janadhvani

Kannada Online News Paper

ಭಯೋತ್ಪಾದಕ ದಾಳಿಗೆ ಭಾರತದಲ್ಲಿ ತರಬೇತಿ- ಶ್ರೀಲಂಕಾ ಸೇನಾ ಮುಖ್ಯಸ್ಥ

ಕೊಲಂಬೋ (ಮೇ.4) : ಶ್ರೀಲಂಕಾದಲ್ಲಿ ಏಪ್ರಿಲ್ 21 ರ ಈಸ್ಟರ್ ಭಾನುವಾರದ ದಿನದ ಪ್ರಾರ್ಥನೆ ಸಮಯದಲ್ಲಿ ಚರ್ಚ್ನಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟಿಸುವ ಮೂಲಕ 250 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣರಾದ ಭಯೋತ್ಪಾದಕರು ದಾಳಿಗೂ ಮುನ್ನ ಭಾರತದಲ್ಲಿ ತರಬೇತಿ ಪಡೆದಿದ್ದಾರೆ ಎಂದು ಶ್ರೀಲಂಕಾ ಸೇನಾ ಮುಖ್ಯಸ್ಥ ಮಹೇಶ್ ಸೇನಾನಾಯಕ ಆರೋಪಿಸಿದ್ದಾರೆ.

ಅಂತಾರಾಷ್ಟ್ರೀಯ ಬಿಬಿಸಿ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಶ್ರೀಲಂಕಾ ಸೇನಾ ಮುಖ್ಯಸ್ಥ ಮಹೇಶ್ ಸೇನಾನಾಯಕ, “ಲಂಕಾದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿರುವ ಉಗ್ರರು ದಾಳಿಗೂ ಮುಂಚೆ ಭಾರತದ ಬೆಂಗಳೂರು ಕೇರಳ ಹಾಗೂ ಕಾಶ್ಮೀರದಲ್ಲಿ ಉಗ್ರರಿಂದ ತರಬೇತಿ ಪಡೆದಿರುವ ಸಾಧ್ಯತೆ ಇದೆ. ಈ ಕುರಿತು ಗೂಢಚಾರಿ ಇಲಾಖೆಗೆ ಮಾಹಿತಿ ಲಭ್ಯವಾಗಿದೆ” ಎಂದು ಅವರು ತಿಳಿಸಿದ್ದಾರೆ.

“ರಿಯಾಝ್ ಅಬುಬಕ್ಕರ್ ಎಂಬ ಉಗ್ರನನ್ನು ಬಂಧಿಸಿದ ನಂತರ ಈ ದಾಳಿಯ ಹಿಂದೆ ಇಸ್ಲಾಮಿಕ್ ಸ್ಟೇಟ್ ಉಗ್ರರ ಕೈವಾಡ ಇರುವ ಕುರಿತ ಮಾಹಿತಿ ಖಚಿತವಾಗಿತ್ತು. ಅಲ್ಲದೆ ಶ್ರೀಲಂಕಾದ ರಾಷ್ಟ್ರೀಯ ತನಿಖಾ ದಳ ತಮಿಳುನಾಡಿನಲ್ಲಿ ಸಾಕಷ್ಟು ದಾಳಿಗಳನ್ನು ಸಂಘಟಿಸಿದ್ದು, ಇಸ್ಲಾಮಿಕ್ ಸ್ಟೇಟ್ ಉಗ್ರರು ತಮಿಳುನಾಡಿನಿಂದ ಲಂಕಾ ದಾಳಿಯನ್ನು ಸಂಘಟಿಸಿದ್ದಾರೆ. ಅಲ್ಲದೆ ತಮಿಳುನಾಡಿನಲ್ಲಿ ಸಾಕಷ್ಟು ಸಂಖ್ಯೆಯ ಸ್ಲೀಪರ್ ಸೆಲ್ಗಳು ಕಾರ್ಯನಿರತರಾಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ” ಎಂದಿದ್ದಾರೆ.

ಅಲ್ಲದೆ “ಉಗ್ರ ರಿಯಾಝ್ ಅಬುಬಕ್ಕರ್ ಹಾಗೂ ಆತ್ಮಹತ್ಯಾ ಬಾಂಬರ್ಗಳಾದ ಝಹ್ರಾನ್ ಹಾಶಿಮ್ ಶ್ರೀಲಂಕಾದಲ್ಲಿ ಬಾಂಬ್ ದಾಳಿ ಸಂಘಟಿಸುವ ಮುನ್ನ ಕೇರಳದಲ್ಲಿ ತರಬೇತಿ ಪಡೆದಿದ್ದರು. ಈ ಕುರಿತು ಗೂಢಚಾರಿ ಇಲಾಖೆ ಸಾಕ್ಷಿ ಸಮೇತ ಮಾಹಿತಿ ನೀಡಿದೆ” ಎಂದು ಅವರು ತಿಳಿಸಿದ್ದಾರೆ.

ಏಪ್ರಿಲ್ 21 ರಂದು ಉಗ್ರಗಾಮಿಗಳು ಶ್ರೀಲಂಕಾದ ಚರ್ಚ್ ಮೇಲೆ ಸಂಘಟಿಸಿದ್ದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಸುಮಾರು 250ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಈ ದಾಳಿಗೆ ಶ್ರೀಲಂಕಾ ರಕ್ಷಣಾ ವ್ಯವಸ್ಥೆಯೇ ಕಾರಣ ಎಂದು ಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ದೂಷಿಸಿದ್ದರು.

error: Content is protected !! Not allowed copy content from janadhvani.com