ತು ಯುವರಾಜರನ್ನು ಬರಮಾಡಿಕೊಂಡರು. ನ್ಯಾಷನಲ್ ಗಾರ್ಡ್ ಉಪ ಅಧಿಕಾರಿ ಶೈಖ್ ಮಿಶ್‌ಅಲ್ ಅಲ್ ಅಹ್ಮದ್ ಅಸ್ಸಬಾಹ್, ಪ್ರಧಾನಮಂತ್ರಿ ಶೈಖ್ ಜಾಬಿರ್ ಮುಬಾರಕ್ ಅಲ್ ಹಮದ್ ಅಸ್ಸಬಾಹ್ ಮುಂತಾವರು ಅಮೀರರನ್ನು ಅನುಗಮಿಸಿದ್ದರು. ಸಭೆಯಲ್ಲಿ ಸ್ಪೀಕರ್ ಮರ್ಝೂಖ್ ಅಲ್ ಗ್ವಾನಿಮ್ ಭಾಗವಹಿಸಿದ್ದರು.

error: Content is protected !! Not allowed copy content from janadhvani.com