janadhvani

Kannada Online News Paper

ಸರ್ಜಿಕಲ್‌ ಸ್ಟ್ರೈಕ್‌ ಗಳ ಅವಶ್ಯತೆಯಿರಲಿಲ್ಲ: ಸಾಧ್ವಿ ಪ್ರಜ್ಞಾ ಶಾಪ ಹಾಕಿದರೆ ಸಾಕು-ದಿಗ್ವಿಜಯ್‌ ಸಿಂಗ್‌

ಭೋಪಾಲ್‌: ಹುತಾತ್ಮ ಪೊಲೀಸ್‌ ಅಧಿಕಾರಿ ಹೇಮಂತ್‌ ಕರ್ಕರೆ ಸತ್ತಿದ್ದು ನನ್ನ ಶಾಪದಿಂದ ಎಂದು ಹೇಳಿಕೆ ನೀಡಿದ್ದ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್ ಅವರಿಗೆ ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ತಿರುಗೇಟು ನೀಡಿದ್ದು, ಒಂದು ವೇಳೆ ಸಾಧ್ವಿ ಅವರೇನಾದರೂ ಮಸೂದ್‌ ಅಜರ್‌ಗೆ ಶಾಪ ನೀಡಿದ್ದರೆ, ನಿರ್ದಿಷ್ಟ ದಾಳಿ(ಸರ್ಜಿಕಲ್‌ ಸ್ಟ್ರೈಕ್‌)ಗಳ ಅವಶ್ಯತೆಯೇ ಇರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಭೋಪಾಲ್‌ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆಗಿರುವ ದಿಗ್ವಿಜಯ್‌ ಸಿಂಗ್‌ ಅವರೆದುರು ಸಾಧ್ವಿ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.

ಇಲ್ಲಿನ ಅಶೋಕ ಗಾರ್ಡನ್‌ನಲ್ಲಿ ನಡೆದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಸಿಂಗ್‌, ‘ದೇಶಕ್ಕಾಗಿ ಮಹಾತ್ಯಾಗವನ್ನು ಮಾಡಿ ಹುತಾತ್ವ ಎನಿಸಿಕೊಂಡಿರುವ ಭಯೋತ್ಪಾದನೆ ನಿಗ್ರಹ ದಳದ(ಎಟಿಎಸ್‌) ಮುಖ್ಯಸ್ಥ ಕರ್ಕರೆ ಅವರಿಗೆ ಶಾಪ ನೀಡಿದ್ದಾಗಿ ಸಾಧ್ವಿ ಅವರು ಹೇಳಿಕೊಂಡಿದ್ದಾರೆ. ಒಂದು ವೇಳೆ ಅವರು(ಸಾಧ್ವಿ) ಅವರೇನಾದರೂ ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಷ್‌–ಎ–ಮೊಹಮ್ಮದ್‌ ನಾಯಕ ಮಸೂದ್‌ ಅಜರ್‌ಗೆ ಶಾಪ ನೀಡಿದ್ದರೆ, ನಿರ್ದಿಷ್ಟ ದಾಳಿಗಳನ್ನು ಮಾಡಬೇಕಾದ ಅಗತ್ಯವೇ ಇರಲಿಲ್ಲ’ ಎಂದು ಕುಟುಕಿದರು.

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೂ ಹರಿಹಾಯ್ದ ಸಿಂಗ್‌, ‘ಭಯೋತ್ಪಾದಕರು ನರಕದಲ್ಲಿ ಅಡಗಿಕೊಂಡಿದ್ದರೂ ಹುಡುಕಿ ಬೇಟೆಯಾಡುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ದೇಶದಲ್ಲಿ ಪುಲ್ವಾಮಾ, ಪಠಾಣ್‌ಕೋಟ್‌, ಉರಿ ದಾಳಿಗಳು ನಡೆದಾಗ ಪ್ರಧಾನಿ ಎಲ್ಲಿಹೋಗಿದ್ದರು ಎಂದು ಕೇಳಲು ಬಯಸುತ್ತೇನೆ. ಇಂತಹ ದಾಳಿಗಳನ್ನು ತೊಡೆದುಹಾಕಲು ನಮ್ಮಿಂದೇಕೆ ಸಾಧ್ಯವಾಗಲಿಲ್ಲ’ ಎಂದು ಪ್ರಶ್ನಿಸಿದ್ದಾರೆ.

