janadhvani

Kannada Online News Paper

ಮಹಾಘಟಬಂಧನ್;​ಫಲಿತಾಂಶದ ಬಳಿಕ ಪ್ರಧಾನಿ ಅಭ್ಯರ್ಥಿಯ ಘೋಷಣೆ – ಹೆಚ್​.ಡಿ. ದೇವೇಗೌಡ

ಬೆಂಗಳೂರು (ಮೇ.22); ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಮಹಾಘಟಬಂಧನ್​ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರು? ಎಂಬುದನ್ನು ಘೋಷಿಸಲಾಗುತ್ತದೆ ಎಂದು ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ತಿಳಿಸಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕಳೆದ ಕೆಲ ದಿನಗಳಿಂದ ರಾಷ್ಟ್ರ ರಾಜಕಾರಣದಲ್ಲಿ ಸಕ್ರೀಯರಾಗಿದ್ದಾರೆ. ಬಿಜೆಪಿಯೇತರ ಎಲ್ಲಾ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಮಂಗಳವಾರ ದೆಹಲಿಯಲ್ಲಿ ನಡೆದ ವಿಪಕ್ಷಗಳ ಸಭೆ ಹಾಗೂ ಕೋಲ್ಕತಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆಗಿನ ಚರ್ಚೆ ಮುಗಿಸಿ ನಿನ್ನೆ ಸಂಜೆ ವೇಳೆಗೆ ದೇವೇಗೌಡ ಅವರನ್ನು ಭೇಟಿ ಮಾಡಲು ಚಂದ್ರಬಾಬು ನಾಯ್ಡು ಬೆಂಗಳೂರಿಗೆ ಆಗಮಿಸಿದ್ದರು.

ಚರ್ಚೆಯ ವೇಳೆ ದೇವೇಗೌಡ ಹಾಗೂ ಚಂದ್ರಬಾಬು ನಾಯ್ಡು ಪ್ರಸ್ತುತ ರಾಷ್ಟ್ರ ರಾಜಕೀಯ ಮಹಾಘಟಬಂಧನ್ ಸಾಧ್ಯತೆ? ಹಾಗೂ ದೇಶದಾದ್ಯಂತ ಭುಗಿಲೆದ್ದಿರುವ ಇವಿಎಂ ತಿರುಚುವಿಕೆ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಚರ್ಚೆಯ ಬಳಿಕ ಈ ಕುರಿತು ಮಾತನಾಡಿದ ದೇವೇಗೌಡ, “2009ರಿಂದ ಇವಿಎಂ ಬಗ್ಗೆ ಎಲ್ಲಾ ಪಕ್ಷಗಳು ತಮ್ಮ ತಕರಾರು ಮುಂದಿಡುತ್ತಿವೆ. ಅಂದಿನಿಂದಲೂ ಜೆ.ಡಿ.ಎಸ್ ಪಕ್ಷವೂ ಸಹ ಕೇಂದ್ರ ಚುನಾವಣಾ ಆಯೋಗಕ್ಕೆ ಇವಿಎಂಗಳ ಕುರಿತು ಪತ್ರ ಬರೆಯುತ್ತಿದೆ. ಆದರೆ, ಚುನಾವಣಾ ಆಯೋಗ ಯಾವುದೇ ಸೂಕ್ತ ಕ್ರಮ ಜರುಗಿಸಿಲ್ಲ” ಎಂದು ಆರೋಪಿಸಿದರು. ಅಲ್ಲದೆ ಈ ಕುರಿತು ರಾಷ್ಟ್ರಪತಿಗೂ ಪತ್ರ ಬರೆಯಲಾಗುವುದು ಎಂದು ತಿಳಿಸಿದ್ದಾರೆ.

ಇನ್ನೂ ಮಹಾಘಟಬಂಧನ್​ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿಯೇ? ಎಂಬ ಪತ್ರಕರ್ತರ ಪ್ರಶ್ನೆಗೆ ಚಂದ್ರಬಾಬು ನಾಯ್ಡು ಮುಗುಳ್ನಕ್ಕು ಸುಮ್ಮನಾದರೆ, ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ದೇವೇಗೌಡ, “ಚುನಾವಣೆ ಫಲಿತಾಂಶದ ನಂತರ ಮೈತ್ರಿ ಕೂಟದ ಪ್ರಧಾನಿ ಅಭ್ಯರ್ಥಿ ಯಾರು? ಎಂದು ನಿಶ್ಚಯಿಸಲಾಗುವುದು. ಈ ಕುರಿತು ನಮ್ಮ ಮುಂದಿನ ನಡೆ ಏನು? ಎಂಬುದರ ಕುರಿತು ಚರ್ಚೆ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

error: Content is protected !! Not allowed copy content from janadhvani.com