janadhvani

Kannada Online News Paper

ಚುನಾವಣೆ ಅಕ್ರಮದಲ್ಲಿ ಸುಪ್ರೀಂಕೋರ್ಟ್ ಭಾಗಿಯಾಗಿದೆಯೇ ?- ಉದಿತ್ ರಾಜ್ ಪ್ರಶ್ನೆ

ಬೆಂಗಳೂರು: ಸುಪ್ರೀಂಕೋರ್ಟ್​ ಕೂಡ ಚುನಾವಣೆ ಅಕ್ರಮದಲ್ಲಿ ಭಾಗಿಯಾಗಿದೆ. ಅದಕ್ಕಾಗಿಯೇ ಎಲ್ಲ ಇವಿಎಂಗಳಿಗೆ ಸಮನಾಗಿ ವಿವಿಪ್ಯಾಟ್​ ಸ್ಲಿಪ್​ ನೀಡುವಂತೆ ವಿರೋಧ ಪಕ್ಷಗಳು ಮಾಡಿದ್ದ ಮನವಿಯನ್ನು ತಿರಸ್ಕರಿಸಿದೆ ಎಂದು ಕಾಂಗ್ರೆಸ್ ಮುಖಂಡ ಉದಿತ್​ ರಾಜ್ ಹೇಳುವ ಮೂಲಕ ಹೊಸ ವಿವಾದ ಹುಟ್ಟುಹಾಕಿದ್ದಾರೆ.

ಪ್ರತಿ ವಿವಿಪ್ಯಾಟ್​ ಸ್ಲಿಪ್ ತಾಳೆ ಹಾಕುವ ಕೇಂದ್ರವನ್ನು ಎಲ್ಲೆಡೆ ತೆರೆಯುವಂತೆ ವಿರೋಧ ಪಕ್ಷಗಳು ಆಗ್ರಹ ಮಾಡಿದ್ದವು. ಆದರೆ, ಇದಕ್ಕೆ ಸುಪ್ರೀಂಕೋರ್ಟ್​ ಅಸ್ತು ಎನ್ನಲಿಲ್ಲ. ನಾಳೆ ಲೋಕಸಭೆ ಚುನಾವಣೆಯ ಫಲಿತಾಂಶ ಹೊರಗೆ ಬೀಳಲಿದೆ. ಫಲಿತಾಂಶ ಪ್ರಕಟಕ್ಕೂ ಒಂದು ದಿನದ ಮುಂಚೆ ಉದೀತ್ ರಾಜ್​ ಈ ಹೇಳಿಕ ನೀಡಿದ್ದಾರೆ.

ಕಾಂಗ್ರೆಸ್​ ಹಿರಿಯ ಮುಖಂಡ ಗುಲಾಂ ನಬೀ ಆಜಾದ್​ ಮಂಗಳವಾರ ಚುನಾವಣಾ ಆಯೋಗದೊಂದಿಗೆ ಸಭೆ ನಡೆಸಿದ್ದರು. ಸಭೆ ನಂತರ ಮಾತನಾಡಿದ ಅವರು, ನಾವು ಚುನಾವಣಾ ಆಯೋಗಕ್ಕೆ ಹೇಳಿದ್ದೇವೆ, ವಿವಿಪ್ಯಾಟ್​ ಯಂತ್ರವನ್ನು ಮೊದಲು ಎಣಿಕೆ ಮಾಡಲಿ ಮತ್ತು ಅದರಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದಲ್ಲಿ ಮತ್ತೆ ಮರುಎಣಿಕೆ ಮಾಡಲಿ ಎಂದು ತಿಳಿಸಿದರು.

ಇವಿಎಂಗಳ ಸಾಗಣೆ ಬಗ್ಗೆಯೂ ಪ್ರಶ್ನೆ ಮಾಡಿರುವ ವಿರೋಧ ಪಕ್ಷಗಳು, ಉತ್ತರ ಪ್ರದೇಶದಲ್ಲಿ ರಕ್ಷಣೆ ಇಲ್ಲದೆ ಇವಿಎಂಗಳ ಸಾಗಣೆ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿವೆ.

error: Content is protected !! Not allowed copy content from janadhvani.com