ಹಿಂದೂ–ಮುಸ್ಲಿಂ–ಕ್ರೈಸ್ತರನ್ನು ಸಹೋದರರು ಎನ್ನುತ್ತಾ ಮಾತು ಮುಂದುವರಿಸಿದ, ‘ಧರ್ಮ ಅಪಾಯದಲ್ಲಿದೆ ಅದಕ್ಕಾಗಿ ಹಿಂದೂಗಳು ಒಂದಾಗಬೇಕು ಎಂದು ಇವರು(ಬಿಜೆಪಿ) ಹೇಳುತ್ತಾರೆ. ಈ ದೇಶ ಸುಮಾರು 500 ವರ್ಷಗಳ ಕಾಲ ಮುಸಲ್ಮಾನರ ಆಡಳಿತಕ್ಕೆ ಒಳಪಟ್ಟಿದೆ. ಆದರೆ ಯಾವುದೇ ಧರ್ಮಕ್ಕೂ ಹಾನಿ ಮಾಡಿಲ್ಲ ಎಂಬುದನ್ನು ಅವರಿಗೆ ಹೇಳಲು ಇಚ್ಛಿಸುತ್ತೇನೆ. ಧರ್ಮವನ್ನು ಮಾರಾಟ ಮಾಡುವವರ ಬಗ್ಗೆ ಎಚ್ಚರದಿಂದಿರಿ’ ಎಂದೂ ಕರೆ ನೀಡಿದರು.

‘ನಮ್ಮ ಧರ್ಮದಲ್ಲಿ ನಾವು ‘ಹರ ಹರ ಮಹದೇವ್‌’ ಎನ್ನುತ್ತೇವೆ. ಆದರೆ, ಬಿಜೆಪಿ ಅವರು ‘ಹರ ಹರ ಮೋದಿ’ ಎನ್ನುವ ಮೂಲಕ ನಮ್ಮ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿದ್ದಾರೆ. ಗೂಗಲ್‌ನಲ್ಲಿ ಸುಳ್ಳುಗಾರ(ಫೇಕು) ಎಂದು ಹುಡುಕಿದರೆ ಯಾರ ಫೋಟೋ ಕಾಣುತ್ತದೆ ಎಂಬುದು ನಮ್ಮೆಲ್ಲರಿಗೂ ಗೊತ್ತು’ ಎಂದು ಮೋದಿ ಅವರ ಕಾಲೆಳೆದರು.

ಭೋಪಾಲ್‌ನಿಂದ ನಾನು ಸ್ಪರ್ಧಿಸುತ್ತಿದ್ದೇನೆ ಎಂದು ಗೊತ್ತಾದ ಮೇಲೆ ಮಾಮ(ಮೋದಿ ಅವರನ್ನುದ್ದೇಶಿಸಿ) ಭಯಗೊಂಡಿದ್ದಾರೆ. ಉಮಾ ಭಾರತಿ ಸ್ಪರ್ಧಿಸಲು ನಿರಾಕರಿಸಿದರು. ಗೌರ್‌(ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಬಾಬುಲಾಲ್‌ ಗೌರ್‌) ತಮ್ಮ ಆರೋಗ್ಯ ಸರಿ ಇಲ್ಲ ಎಂದು ಹೇಳಿ ನುಣುಚಿಕೊಂಡರು. ಹಾಗಾಗಿ ನಾಮಪತ್ರ ಸಲ್ಲಿಸಲು ಕೊನೆಯ ದಿನ ಇಲ್ಲಿಂದ ಸಾಧ್ವಿ ಕಣಕ್ಕಿಳಿಯುವುದಾಗಿ ಬಿಜೆಪಿ ಪ್ರಕಟಿಸಿತು’ ಎಂದು ಹರಿಹಾಯ್ದರು.

ಮೇ 12ರಂದು ಮತದಾನ ನಡೆಯಲಿದ್ದು, ಅದೇತಿಂಗಳ 23ರಂದು ಫಲಿತಾಂಶ ಪ್ರಕಟವಾಗಲಿದೆ.‌

error: Content is protected !! Not allowed copy content from janadhvani.com