janadhvani

Kannada Online News Paper

ದ.ಕ.ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಬರ “ನಿಮ್ಮನ್ನು ಜನ ಚುನಾಯಿಸಿದ್ದು ಐಶಾರಾಮಿ ಕಾರಿನಲ್ಲಿ ತಿರುಗಾಡಲು ಅಲ್ಲ” ಶಾಸಕರಿಗೆ ಎಚ್ಚರಿಕೆ

ಮಂಗಳೂರು, ಮೇ 13 – ಮಂಗಳೂರು ನಗರ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಹಾಹಾಕಾರ ಹೆಚ್ಚಾಗುತ್ತಿರುವಂತೆಯೇ ಕೆಲವು ಪರಿಸರ ಪ್ರೇಮಿಗಳು ಎತ್ತಿನಹೊಳೆ ವಿಚಾರದಲ್ಲಿ ಜಿಲ್ಲೆಗೆ ಆಗಿರುವ ಅನ್ಯಾಯವನ್ನು ಖಂಡಿಸಿ ನಗರದ ಹಲವೆಡೆ ವ್ಯಂಗ್ಯದಿಂದ ಕೂಡಿರುವ ಭಿತ್ತಿಪತ್ರಗಳನ್ನು ಪ್ರದರ್ಶಿಸಿದ್ದಾರೆ.

ಭಿತ್ತಿಪತ್ರದಲ್ಲಿ ಪ್ರಮುಖವಾಗಿ ಜಿಲ್ಲೆಯ 8 ಶಾಸಕರಿಗೂ ಎಚ್ಚರಿಕೆ ನೀಡಲಾಗಿದೆ. ಕೊಟ್ಟಾರ, ಪಂಪ್‌ವೆಲ್, ಹಂಪನಕಟ್ಟೆ ಮುಂತಾದೆಡೆ ಈ ಭಿತ್ತಿಪತ್ರಗಳು ಪ್ರದರ್ಶನಗೊಂಡಿವೆ. ಜಿಲ್ಲೆಯ ಎಲ್ಲ ಶಾಸಕರ ಹೆಸರು, ಭಾವಚಿತ್ರ ಹಾಕಿ, ನಿಮ್ಮನ್ನು ಜನ ಚುನಾಯಿಸಿದ್ದು 40 ಲಕ್ಷ ರೂ. ಕಾರಿನಲ್ಲಿ ತಿರುಗಾಡಲು ಅಲ್ಲ, ಜಿಲ್ಲೆಯ ಜನರಿಗೆ ಈಗ ನೀರಿಲ್ಲ, ಮೊದಲು ಎತ್ತಿನಹೊಳೆ ವಿರೋಧಿಸಿ ವಿಧಾನಸಭೆಯಲ್ಲಿ ಧರಣಿ ಮಾಡಿ, ಇಲ್ಲವಾದರೆ ರಾಜಿನಾಮೆ ಕೊಟ್ಟು ಧರಣಿ ಕುಳಿತುಕೊಳ್ಳಿ ಎಂದು ಭಿತ್ತಿಪತ್ರವೊಂದರಲ್ಲಿ ಎಚ್ಚರಿಸಲಾಗಿದೆ.

ಇನ್ನೊಂದು ಬ್ಯಾನರ್‌ನಲ್ಲಿ ಮುಖಂಡರಾದ ಡಾ. ಎಂ. ವೀರಪ್ಪ ಮೊಯ್ಲಿ ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರ ಫೊಟೊ ಹಾಕಿ 13 ಸಾವಿರ ಕೋಟಿ ರೂ. ಯೋಜನೆಯ ಕಮಿಷನ್ ಆಸೆಗಾಗಿ ಜಿಲ್ಲೆಯ ಜೀವ ನದಿಯನ್ನು ಸರ್ವನಾಶ ಮಾಡಿ, ಜನರೀಗ ಶೌಚಾಲಯ, ಚರಂಡಿ ನೀರನ್ನು ಶುದ್ಧೀಕರಿಸಿ ಕುಡಿಯುವಂತೆ ಮಾಡಲಾಗಿದೆ. ಇಂತಹ ಘನಂಧಾರಿ ಕೆಲಸ ಮಾಡಿದ ವೀರಪ್ಪ ಮೊಯ್ಲಿ ಹಾಗೂ ಡಿ.ವಿ ಸದಾನಂದ ಗೌಡರ ಜತೆಗೆ ನಿದ್ದೆಯಲ್ಲಿರುವ ಜಿಲ್ಲೆಯ ಪ್ರಜೆಗಳಿಂದ ಹಾರ್ಧಿಕ ಸ್ವಾಗತ ಎಂದು ವ್ಯಂಗ್ಯವಾಡಲಾಗಿದೆ.

ಅನಧಿಕೃತ ಫ್ಲೆಕ್ಸ್ ತೆರವು ಮಾಡದೆ ಎತ್ತಿನಹೊಳೆ ಕುರಿತು ಅಳವಡಿಸಿರುವ ಭಿತ್ತಿಪತ್ರಗಳನ್ನು ತೆರವುಗೊಳಿಸಿದರೆ ಪರಿಣಾಮ ನೆಟ್ಟಗಿರದು ಎಂದು ಮಂಗಳೂರು ಮಹಾನಗರಪಾಲಿಕೆ ಅಧಿಕಾರಿಗಳಿಗೂ ಇದೇ ಭಿತ್ತಿಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.

error: Content is protected !! Not allowed copy content from janadhvani.com